ಮೊಮ್ಮಗನಿಗೆ ವಿಷವಿಟ್ಟು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಅಜ್ಜಿ
ತುಮಕೂರು, ಸೆ.8-ಅಜ್ಜಿಯ ದುಡುಕಿನ ನಿರ್ಧಾರದಿಂದ ಮೊಮ್ಮಗನಿಗೆ ವಿಷ ಕೊಟ್ಟು ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ದುರಾದೃಷ್ಟವಶಾತ್ ಮೊಮ್ಮಗ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಮುಂಜಾನೆ ಸೀತ್ಕಲ್ಪಾಳ್ಯ ಬಸ್ ನಿಲ್ದಾಣದ ಬಳಿ ಸುಮಾರು 65 ವರ್ಷದ ಅಜ್ಜಿ ಮತ್ತು 13 ವರ್ಷದ ಮೊಮ್ಮಗ ಒದ್ದಾಡುತ್ತಿದ್ದರು. ಬಾಯಲ್ಲಿ ನೊರೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪಿಡ್ಸ್ ಬಂದಿರಬಹುದೆಂದು ಇವರ ಕೈಗೆ ಕಬ್ಬಿಣದ ವಸ್ತು ಕೊಟ್ಟಿದ್ದಾರೆ. ಆದರೂ ಒದ್ದಾಟ ನಿಲ್ಲಿಸದಿದ್ದಾಗ ಕೆಟ್ಟ ವಾಸನೆ ಬರುತ್ತಿದುದ್ದನ್ನು ಗಮನಿಸಿ ಇವರು ವಿಷ ಸೇವಿಸಿರಬಹುದೆಂದು ಅನುಮಾನಗೊಂಡು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ರವಿ, ಸಬ್ಇನ್ಸ್ಪೆಕ್ಟರ್ ಕಾಂತರಾಜು ಸ್ಥಳಕ್ಕಾಗಮಿಸಿ ಅಜ್ಜಿ-ಮೊಮ್ಮಗನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ನತದೃಷ್ಟ ಬಾಲಕ ಸಾವನ್ನಪ್ಪಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಅಜ್ಜಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.ಇವರಿಬ್ಬರೂ ಎಲ್ಲಿಯವರು ಎಂಬುದು ತಿಳಿದು ಬಂದಿಲ್ಲ. ಬಹುಶಃ ಗೌರಿಬಿದನೂರು ತಾಲ್ಲೂಕಿನ ಮಾರ್ಕೋಡಿ ಅಥವಾ ಸಿತ್ಕಲ್ಪಾಳ್ಯ ಸುತ್ತಮುತ್ತ ನಿವಾಸಿಗಳಿರಬಹುದೇ ಎಂಬ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆದಿದೆ.
ಅಜ್ಜಿ-ಮೊಮ್ಮಗ ನಿನ್ನೆ ಬೆಳಗ್ಗೆ ಈ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ಆದರೆ, ಇವರು ಎಲ್ಲಿಯವರು ಎಂಬುದು ತಿಳಿದು ಬಂದಿಲ್ಲ. ಇವರಿಬ್ಬರು ಇಲ್ಲಿಗೆ ಬಂದು ಏಕೆ ವಿಷ ಸೇವಿಸಿದ್ದಾರೆ ಎಂಬುದು ನಿಗೂಢವಾಗಿದ್ದು, ಇವರ ವಾರಸುದಾರರ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಜ್ಜಿ ಚೇತರಿಸಿಕೊಂಡ ನಂತರವಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ.ಒಟ್ಟಾರೆ ಬಾಳಿ ಬದುಕಬೇಕಿದ್ದ ಬಾಲಕ ಅಜ್ಜಿಯ ದುಡುಕಿನ ನಿರ್ಧಾರದಿಂದ ಬಾಲಕ ಸಾವನ್ನಪ್ಪಿರುವ ದುರಂತದ ಸಂಗತಿ.
► Follow us on – Facebook / Twitter / Google+