ಮೈಸೂರು ಮೃಗಾಲಯದ ಪ್ರಾಣಿಗಳಿಗೆ ಹೆಲ್ತ್ ಕಾರ್ಡ್

ಈ ಸುದ್ದಿಯನ್ನು ಶೇರ್ ಮಾಡಿ

Mysuru-zoo

ಮೈಸೂರು, ಡಿ.10-ನಗರದ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ಸಾವಿನ ಬಗ್ಗೆ ಟೀಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯ ಆಡಳಿತವು ಎಲ್ಲಾ ಪ್ರಾಣಿಗಳಿಗೆ ಆರೋಗ್ಯ ಕುರಿತ ಹೆಲ್ತ್ ಕಾರ್ಡ್ ಬಿಡುಗಡೆ ಮಾಡಲಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಣಾಧಿಕಾರಿ ಕಮಲ ಕರಿಕಾಳನ್ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಣಿಗಳಲ್ಲಿ ಹುಟ್ಟು-ಸಾವು ಸಹಜ ಪ್ರಕ್ರಿಯೆ. ಆದರೂ ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಸಹಜ ಸಾವಿನಿಂದ ಸಾರ್ವಜನಿಕ ವಲಯದಲ್ಲಿ ಅಪಸ್ವರ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪ್ರಾಣಿಗಳ ವಯಸ್ಸು, ಆರೋಗ್ಯ ಸ್ಥಿತಿ ಕುರಿತ ಮಾಹಿತಿ ಪ್ರಕಟಿಸಲು ಮೃಗಾಲಯ ಮಂಡಳಿ ಮುಂದಾಗಿದೆ.

ಮೃಗಾಲಯದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಸಾವಿನ ಪ್ರಮಾಣ ಶೇ.8ರಷ್ಟಿದ್ದು, ಜನನ ಪ್ರಮಾಣ 40ಕ್ಕೂ ಹೆಚ್ಚಿದೆ. ಹೀಗಿದ್ದರೂ ಪ್ರಾಣಿಗಳು ಸತ್ತಾಗ ಮೃಗಾಲಯದ ಕಡೆ ಸಾರ್ವಜನಿಕರು ಸಂಶಯದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪ್ರಾಣಿಗಳ ಆರೋಗ್ಯ ಕುರಿತ ಹೆಲ್ತ್ ಕಾರ್ಡ್ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದರು. ಹೆಲ್ತ್ ಕಾರ್ಡ್‍ನಲ್ಲಿ ಪ್ರಾಣಿಗಳ ವಯಸ್ಸು, ಆರೋಗ್ಯ ಪರಿಸ್ಥಿತಿ, ಅನಾರೋಗ್ಯ ಕುರಿತ ಎಲ್ಲಾ ಮಾಹಿತಿಯನ್ನು ದಾಖಲಿಸಲಾಗಿರುತ್ತದೆ. ಈ ಎಲ್ಲಾ ಮಾಹಿತಿಗಳು ವೆಬ್‍ಸೈಟ್‍ನಲ್ಲೂ ಕೂಡ ಪ್ರಕಟಿಸಲಾಗುವುದು ಎಂದರು.
ಪ್ರಾಣಿಗಳಿಗೆ ಯಾವುದೇ ರೀತಿ ಸಾಂಕ್ರಾಮಿಕ ರೋಗಗಳು ತಗಲದಂತೆ ಔಷಧಿ ಹಾಗೂ ಚುಚ್ಚುಮದ್ದು ನೀಡಲಾಗುತ್ತದೆ. ಒಂದು ಸಣ್ಣ ಪಕ್ಷಿಯಿಂದ ಹಿಡಿದು ಆನೆಯವರೆಗೂ ಎಲ್ಲಾ ಪ್ರಾಣಿಗಳೂ ಮುಖ್ಯ. ಹಾಗಾಗಿ ಪ್ರಾಣಿಗಳ ಆರೋಗ್ಯ ಕಾಪಾಡಲು ಮೃಗಾಲಯದ ಆಡಳಿತ ಮಂಡಳಿ ಹೆಚ್ಚು ಗಮನಹರಿಸುತ್ತದೆ ಎಂದು ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin