ಮೊದಲ ಆಷಾಢ ಶುಕ್ರವಾರ : ಚಾಮುಂಡೇಶ್ವರಿ ದರ್ಶನಕ್ಕೆ ಹರಿದುಬಂದ ಭಕ್ತಸಾಗರ

ಈ ಸುದ್ದಿಯನ್ನು ಶೇರ್ ಮಾಡಿ

Chamundeshwari

ಮೈಸೂರು, ಜೂ.30- ಮೊದಲ ಆಷಾಢ ಶುಕ್ರವಾರದ ಅಂಗವಾಗಿ ಇಂದು ಚಾಮುಂಡಿ ಬೆಟ್ಟಕ್ಕೆ ತೆರಳಿದ ಲಕ್ಷಾಂತರ ಮಂದಿ ಮುಂಜಾನೆಯಿಂದಲೇ ದೇವಿಯ ದರ್ಶನ ಪಡೆದರು. ಬೆಟ್ಟವನ್ನು ಹೂವು-ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ 4 ಗಂಟೆಯಿಂದಲೇ ಬೆಟ್ಟಕ್ಕೆ ಮೆಟ್ಟಿಲು ಮೂಲಕ ಹಾಗೂ ರಸ್ತೆ ಮಾರ್ಗದ ಮೂಲಕ ಭಕ್ತಾದಿಗಳು ಆಗಮಿಸಿದರು. ದೇವಾಲಯ ತೆರೆಯುವ ಮುನ್ನವೇ ಬೆಟ್ಟಕ್ಕೆ ಆಗಮಿಸಿದ್ದ ಭಕ್ತರು ದೇವಿ ದರ್ಶನಕ್ಕೆ ಕಾದು ಕುಳಿತಿದ್ದರು.

ಬೆಳಗಿನ ಜಾವ 4 ಗಂಟೆಗೆ ದೇವಾಲಯದಲ್ಲಿ ದೇವಿ ಕೆರೆಯಿಂದ ಜಲವನ್ನು ತಂದು ಪುಣ್ಯಾಹ ಮಾಡಿ ನಂತರ ಕಳಸ ಪೂಜೆ, ಗಣಪತಿ ಪೂಜೆ ನೆರವೇರಿಸಿ ನಂತರ ದೇವಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ , ರುದ್ರಾಭಿಷೇಕವನ್ನು ನೆರವೇರಿಸಿ ಆಷಾಢ ಶುಕ್ರವಾರದ ಪ್ರಯುಕ್ತ ಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ಶ್ವೇತ ವಸ್ತ್ರಧಾರಿಯಾಗಿ ವಿವಿಧ ಹೂವಿನಿಂದ ಅಲಂಕರಿಸಿದ ದೇವಿಯನ್ನು ಕಂಡ ಭಕ್ತಾದಿಗಳು ಪುನೀತರಾದರು.

ಅಭಿಷೇಕ ನಂತರ ಮಹಾ ಮಂಗಳಾರತಿ ಮಾಡಿ ಬೆಳಗಿನ ಜಾವ 5.30ರ ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದೇವಾಲಯದ ಆವರಣದಲ್ಲಿ ಕೆಂಪು ನೀಲಿ, ಹಳದಿ, ಬಿಳಿ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಹಾಗೆಯೇ ಭಕ್ತಾದಿಗಳಿಗೆ ದೇವಿ ದರ್ಶನಕ್ಕಾಗಿ 3 ಸರತಿ ಸಾಲಿನಲ್ಲಿ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ ದೀಕ್ಷಿತ್ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಶ್ರಾವಣ ಮಾಸದಲ್ಲಿ ವಿಷ್ಣುವಿನ ಆರಾಧನೆ ಮಾಡುತ್ತಾರೆ.

ಕಾರ್ತಿಕ ಮಾಸದಲ್ಲಿ ಶಿವನ ಆರಾಧನೆ ಮಾಡುತ್ತಾರೆ. ಆಷಾಧ ಮಾಸದಲ್ಲಿ ದೇವಿಯ ಆರಾಧನೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆಷಾಧ ಮಾಸದಲ್ಲಿ ದೇವಿಯ ಪೂಜೆ ಗೆ ಆದ್ಯತೆ ನೀಡಲಾಗುತ್ತಿದ್ದು, ಬೇರೆ ಮಾಸದಲ್ಲಿ ವಿವಾಹದಂತಹ ಶುಭ ಕಾರ್ಯ ನಡೆಯುತ್ತದೆ.ಆಗ ಕುಟುಂಬಸ್ಥರು ಒಟ್ಟಿಗೆ ಬಂದು ದೇವರ ದರ್ಶನ ಮಾಡಲು ಆಗುವುದಿಲ್ಲ. ಆದರೆ ಈ ಮಾಸದಲ್ಲಿ ದೇವಿಯ ಪೂಜೆಯನ್ನು ಕುಟುಂಬಸ್ಥರು ಬಂದು ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ.  ಮೊದಲ ಆಷಾಢ ಶುಕ್ರವಾರವಾದ ಇಂದು ಲಕ್ಷ್ಮಿಅಲಂಕಾರ , ಎರಡನೆ ವಾರ ಗೌರಿ ಅಲಂಕಾರ, ಮೂರನೆ ವಾರ ನಾಗಲಕ್ಷ್ಮಿ, 4ನೆ ವಾರ ಚಾಮುಂಡೇಶ್ವರಿ ಅಲಂಕಾರ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin