ಮೈಸೂರು : ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮಲಗಿದ್ದ ವ್ಯಕ್ತಿ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Mysuru

ಮೈಸೂರು,ಆ.13-ಮಲಗಿದ್ದ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಮಂಡಿಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.   ಮಂಡಿಮೊಹಲ್ಲಾದ ಸುಲ್ತಾನ್‍ಪಾರ್ಕ್ ಸಮೀಪದ ನಿವಾಸಿ ಅನ್ಸರ್ ಪಾಷ (46) ಸಜೀವ ದಹನವಾದ ವ್ಯಕ್ತಿ.  ಈತ ಪತ್ನಿಯನ್ನು ತೊರೆದು ಒಂಟಿಯಾಗಿ ತನ್ನ ಸ್ವಂತ ಮನೆಯಲ್ಲಿ ವಾಸವಾಗಿದ್ದನು. ಸಣ್ಣಪುಟ್ಟ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದನು.  ಹೊರಗೆ ಊಟ, ತಿಂಡಿ ಮಾಡಿ ಮನೆಗೆ ಬಂದು ರಾತ್ರಿ ಮಲಗುತ್ತಿದ್ದನು. ಈತನ ಮನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲ, ಪ್ರತಿದಿನ ಮೇಣದ ಬತ್ತಿ ಹಚ್ಚಿಕೊಂಡೇ ಮಲಗುತ್ತಿದ್ದನೆನ್ನಲಾಗಿದೆ.  ಅದರಂತೆ ರಾತ್ರಿಯೂ ಅನ್ಸರ್ ಪಾಷ ಮೊಂಬತ್ತಿ ಹಚ್ಚಿ ನಿದ್ರೆಗೆ ಜಾರಿದ್ದಾರೆ. ಈ ವೇಳೆ ಮೊಂಬತ್ತಿ ಉರುಳಿ ಬಿದ್ದು ಬೆಡ್‍ಶೀಟ್‍ಗೆ ಹೊತ್ತಿಕೊಂಡ ಬೆಂಕಿ ಹಾಸಿಗೆಯನ್ನು ಆವರಿಸಿದೆ.
ಆದರೆ ಇದ್ಯಾವುದೂ ಅನ್ಸರ್ ಪಾಷ ಗಮನಕ್ಕೆ ಬಂದಿಲ್ಲ. ಬೆಂಕಿಯಿಂದಾಗಿ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ಸ್ ವಸ್ತುಗಳು ಸಿಡಿಯಲಾರಂಭಿಸಿವೆ. ಈ ವೇಳೆ ಅನ್ಸರ್ ಪಾಷ  ಸಾಕಿದ್ದ ಎರಡು ನಾಯಿಗಳು ಬೊಗಳುತ್ತಿದ್ದುದು ಹಾಗೂ ಸಿಡಿಯುತ್ತಿದ್ದ ಶಬ್ಧ  ಕೇಳಿ ನೆರೆಹೊರೆಯವರು ಎಚ್ಚೆತ್ತುಕೊಂಡು ಹೊರಗೆ ಬಂದಾಗ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಕಂಡು ತಕ್ಷಣ ಅಗ್ನಿಶಾಮಕ ದಳಕ್ಕೆ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ.  ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದವರು, ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವಷ್ಟರಲ್ಲಿ ಅನ್ಸರ್ ಪಾಷ  ಸಜೀವವಾಗಿ ದಹನವಾಗಿದ್ದಾನೆ.
ಮಂಡಿ  ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin