ಮೈಸೂರು ದಸರಾಗೆ ‘ಸುವರ್ಣ ರಥ’ದಲ್ಲಿ ಬಂದ ಪ್ರವಾಸಿಗರಿಗೆ ಅದ್ಧೂರಿ ಸ್ವಾಗತ
ಮೈಸೂರು, ಸೆ.24- ದಸರಾ ಮಹೋತ್ಸವದ ಅಂಗವಾಗಿ ಬೆಂಗಳೂರಿನಿಂದ ಮೈಸೂರಿಗೆ ಒಂದು ದಿನದ ಪ್ಯಾಕೇಜ್ ಟ್ರಿಪ್ ಆಯೋಜಿಸಲಾಗಿದ್ದು , 20 ಮಂದಿ ಪ್ರವಾಸಿಗರು ಇಂದು ಬೆಳಗ್ಗೆ ಮೈಸೂರಿಗೆ ಬಂದಿಳಿದಿದ್ದಾರೆ. ಜಿಲ್ಲಾಡಳಿತದ ವತಿಯಿಂದ 20 ಮಂದಿ ಪ್ರವಾಸಿಗರನ್ನು ಅದ್ಧೂರಿಯಾಗಿ ಸ್ವಾಗತಿಸಿ ಹಣೆಗೆ ತಿಲಕ ಇಟ್ಟು ಮಹಿಳೆಯರಿಗೆ ಮಲ್ಲಿಗೆ ಹೂವು, ಉಳಿದವರಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಲಾಯಿತು. ಇದೇ ವೇಳೆ ವೀರಗಾಸೆ, ಕಂಸಾಳೆ, ಜಾನಪದ ಕಲಾತಂಡಗಳನ್ನು ಬರಮಾಡಿಕೊಳ್ಳಲಾಯಿತು. ಸುವರ್ಣ ರಥದಲ್ಲಿ ಬಂದ ಪ್ರವಾಸಿಗರು ಜಾನಪದ ಕಲಾ ತಂಡದೊಂದಿಗೆ ಹೆಜ್ಜೆ ಹಾಕಿ ನರ್ತಿಸಿ ಸಂತೋಷಪಟ್ಟರು. ಪ್ರವಾಸಿಗರಾದ ಪುರುಷೋತ್ತಮ್, ಸ್ವರ್ಣ ಗೀತಾ ಅವರು ಸುವರ್ಣ ರಥದ ಪ್ರಯಾಣದ ಕ್ಷಣಗಳನ್ನು ಹಂಚಿಕೊಂಡರು.
ಹೈದರಾಬಾದ್ ಮೂಲದ ಪ್ರವಾಸಿ ಸತ್ಯನಾರಾಯಣ ಅವರು, ಸುವರ್ಣ ರಥದಲ್ಲಿ ದಸರಾ ವೈಭವ ನೋಡಲು ಬಂದಿರುವುದು ಖುಷಿಕೊಟ್ಟಿದೆ. ಕಡಿಮೆ ವೆಚ್ಚದಲ್ಲಿ ಒಂದು ದಿನದ ಪ್ರವಾಸ ಆಯೋಜಿಸಿರುವ ಸಂತಸ ತಂದಿದೆ ಎಂದು ಹೇಳಿದರು. ಅಮೆರಿಕದಿಂದ ಬಂದಿದ್ದ ಪ್ರವಾಸಿಗ ಕಿಶೋರ್, ಜಾನಪದ ಕಲಾತಂಡದೊಂದಿಗೆ ನೃತ್ಯ ಮಾಡಿ ಸಂತೋಷಪಟ್ಟು, ನನ್ನ ತಂದೆ 75 ವರ್ಷದ ಸತ್ಯನಾರಾಯಣ್, ಮಗ 7 ವರ್ಷದ ಅರ್ಜುನ್ ಪ್ರವಾಸಕ್ಕೆ ಆಗಮಿಸಿದ್ದೇವೆ. ಮೈಸೂರು ದಸರಾ ಬಗ್ಗೆ ಕೇಳಿದ್ದೆವು. ಅದನ್ನು ನೋಡಲೇಬೇಕೆಂಬ ಆಸೆಯಿಂದ ವೆಬ್ಸೈಟ್ ಮೂಲಕ ಬುಕ್ ಮಾಡಿ ಬಂದಿರುವುದಾಗಿ ತಿಳಿಸಿದರು.
ಇದೇ ವೇಳೆ ಪ್ರವಾಸೋದ್ಯಮ ಇಲಾಖೆಯ ಮಾನೇಜರ್ ಡೈರೆಕ್ಟರ್ ಮಾತನಾಡಿ,ಕಳೆದ ಬಾರಿ ದಸರಾದಲ್ಲಿ ಐದು ಟ್ರಿಪ್ ಮಾಡಬೇಕಿತ್ತು. ಆದರೆ ಆಗಲಿಲ್ಲ. ಈ ಬಾರಿ ಎರಡು ದಿನ ಪ್ರವಾಸ ಆಯೋಜಿಸಿದ್ದೇವೆ. ಉತ್ತಮ ಪ್ರತಿಕ್ರಿಯೆ ಬಂದಿದ್ದು , ಮುಂದಿನ ವಾರ ಸೆ.29ರಂದು 80 ಮಂದಿ ಪ್ರವಾಸಿಗರು ಟಿಕೆಟ್ ಪಡೆದಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಂದೀಪ್ ಮತ್ತಿತರರು ಉಪಸ್ಥಿತರಿದ್ದರು.