ಮೈಸೂರು ಮೇಯರ್ ಪಟ್ಟ ಅಲಂಕರಿಸಲಿದೆಯೇ ಕಾಂಗ್ರೆಸ್..?
ಮೈಸೂರು,ಡಿ.11-ರಾಜ್ಯದ ಪ್ರತಿಷ್ಠಿತ ಜಿಲ್ಲೆಗಳಲ್ಲಿ ಒಂದಾಗಿರುವ ಮೈಸೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಮೇಯರ್ ಪಟ್ಟವನ್ನು ಕಾಂಗ್ರೆಸ್ ಅಲಂಕರಿಸಲಿದೆಯೇ..?! ಇಂತಹವೊಂದು ಲೆಕ್ಕಾಚಾರ ಇದೀಗ ನಗರದಲ್ಲಿ ಕೇಳಿಬರುತ್ತಿದೆ. ಈಗಾಗಲೇ ಪ್ರಸ್ತುತ ಇರುವ ಮೇಯರ್ ಅವಧಿ ಪೂರ್ಣಗೊಂಡಿದ್ದು , ಮೀಸಲಾತಿ ಪ್ರಕಟಣೆಗಾಗಿ ಕಾಯುತ್ತಿದ್ದು , ಅದು ಪ್ರಕಟಗೊಂಡರೆ ಯಾರಿಗೆ ಮೀಸಲಾತಿ ಸಿಗಲಿದೆ ಎಂಬುದರ ಮೇಲೆ ಚುನಾವಣೆ ನಿಗದಿಯಾಗಿ ನಿರ್ಧಾರವಾಗಲಿದೆ. ಹಾಗಾಗಿ ಕಾಂಗ್ರೆಸ್ ಸಹ ತಾನು ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿದೆ.
ಪ್ರಸ್ತುತ ಪಾಲಿಕೆಯಲ್ಲಿ ಮೇಯರ್ ಆಗಿರುವ ಎಂ.ಜಿ.ರವಿಕುಮಾರ್ ಹಾಗೂ ಉಪಮೇಯರ್ ರತ್ನ ಲಕ್ಷ್ಮಣ್ ಅವರ ಅಧಿಕಾರಾವಧಿ ಡಿ.6ಕ್ಕೆ ಕೊನೆಯಾಗಿದ್ದರೂ ಮೀಸಲಾತಿ ಪ್ರಕಟವಾಗದ ಹಿನ್ನೆಲೆಯಲ್ಲಿ ಚುನಾವಣೆ ನಡೆಯದೆ ಇವರೇ ಮುಂದುವರೆದಿದ್ದಾರೆ. ಇದುವರೆಗೂ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯೊಂದಿಗೆ ಗದ್ದುಗೆ ಏರಿದ್ದ ಮೇಯರ್ ಬದಲಿಗೆ ಈ ಬಾರಿ ಕಾಂಗ್ರೆಸ್ ಪಟ್ಟ ಅಲಂಕರಿಸುವ ಕಸರತ್ತು ನಡೆಸುತ್ತಿದೆ. ಆದರೆ ಇವೆಲ್ಲದಕ್ಕೂ ಮುನ್ನ ಮೀಸಲಾತಿ ಪ್ರಕಟಗೊಂಡು ಚುನಾವಣೆ ನಡೆಯಬೇಕಿದೆ.
ಈಗಾಗಲೇ ಮೀಸಲಾತಿ ಪ್ರಕಟಗೊಳ್ಳಬೇಕಿದ್ದರೂ ಇದುವರೆಗೂ ಈ ಪ್ರಕ್ರಿಯೆ ನಡೆಯದೆ ಇದ್ದು ಇಂದು ಸಂಜೆ ವೇಳೆಗೆ ಮೀಸಲಾತಿ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಚಟುವಟಿಕೆಗಳು ಗರಿಗೆದರಿವೆ. ರೋಸ್ಟರ್ ಪದ್ದತಿಯಂತೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಮೊದಲ ವರ್ಷದಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾತಿ ಕಲ್ಪಿಸಿದ್ದರೆ 2ನೇ ವರ್ಷದಲ್ಲಿ ಸಾಮಾನ್ಯವರ್ಗ, ಮೂರನೇ ವರ್ಷದಲ್ಲಿ ಹಿಂದುಳಿದ ವರ್ಗ, 4ನೇ ವರ್ಷದಲ್ಲಿ ಮತ್ತೆ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡಲಾಗಿತ್ತು. ಈ ಬಾರಿ ಅಂದರೆ 5ನೇ ವರ್ಷ ಮಹಾಪೌರರ ಮೀಸಲಾತಿಯನ್ನು ಎಸ್ಸಿ ಮಹಿಳೆಗೆ ಅಥವಾ ಎಸ್ಟಿ ಪಂಗಡಕ್ಕೆ ಕಲ್ಪಿಸಬೇಕಾಗಿದ್ದರೂ ಇದುವರೆಗೂ ಸರ್ಕಾರ ಮೀಸಲಾತಿ ಪ್ರಕಟಿಸಿಲ್ಲ. ಆದರೆ ಇಂದು ಸಂಜೆಯೊಳಗೆ ಮೀಸಲಾತಿ ಪ್ರಕಟಗೊಳ್ಳುವುದೆಂದು ತಿಳಿದುಬಂದಿದೆ.
ಒಂದು ವೇಳೆ ಇಂದು ಮೀಸಲಾತಿ ಪ್ರಕಟವಾದರೆ ಡಿಸೆಂಬರ್ ಅಂತ್ಯದೊಳಗೆ ಮೈಸೂರಿನಲ್ಲಿ ನೂತನ ಮೇಯರ್ ಅಧಿಕಾರಕ್ಕೆ ಬರಲಿದ್ದಾರೆ. ಈ ನಡುವೆ ಈವರೆಗೂ ಜೆಡಿಎಸ್, ಬಿಜೆಪಿ ಒಂದಾಗಿ ನಡೆಸುತ್ತಿದ್ದ ಅಧಿಕಾರವನ್ನು ಕೊನೆಗೊಳಿಸಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದೆ. ಮೀಸಲಾತಿ ಪ್ರಕಟಣೆಯ ಬಳಿಕವೂ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದರ ಪಕ್ಕ ಲೆಕ್ಕ ಸಿಗಲಿದೆ.