ಮೋಡ ಬಿತ್ತನೆ ಕಾರ್ಯ ಮತ್ತೆರಡು ದಿನಗಳ ಕಾಲ ವಿಳಂಬ

ಈ ಸುದ್ದಿಯನ್ನು ಶೇರ್ ಮಾಡಿ

Cloud-Seeding--01

ಬೆಂಗಳೂರು, ಆ.18-ರಾಜ್ಯದಲ್ಲಿ ಕೃತಕ ಮಳೆ ತರಿಸಲು ಉದ್ದೇಶಿಸಿದ್ದ ಮೋಡ ಬಿತ್ತನೆ ಕಾರ್ಯ ಮತ್ತೆರಡು ದಿನಗಳ ಕಾಲ ವಿಳಂಬವಾಗಲಿದೆ. ಆಕಾಶದಲ್ಲಿರುವ ಮೋಡಗಳನ್ನು ಗುರುತಿಸಿ ಆ ನಂತರ ಮೋಡಬಿತ್ತನೆ ಮಾಡಬೇಕಾಗಿದೆ. ಮೋಡಗಳನ್ನು ಗುರುತಿಸುವ ರಾಡಾರ್ ಅಳವಡಿಕೆ ಕಾರ್ಯವೇ ಇನ್ನೂ ಪೂರ್ಣಗೊಳ್ಳದಿರುವುದರಿಂದ ಮೋಡ ಬಿತ್ತನೆ ವಿಳಂಬವಾಗುತ್ತಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಅಳವಡಿಸಬೇಕಾದ ರಾಡಾರ್ ನಿನ್ನೆ ರಾತ್ರಿಯಷ್ಟೆ ಬಂದಿದೆ. ರಾಡಾರ್ ಅಳವಡಿಕೆಗೆ ಕನಿಷ್ಠ 2 ದಿನಗಳ ಕಾಲಾವಕಾಶ ಬೇಕಾಗಿರುವುದರಿಂದ ಭಾನುವಾರದಿಂದ ಮೋಡ ಬಿತ್ತನೆ ಆರಂಭಿಸುವ ನಿರೀಕ್ಷೆ ಇದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಆದರೆ ಮೋಡ ಬಿತ್ತನೆ ಬಗೆಗಿನ ಗೊಂದಲಗಳು ಬಗೆಹರಿದಿಲ್ಲ.ಕೇಂದ್ರ ಸರ್ಕಾರದಿಂದ ಸಿಗಬೇಕಾದ ಅನುಮತಿಗಳು ಪೂರ್ಣಪ್ರಮಾಣದಲ್ಲಿ ದೊರೆತಿಲ್ಲ ಎಂಬ ಮಾಹಿತಿಯೂ ಇದೆ. ಕಳೆದ ಸೋಮವಾರ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಅವರು ಮೋಡಬಿತ್ತನೆಗಾಗಿ ಅಮೆರಿಕಾದಿಂದ ತರಿಸಿರುವ ವಿಮಾನವನ್ನು ಪರಿಶೀಲನೆ ನಡೆಸಿದರು. ಪ್ರಾಯೋಗಿಕ ಹಾರಾಟವೂ ಮಾಡಲಾಗಿತ್ತು.  ಇಂದಿನಿಂದ ಮೋಡ ಬಿತ್ತನೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ನೀಡಲಾಗಿತ್ತು. ಆದರೆ ರಾಡಾರ್ ಅಳವಡಿಕೆ ಕಾರ್ಯವೇ ಪೂರ್ಣಗೊಳ್ಳದಿರುವುದರಿಂದ ಮೋಡ ಬಿತ್ತನೆ ಕಾರ್ಯ ಮತ್ತಷ್ಟು ವಿಳಂಬವಾಗಲಿದೆ.

ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ರಾಜ್ಯಸರ್ಕಾರ ಮೋಡಬಿತ್ತನೆ ಕಾರ್ಯ ಕೈಗೊಳ್ಳಲು ಮುಂದಾಗಿದೆ. ಹೊಯ್ಸಳ ಪ್ರಾಜೆಕ್ಟ್ಸ್ ಎಂಬ ಕಂಪೆನಿಗೆ ಮೋಡ ಬಿತ್ತನೆ ಗುತ್ತಿಗೆಯನ್ನೂ ಕೂಡ ನೀಡಿತ್ತು. ಅಲ್ಲದೆ, ಪರಿಣಿತರ ಸಮಿತಿ ಸೇರಿದಂತೆ ಇದರ ಉಸ್ತುವಾರಿಗೆ ವಿವಿಧ ಸಮಿತಿಗಳನ್ನು ಕೂಡ ರಚಿಸಲಾಗಿದೆ.

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ 60 ದಿನಗಳ ಕಾಲ ಮೋಡಬಿತ್ತನೆ ಮಾಡುವ ಮೂಲಕ ಮಳೆಯ ಪ್ರಮಾಣವನ್ನು ಹೆಚ್ಚಿಸಲು ಉದ್ದೇಶಿಸಲಾಗಿತ್ತು. ಆಗಸ್ಟ್ ಮೊದಲ ವಾರದಲ್ಲೇ ಮೋಡ ಬಿತ್ತನೆ ಮಾಡುವ ನಿರೀಕ್ಷೆ ಇದೆ ಎಂದು ಸಚಿವ ಎಚ್.ಕೆ.ಪಾಟೀಲ್ ಪ್ರಕಟಿಸಿದ್ದರು. ಕಳೆದ ಭಾನುವಾರ ಮೋಡಬಿತ್ತನೆ ಪ್ರಯೋಗ ನಡೆಸಲು ಸಿದ್ಧತೆ ನಡೆಸಲಾಗಿತ್ತಾದರೂ ಸಾಧ್ಯವಾಗದೆ ಮರುದಿನ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಮೋಡ ಬಿತ್ತನೆ ಆರಂಭವಾದ ಒಂದು ವಾರದ ನಂತರ ಗದಗ ಮತ್ತು ಶೋರಾಪುರದಲ್ಲಿ ಮಾಡಲು ಉದ್ದೇಶಿಸಲಾಗಿತ್ತು.

ಬೆಂಗಳೂರಿನಲ್ಲಿ ಎಲ್ಲೂ ಕೂಡ ಮೋಡ ಬಿತ್ತನೆ ಆರಂಭವಾಗಿಲ್ಲ. ಮಳೆ ಬರುವಂತಹ ಮೋಡಗಳನ್ನು ಗುರುತಿಸಿ ಮೋಡ ಬಿತ್ತನೆಯನ್ನು ಮಾಡುವುದರಿಂದ ಶೇ.6 ರಿಂದ 10ರಷ್ಟು ಮಳೆ ಪ್ರಮಾಣ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಕಾವೇರಿ, ಮಲಪ್ರಭಾ ಮತ್ತು ತುಂಗಭದ್ರಾ ನದಿಗಳ ಕಣಿವೆ ಪ್ರದೇಶಗಳಲ್ಲಿ, ಮಳೆಯ ಅಗತ್ಯವಿರುವ ಪ್ರದೇಶಗಳಲ್ಲಿ ಮೋಡ ಬಿತ್ತನೆ ಮಾಡಲು ಉದ್ದೇಶಿಸಲಾಗಿತ್ತು.

Facebook Comments

Sri Raghav

Admin