ಮೈಸೂರು : ಬಿಜೆಪಿ ಮುಖಂಡ ರಾಜು ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

BJP-Raju

ಮೈಸೂರು, ಆ.20- ಬಿಜೆಪಿ ಮುಖಂಡ ರಾಜು ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದು, ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಮೂಲತಃ ಹುಣಸೂರಿನವನಾದ ಶಾಂತಿನಗರದ ಅಬೀದ್ಪಾಷ(34), ಕಲ್ಯಾಣಗಿರಿಯ ಅಯೂಬ್ಖಾನ್(27), ಅಜೀಜ್ಸೇಠ್ ನಗರದ ಮಹಮದ್ ಹನೀಫ್ (36) ಹಾಗೂ ಗೌಷಿಯ ನಗರದ ಹಮೀದ್ ಖಾನ್ ಬಂಧಿತ ಆರೋಪಿಗಳು.  ಪತ್ರಿಕಾಗೋಷ್ಠಿಯಲ್ಲಿಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಈ ವಿಷಯ ತಿಳಿಸಿದರು.  ಮಾ.13ರಂದು ನಗರದ ಉದಯಗಿರಿಯ ಎಂ.ಜಿ.ರಸ್ತೆಯಲ್ಲಿರುವ ವಿನಾಯಕ ಟೀ ಸ್ಟಾಲ್ ಬಳಿ ಟೀ ಕುಡಿಯುತ್ತಿದ್ದಾಗ ಬಿಜೆಪಿ ಮುಖಂಡ ರಾಜು ಅವರನ್ನು ಬರ್ಬರವಾಗಿ ಕೊಲೆಯಾಗಿತ್ತು.

ವಿವರ:

ಕೋಮು ಗಲಭೆ ಹಿನ್ನೆಲೆಯಲ್ಲಿ ತಾನು ರಾಜುನನ್ನು ಕೊಲೆ ಮಾಡಿದ್ದಾಗಿ ಪ್ರಕರಣದ ಪ್ರಮುಖ ಆರೋಪಿ ಅಬೀದ್ ಪಾಷ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಅಬೀದ್ಪಾಷ ರಾಜು ಕೊಲೆ ಸೇರಿದಂತೆ ಹತ್ತು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ದಯಾನಂದ್ ತಿಳಿಸಿದರು. ಈತ 2010ರಲ್ಲಿ ಹುಣಸೂರಿನ ತ್ಯಾಗರಾಜಪಿಳ್ಳೆ ಹಾಗೂ ಇಬ್ಬರು ಯುವಕರನ್ನು ಅಪಹರಿಸಿ ಹತ್ಯೆ ಮಾಡಿದ್ದ. ಮಂಗಳೂರಿನ ಮೂಡಬಿದಿರೆಯಲ್ಲಿ ವಕೀಲ ಶಾಂತಿಪ್ರಸಾದ್ ಹೆಗ್ಗಡೆ ಹಾಗೂ ಮಂಗಳೂರು ಉತ್ತರ ಸ್ಟೇಷನ್ ವ್ಯಾಪ್ತಿಯ ವಕೀಲ ಜಗದೀಶ್ವರ ಎಂಬುವರ ಕೊಲೆಗೂ ಯತ್ನಿಸಿದ್ದ. 2008ರಲ್ಲಿ ನಗರದ ರಾಜೀವ್ ನಗರದ ಹೇರ್ಕಟಿಂಗ್ ಅಂಗಡಿ ಮಾಲೀಕ ಶಶಿಕುಮಾರ್ ಎಂಬಾತನನ್ನು  ಕೊಂದಿದ್ದ.

2009ರಲ್ಲಿ ಲಷ್ಕರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಜೆಪಿ ಮುಖಂಡರಾದ ಆನಂದಪೈ ಮತ್ತು ರಮೇಶ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಎನ್.ಆರ್.ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಬಿಜೆಪಿ ಮುಖಂಡ ಗಿರಿಧರ್ ಹಾಗೂ ಆತನ ಸ್ನೇಹಿತರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದ. ಮಂಡಿ ಠಾಣೆ ವ್ಯಾಪ್ತಿಯ ಆಶೋಕ್ ರಸ್ತೆಯಲ್ಲಿರುವ ರಮೇಶ್ ಬುಕ್ ಸ್ಟಾಲ್ ಮಾಲೀಕರಾದ ಸತೀಶ್ ಹಾಗೂ ಹರೀಶ್ ಎಂಬುವರ ಮೇಲೂ ಹಲ್ಲೆ ನಡೆಸಿದ್ದ, ಈ ಪ್ರಕರಣದಲ್ಲಿ ಹರೀಶ್ ಮೃತಪಟ್ಟಿದ್ದರು. ಮೇಲ್ಕಂಡ ಎಲ್ಲಾ ಕೃತ್ಯಗಳನ್ನು ಮತೀಯ ದ್ವೇಶದ ಹಿನ್ನೆಲೆಯಲ್ಲಿ ಎಸಗಿರುವುದಾಗಿ ಅಬೀದ್ಪಾಷ ವಿಚಾರಣೆ ವೇಳೆ ಹೇಳಿದ್ದಾನೆ. ಆತ ಕಟ್ಟಿರುವ ಸಂಘಟನೆಗಾಗಿ ಹಣ ಸಂಗ್ರಹಿಸಲು ಕೊಲೆ, ಅಪಹರಣ ಕೃತ್ಯಗಳನ್ನು ಎಸಗುತ್ತಿದ್ದ ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ.   ಅಲ್ಲದೆ ರಾಜ್ಯದಲ್ಲಿ ಎಲ್ಲೆ ಕೋಮು ಗಲಭೆ ನಡೆದರೂ ಅಲ್ಲಿಗೆ ತೆರಳಿ ಕೊಲೆ, ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದ ಎಂದು ದಯಾನಂದ್ ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin