ಮೋಜು ಮಸ್ತಿಯಿಂದ ಹೊಸ ವರ್ಷವನ್ನು ಬರಮಾಡಿಕೊಂಡ ಬೆಂಗಳೂರಿಗರು

ಈ ಸುದ್ದಿಯನ್ನು ಶೇರ್ ಮಾಡಿ

New-Year

ಬೆಂಗಳೂರು, ಜ.1-ಹೊಸ ವರ್ಷಾಚರಣೆ ಹರ್ಷಾಚರಣೆಯ ಸಂಕೇತ. 2017ನ್ನು ಎಲ್ಲೆಡೆ ಮೋಜು ಮಸ್ತಿಯಿಂದ ಬರಮಾಡಿಕೊಳ್ಳಲಾಗಿದೆ. ಹೊಸ ವರುಷ, ಹೊಸತನ, ಹೊಸ ಬಾಳಿನ ಮುನ್ನುಡಿ. ಈ ಹೊಸ ವರ್ಷವನ್ನು ಸ್ವಾಗತಿಸುವ ರೀತಿಯೂ ವಿಶಿಷ್ಟ. ಜಗತ್ತಿನಾದ್ಯಂತ ಹೊಸ ವರ್ಷಕ್ಕಾಗಿ ಮೋಜು, ಮಸ್ತಿಯೊಂದಿಗೆ ಕುಣಿದು ಕುಪ್ಪಳಿಸಿ ಕಳೆದ ವರ್ಷದ ಕಹಿ, ನೋವನ್ನು ಬಿಟ್ಟು ಹೊಸ ವರ್ಷದ ಹೊಸ ದಿನದ ಆರಂಭಕ್ಕೆ ಸಂತಸವನ್ನು ಪರಸ್ಪರ ಹಂಚಿಕೊಳ್ಳಲು ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. 2017ರನ್ನು ಸ್ವಾಗತಿಸಲು ರಾತ್ರಿಯಿಂದಲೇ ಆರಂಭವಾದ ನ್ಯೂ ಇಯರ್ ಆಚರಣೆ ಭಾನುವಾರವಾದ ಇಂದು ಮುಂದುವರೆದಿದೆ. ಈ ಬಾರಿ ಹೊಸ ವರ್ಷದ ಸಂತಸ ಹಂಚಿಕೊಳ್ಳಲು ಪಾರ್ಟಿ ನಡೆಸುವವರು, ಸ್ನೇಹಿತರೊಡಗೂಡಿ ಪ್ರವಾಸಕ್ಕೆ ತೆರಳುವವರು, ಕುಟುಂಬದೊಂದಿಗೆ ಕಾಲ ಕಳೆಯುವವರಿಗೆ ಒಂದಿಷ್ಟು ಹೆಚ್ಚೇ ಖುಷಿಯಾಗಿದೆ. ಕಾರಣ ವೀಕೆಂಡ್‍ನಲ್ಲಿ ನೂತನ ವರ್ಷ ಅಡಿ ಇಡುತ್ತಿರುವುದೇ ಆಗಿದೆ.

ಪ್ರತಿ ಬಾರಿ ಹೊಸ ವರ್ಷದ ಆಚರಣೆಗೆ ಕೆಲವೊಂದು ಅಡೆತಡೆಗಳುಂಟಾದರೂ ವೀಕೆಂಡ್ ಜೊತೆಗೆ ಹೊಸ ವರ್ಷ ಆಚರಣೆಗೆ ಕಾಲ ಕೂಡಿ ಬಂದಂತಿದೆ. ಶನಿವಾರವಾದ ನಿನ್ನೆ ಹಾಗೂ ಭಾನುವಾರವಾದ ಇಂದು ಜ.1 ಆಗಿರುವುದರಿಂದ ಜನ ತಮ್ಮ ಮನಸೋ ಇಚ್ಛೆ ವರ್ಷಾಚರಣೆ ನಡೆಸಲು ಮುಂದಾಗಿದ್ದಾರೆ. ರಾತ್ರಿಯಿಡೀ ಕ್ಲಬ್, ಮನೆಗಳಲ್ಲಿ ನಡೆದ ಪಾರ್ಟಿಗಳು ಹೊರತಾಗಿ ಇಂದೂ ಸಹ ಹೊಸ ವರ್ಷದ ಆಚರಣೆ ಎಗ್ಗಿಲ್ಲದೆ ನಡೆಯುತ್ತಿದೆ. ಕಿರಿಯರಿಂದ ಹಿರಿಯವರೆಗೂ ಎಲ್ಲರೂ ಒಗ್ಗೂಡಿ ವರ್ಷವನ್ನು ಸ್ವಾಗತಿಸುವ ಈ ವರ್ಷಾಚರಣೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿಲ್ಲ. ಅದರಲ್ಲೂ ಯುವಜನರು ರಾತ್ರಿಯಿಡೀ ಸಂಚರಿಸಿ ಹೊಸ ವರ್ಷವನ್ನು ಸ್ವಾಗತಿಸಿದ್ದಲ್ಲದೆ, ರಸ್ತೆಯಲ್ಲಿ ನೃತ್ಯ, ಸಂಗೀತದ ರಸದೌತಣವನ್ನು ಸವಿದರು.

ಸೆಲ್ಫಿ ಮೋಜು, ಸಂಭ್ರಮಿಸಿದ ಕ್ಷಣದ ನೆನಪಿಗಾಗಿ ವಿಡಿಯೋ ಹೀಗೆ ಅನುಕ್ಷಣವೂ ಖುಷಿ ಖುಷಿಯಾಗಿ ಕಳೆದವರು ರಾತ್ರಿ 12ರ ನಂತರವೂ ವರ್ಷಾಚರಣೆಯನ್ನು ಆಚರಿಸಿದರು.
ಶನಿವಾರ-ಭಾನುವಾರದಂದು ನೂತನ ವರ್ಷ ಬಂದ ಹಿನ್ನೆಲೆಯಲ್ಲಿ ಮೊದಲೇ ನಿಗದಿ ಮಾಡಿದ್ದಂತೆ ಪ್ರವಾಸ ಕೈಗೊಂಡು ಸಂತೋಷ ಪಟ್ಟರೆ, ಮತ್ತೆ ಹಲವರು ಮನೆಯಲ್ಲೇ ಸ್ನೇಹಿತರು, ಬಂಧುಗಳೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚಿ ಖುಷಿಯನ್ನು ಹಂಚಿಕೊಂಡರು. ಒಟ್ಟಾರೆ ಎಲ್ಲೆಡೆ ಹೊಸ ವರ್ಷಾಚರಣೆ ಹರ್ಷಾಚರಣೆಯಾಗಿ ಮಾರ್ಪಟ್ಟು 2017ರನ್ನು ಜನ ಮೋಜು ಮಸ್ತಿಯಿಂದಲೇ ಬರಮಾಡಿಕೊಂಡರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin