ಮೈಸೂರು ನಗರ ಸ್ತಬ್ಧ : ಬಂದ್‍ಗೆ ಉತ್ತಮ ಪ್ರತಿಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

mysore-7

ಮೈಸೂರು, ಸೆ.9- ಕಾವೇರಿ ಬಂದ್‍ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನ್ಯಾಯಾಲಯದ ಬಳಿ ವಿವಿಧ ಕನ್ನಡ ಪರ ಸಂಘಟನೆಗಳು, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಅಣುಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.  ಮತ್ತೊಂದೆಡೆ ಪ್ರತಿಭಟನಾಕಾರರು ಖಾಲಿ ಕೊಡಗಳ ಪ್ರದರ್ಶನ ನಡೆಸಿ ನಮಗೇ ನೀರಿಲ್ಲ, ನಿಮಗೆಲ್ಲಿಂದ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ನಗರದ ನ್ಯಾಯಾಲಯ ವೃತ್ತದ ಬಳಿ ಬ್ರಾಹ್ಮಣರ ಸಂಘದ ವತಿಯಿಂದ ಸಾಮೂಹಿಕ ಸಂಧ್ಯಾವಂದನೆ ನಡೆಸಲಾಯಿತು. ಮೈಸೂರಿನ ಕೂಟಗಳ್ಳಿ, ಚಾಮುಂಡಿಪುರಂ, ವಿದ್ಯಾರಣ್ಯಪುರಂ, ವಿಜಯನಗರ, ಕುವೆಂಪು ನಗರ, ಸರಸ್ವತಿಪುರಂ ಸೇರಿದಂತೆ ವಿವಿಧೆಡೆ ರಸ್ತೆ ಮಧ್ಯೆ ಪ್ರತಿಭಟನಾಕಾರರು ಟಯರ್‍ಗೆ ಬೆಂಕಿ ಹಚ್ಚಿ ತಮಿಳುನಾಡು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
mysore-3
ಆ್ಯಂಬುಲೆನ್ಸ್‍ಗೂ ತಟ್ಟಿದ ಬಂದ್ ಬಿಸಿ: ಇಂದು ಬೆಳಗ್ಗೆ ನಗರದ ಧನ್ವಂತರಿ ರಸ್ತೆಯಲ್ಲಿರುವ ಗಣೇಶ ಪೆಟ್ರೋಲ್ ಬಂಕ್‍ಗೆ ಡೀಸಲ್ ಹಾಕಿಸಿಕೊಳ್ಳಲು ಬಂದ ಆ್ಯಂಬುಲೆನ್ಸ್‍ಗೆ, ಬಂಕ್‍ನವರು ಇಂದು ಬಂದ್ ಹಿನ್ನೆಲೆಯಲ್ಲಿ ಡೀಸಲ್ ಹಾಕುವುದಿಲ್ಲ ಎಂದು ಹೇಳಿದಾಗ ಅಲ್ಲೇ ಪ್ರತಿಭಟನೆ ನಡೆಸುತ್ತಿದ್ದ ಕೆಲವು ಸಂಘಟನೆಗಳು, ಈ ವಾಹನ ತುರ್ತು ಕೆಲಸ ಮಾಡುವುದರಿಂದ ಆ್ಯಂಬುಲೆನ್ಸ್‍ಗಳಿಗೆ ಡೀಸಲ್ ಹಾಕಿ ಎಂದು ಮನವೊಲಿಸುವಲ್ಲಿ ಯಶಸ್ವಿಯಾದರು.ನಗರ ಮತ್ತು ಹೊರವಲಯದಲ್ಲೂ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತ್ತೊಂದೆಡೆ ಬಂದ್ ಬಿಸಿ ಚಾಮುಂಡಿ ಬೆಟ್ಟಕ್ಕೂ ತಟ್ಟಿದ್ದು, ಇಂದು ಶುಕ್ರವಾರವಾದ್ದರಿಂದ ನೂರಾರು ಭಕ್ತರು ದೇವಿ ದರ್ಶನಕ್ಕೆ ಆಗಮಿಸುತ್ತಿದ್ದರು. ಆದರೆ ಬಂದ್ ಹಿನ್ನೆಲೆಯಲ್ಲಿ ಯಾವುದೇ ವಾಹನ ಸೌಲಭ್ಯವಿಲ್ಲದ ಕಾರಣ ಭಕ್ತಾದಿಗಳಿಲ್ಲದೆ ಚಾಮುಂಡಿ ಬೆಟ್ಟ ಬಣಗುಡುತ್ತಿತ್ತು.

mysore-2
ಮೈಸೂರು ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಮಹಾನಗರ ಪಾಲಿಕೆ, ನಗರದ ಬಹುತೇಕ ಸರ್ಕಾರಿ ಕಚೇರಿಗಳು ಬೆಳ್ಳಂಬೆಳಗ್ಗೆಯೇ ತೆರೆದು ಸ್ವಚ್ಛಗೊಳಿಸಿ ಮುಖ್ಯದ್ವಾರವನ್ನು ಮುಚ್ಚಲಾಗಿತ್ತು.ಸ್ವಂತ ವಾಹನವುಳ್ಳ ಸಿಬ್ಬಂದಿ ಮಾತ್ರ ಕಚೇರಿಗೆ ಆಗಮಿಸಿದ್ದರು. ಇನ್ನುಳಿದಂತÉ ಕಚೇರಿಯ ಮೇಲಧಿಕಾರಿಗಳು ಹೊರತುಪಡಿಸಿದರೆ ಸಿಬ್ಬಂದಿಗಳ ಹಾಜರಾತಿ ಕಡಿಮೆಯಾಗಿದ್ದು ಕಂಡುಬಂತು.ಜಿಲ್ಲಾಡಳಿತ ವತಿಯಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಯಾವುದೇ ಶಿಕ್ಷಣ ಸಂಸ್ಥೆಗಳು ತೆರೆದಿರಲಿಲ್ಲ. ನಗರದ ಕೆಲವು ರಸ್ತೆಗಳಲ್ಲಿ ಹಿರಿಯರು-ಕಿರಿಯರು ಎನ್ನದೆ ಕ್ರಿಕೆಟ್ ಆಟ ವಾಡುತ್ತಿದ್ದು, ಕಂಡುಬಂತು.ಪ್ರತಿಬಾರಿ ಬಂದ್ ವೇಳೆ ಆಟೋ ಚಾಲಕರು ಪ್ರಯಾಣಿಕರಿಂದ ಸುಲಿಗೆ ಮಾಡುತ್ತಾರೆ ಎಂಬ ಆರೋಪ ಕೇಳಿ ಬರುತ್ತಿತ್ತು. ಆದರೆ ಇಂದು ಆಟೋ ಚಾಲಕರು, ಟ್ಯಾಕ್ಸಿ, ಕ್ಯಾಬ್ ಚಾಲಕರು ಸಂಪೂರ್ಣ ಬಂದ್‍ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ನಗರದಾದ್ಯಂತ ಎಲ್ಲಾ ರಸ್ತೆಗಳು ಬಿಕೋ ಎನ್ನುತ್ತಿದ್ದವು.

mysore-4
ಹಲವು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಗರದ ಕೋಟೆ ಆಂಜನೇಯ ದೇವಾಲಯದ ಬಳಿ ಸೇರಿ ಅಲ್ಲಿಂದ ಮೆರವಣಿಗೆ ಹೊರಟು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ ಕನ್ನಡ ಪರ ಸಂಘಟನೆಗಳು ನಗರದ ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ನೀರು ಸ್ಥಗಿತಕ್ಕೆ ಒತ್ತಾಯಿಸಿದರು.

 

mysore-5

ಪರದಾಟ:

ಇಂದು ಬಂದ್ ಹಿನ್ನೆಲೆಯಲ್ಲಿ ರಾತ್ರಿಯೇ ಪ್ರಯಾಣ ಬೆಳೆಸಿ ಬೆಳಗಿನ ಜಾವ ಮೈಸೂರು ನಿಲ್ದಾಣಕ್ಕೆ ಬಂದು ತಲುಪಿದ ಪ್ರಯಾಣಿಕರು ತಮ್ಮ ಮನೆಗಳಿಗೆ ಹೋಗಲು ಯಾವುದೇ ವಾಹನಗಳಿಲ್ಲದೆ ಪರದಾಡುವಂತಾಯಿತು. ಇನ್ನು ಕೆಲ ಪ್ರಯಾಣಿಕರು ತಮ್ಮ ಸಂಬಂಧಿಕರನ್ನು ಕರೆಸಿಕೊಂಡು ಸ್ವಂತ ವಾಹನಗಳಲ್ಲಿ ಮನೆಗೆ ಸೇರಿಕೊಂಡರು.

ಬಂದೋಬಸ್ತ್:

ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ರೈಲ್ವೆ ನಿಲ್ದಾಣ, ಸಬರ್ ಬಸ್ ನಿಲ್ದಾಣ, ಬಸ್ ನಿಲ್ದಾಣ, ಅಶೋಕ ರಸ್ತೆಯಲ್ಲಿರುವ ಮುಖ್ಯ ಅಂಚೆ ಕಚೇರಿ, ಮೈಸೂರು ಅರಮನೆ, ಮೃಗಾಲಯ, ಆಕಾಶವಾಣಿ, ನ್ಯಾಯಾಲಯ, ಕೇಂದ್ರ ಸರ್ಕಾರದ ಕಚೇರಿಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.ನಗರದ ಆಯಕಟ್ಟಿನ ಸ್ಥಳಗಳಲ್ಲಿ ನಿರಂತರ ಪೊಲೀಸ್ ವಾಹನಗಳು ಗಸ್ತು ತಿರುಗುತ್ತಿದ್ದವು.

 

 

► Follow us on –  Facebook / Twitter  / Google+

Facebook Comments

Sri Raghav

Admin