ಮೈಸೂರು-ಬೆಂಗಳೂರು-ಚನ್ನೈ ಹೈಸ್ಪೀಡ್ ರೈಲು ಯೋಜನೆಗೆ ಕೇಂದ್ರ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

CM-Siddaramaiah--01

ಬೆಂಗಳೂರು, ಆ.17- ಮೈಸೂರು-ಬೆಂಗಳೂರು-ಚನ್ನೈ ನಡುವೆ ಹೈಸ್ಪೀಡ್ ರೈಲು ಯೋಜನೆ ಆರಂಭಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಧಿಕಾರಿಗಳಿಂದ ಪ್ರಸ್ತಾವನೆ ಬಂದರೆ ಮಂಜೂರಾತಿ ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಸುರೇಶ್‍ಪ್ರಭು ಭರವಸೆ ನೀಡಿದ್ದಾರೆ. ನವದೆಹಲಿಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ರೈಲ್ವೆ ಸಚಿವ ಸುರೇಶ್‍ಪ್ರಭು ಮತ್ತು ಕೇಂದ್ರ ಗೃಹ ಸಚಿವ ರಾಜ್‍ನಾಥ್‍ಸಿಂಗ್ ಅವರ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.

ಮೈಸೂರು ರೈಲ್ವೆ ನಿಲ್ದಾಣವನ್ನು ಆಧುನೀಕರಣಗೊಳಿಸಬೇಕು. ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ವಿಸ್ತರಣೆ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕೂ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಮೈಸೂರು-ಬೆಂಗಳೂರು-ಚನ್ನೈ ಹೈಸ್ಪೀಡ್ ರೈಲು ಸಂಚಾರವನ್ನು ಆರಂಭಿಸುವಂತೆ ಮನವಿ ಸಲ್ಲಿಸಲಾಯಿತು. ಅದಕ್ಕೆ ಸ್ಪಂದಿಸಿದ ಸುರೇಶ್‍ಪ್ರಭು ಅವರು ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳು ಕುಳಿತು ಚರ್ಚೆ ಮಾಡಿ ನಿರ್ಣಯ ತೆಗೆದುಕೊಂಡು ಪ್ರಸ್ತಾವನೆ ಸಲ್ಲಿಸಲಿ. ಅನಂತರ ಮೈಸೂರು-ಚನ್ನೈ ನಡುವೆ ಹೈಸ್ಪೀಡ್ ರೈಲು ಸಂಚರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ಹಲವಾರು ಯೋಜನೆಗಳು ನೆನೆಗುದಿಗೆ ಬಿದ್ದಿವೆ. 1998ರಲ್ಲಿ ಆರಂಭವಾದ ಹುಬ್ಬಳ್ಳಿ-ಅಂಕೋಲ ರೈಲ್ವೆ ಯೋಜನೆ ಕಾಮಗಾರಿ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ದೊರೆಯದೆ ನೆನೆಗುದಿಗೆ ಬಿದ್ದಿದೆ. ಈಗ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಕೂಡಲೇ ಅನುಮತಿ ನೀಡಿ ನಿರ್ಮಾಣ ಕಾಮಗಾರಿಯನ್ನು ಆರಂಭಿಸಬೇಕೆಂದು ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ. ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಬರ ಪರಿಹಾರಕ್ಕೆ ಹೆಚ್ಚು ಅನುದಾನ ನೀಡಿ:

ಕೇಂದ್ರ ಗೃಹ ಸಚಿವ ರಾಜ್‍ನಾಥ್‍ಸಿಂಗ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬರ ನಿರ್ವಹಣೆಗೆ ಹಾಗೂ ಹಿಂಗಾರು-ಮುಂಗಾರು ಬೆಳೆ ನಷ್ಟಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.  ಎಸ್‍ಡಿಆರ್‍ಎಫ್‍ನಡಿ 5 ವರ್ಷಗಳ ಅವಧಿಗೆ ಕರ್ನಾಟಕ್ಕೆ 1527 ಕೋಟಿ ರೂ.ಗಳನ್ನು ಮಾತ್ರ ನೀಡಲಾಗಿದೆ. ನಮ್ಮಂತೆ ಬರ ಪರಿಸ್ಥಿತಿ ಎದುರಿಸುತ್ತಿರುವ ಮಹಾರಾಷ್ಟ್ರಕ್ಕೆ 8ಸಾವಿರ ಕೋಟಿ, ಗುಜರಾತ್, ಆಂಧ್ರಪ್ರದೇಶ, ಮಧ್ಯಪ್ರದೇಶ ರಾಜ್ಯಗಳಿಗೆ ನಮಗಿಂತಲೂ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಸಿಎಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Rajanath-Sing---01

ಎನ್‍ಡಿಆರ್‍ಎಫ್‍ನ ನಿಯಮಾವಳಿಗಳನ್ನು ಬದಲಾವಣೆ ಮಾಡಿರುವ ಬಗ್ಗೆಯೂ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೊದಲಿದ್ದ ನಿಯಮಾವಳಿಗಳ ಅನುಸಾರ ಕಳೆದ ವರ್ಷ ಕರ್ನಾಟಕದಲ್ಲಿ 164 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿತ್ತು. ಹೊಸ ನಿಯಮಾವಳಿಗಳನ್ನು ಅನುಸರಿಸಿದರೆ 30 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲು ಸಾಧ್ಯವಿಲ್ಲ. ಶೇ.50ರಷ್ಟು ಬೆಳೆ ನಷ್ಟವಾಗಿರಬೇಕು, ಶೇ.50ಕ್ಕಿಂತಲೂ ಕಡಿಮೆ ಬಿತ್ತನೆಯಾಗಿರಬೇಕು.

ಭೂಮಿಯ ತೇವಾಂಶ ಶೇ.25ಕ್ಕಿಂತ ಕಡಿಮೆ ಇರಬೇಕು ಎಂಬ ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ. ಈ ನಿಯಮಾವಳಿಗಳನ್ನು ಅನುಸರಿಸಿದರೆ ಬಹಳ ಕಷ್ಟವಾಗಲಿದೆ. ಹಾಗಾಗಿ ಎನ್‍ಡಿಆರ್‍ಎಫ್ ನಿಯಾಮವಳಿಗಳನ್ನು ಬದಲಾವಣೆ ಮಾಡುವಾಗ ರಾಜ್ಯದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ಮನವಿ ಮಾಡಿದ್ದಾರೆ.

Facebook Comments

Sri Raghav

Admin