ಮೋದಿಗೆ ಜೀವ ಬೆದರಿಕೆ ಇದ್ದ ಕಾರಣ ಮಠಕ್ಕೆ ಹೋಗಲಿಲ್ಲ : ಶೋಭಾ ಕರಂದ್ಲಾಜೆ

ಈ ಸುದ್ದಿಯನ್ನು ಶೇರ್ ಮಾಡಿ

shobhakarandlaje

ಬೆಂಗಳೂರು,ಮೇ 2- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕೆಲವು ಸಮಾಜಘಾತುಕ ಶಕ್ತಿಗಳಿಂದ ಜೀವ ಬೆದರಿಕೆ ಇದ್ದಿದ್ದರಿಂದ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂಬ ಸ್ಫೋಟಕ ಮಾಹಿತಿಯನ್ನು ಸಂಸದೆ ಶೋಭಾ ಕರಂದ್ಲಾಜೆ ಬಹಿರಂಗಪಡಿಸಿದ್ದಾರೆ. ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಎರಡು ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ.

ನಿನ್ನೆ ಉಡುಪಿಗೆ ಬಂದ ವೇಳೆ ಮೋದಿ ಅವರು ಉಡುಪಿಯಲ್ಲಿರುವ ಶ್ರೀಕೃಷ್ಣ ಮಠಕ್ಕೆ ತೆರಳಿ ದರ್ಶನ ಪಡೆಯಲು ಉತ್ಸುಕತೆ ತೋರಿದ್ದರು. ಆದರೆ ಅವರಿಗೆ ಪ್ರಾಣ ಬೆದರಿಕೆ ಇರುವುದನ್ನು ವಿಶೇಷ ಪೊ ಲೀಸ್ ಪಡೆ(ಎಸ್‍ಪಿಜಿ) ಪತ್ತೆ ಹಚ್ಚಿತ್ತು. ಈ ಹಿನ್ನೆಲೆಯಲ್ಲಿ ಭೇಟಿಯನ್ನು ರದ್ದು ಪಡಿಸಬೇಕಾಯಿತು ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.  ನಾವು ಕೂಡ ಮೋದಿ ಅವರನ್ನು ಶ್ರೀಕೃಷ್ಣನ ಮಠಕ್ಕೆ ಬಂದು ದರ್ಶನ ಪಡೆಯುವಂತೆ ಮನವಿ ಮಾಡಿದ್ದೆವು. ಇದು ಕರಾವಳಿ ಜನತೆಯ ಆಶಯವಾಗಿತ್ತು. ಪ್ರಧಾನಿಗಳು ಕೂಡ ಮಠಕ್ಕೆ ಭೇಟಿ ಕೊಡಲು ಒಪ್ಪಿಗೆ ಸೂಚಿಸಿದ್ದರು. ಆದರೆ ಅವರ ಭದ್ರತೆಯನ್ನು ಎಸ್‍ಪಿಜಿಯೇ ನಿರ್ವಹಿಸುವುದರಿಂದ ಅನಿವಾರ್ಯವಾಗಿ ರದ್ದು ಮಾಡಲಾಯಿತೆಂದು ಹೇಳಿದರು. ಮೋದಿ ಅವರ ಪ್ರಾಣ ರಕ್ಷಣೆ ಅತ್ಯಗತ್ಯವಾಗಿದ್ದರಿಂದ ಮಠದ ಭೇಟಿಯನ್ನು ರದ್ದು ಮಾಡಲಾಗಿದೆ. ಇದು ನಮಗೂ ಕೂಡ ಬೇಸರ ತಂದಿದೆ. ಪೇಜಾವರ ಮಠದ ಸ್ವಾಮೀಜಿಯವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಲ್ಬುರ್ಗಿ, ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಅಲ್ಲದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ನಾಳೆ ಚಿಕ್ಕಮಗಳೂರು, ಹೊನ್ನಾಳಿಯಲ್ಲಿ ಪ್ರಚಾರ ಮಾಡುವರು ಎಂದು ವಿವರಿಸಿದರು.  ಮೇ 4ರಂದು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು. ಇದರಲ್ಲಿ ರೈತಾಪಿ ವರ್ಗ-ಕಾರ್ಮಿಕರು, ಶ್ರಮಿಕರು, ಬಡವರು, ಹಿಂದುಳಿದವರು ಸೇರಿದಂತೆ ಪ್ರತಿಯೊಬ್ಬರ ಕಲ್ಯಾಣಕ್ಕೆ ಅನುಕೂಲ ಕಲ್ಪಿಸುವ ಪ್ರಣಾಳಿಕೆ ಸಿದ್ದಪಡಿಸಲಾಗಿದೆ ಎಂದರು.  ಪ್ರಧಾನಿ ನರೇಂದ್ರ ಮೋದಿ ಇಂದು ರೈತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ. ರಾಜ್ಯ ಯಾವ ದಿಕ್ಕಿನತ್ತ ಸಾಗಬೇಕು ಎಂಬುದರ ಬಗ್ಗೆ ಸಲಹೆಸೂಚನೆಗಳನ್ನು ನೀಡಿದ್ದಾರೆ ಎಂದು ಶೋಭಾ ತಿಳಿಸಿದರು.

ಕಾಂಗ್ರೆಸ್‍ನವರು ಸೋಲುವ ಭೀತಿಯಿಂದಾಗಿ ನಮ್ಮ ಪಕ್ಷದ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇವರ ಆರೋಪಗಳನ್ನು ಕೇಳಲು ಕರ್ನಾಟಕದ ಜನತೆ ಮೂರ್ಖರಲ್ಲ. ಫಲಿತಾಂಶಕ್ಕೂಮುನ್ನವೇ ನಾವು ಸೋಲು ಒಪ್ಪಿಕೊಂಡಿದ್ದೇವೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿ ತನ್ನ ಪ್ರಚಾರಕ್ಕೆ ಬೇರೆ ಬೇರೆ ಜಿಲ್ಲೆಗಳಲ್ಲಿ ವಿಡಿಯೋ ವ್ಯಾನ್‍ಗಳ ಮೂಲಕ ಪ್ರಚಾರ ಮಾಡುತ್ತಿದೆ.ಇದಕ್ಕೆ ಚುನಾವಣಾ ಆಯೋಗ ಅನುಮತಿಯನ್ನೂ ನೀಡಿದೆ. ಆದರೆ ಬೆಂಗಳೂರು,ಕೋಲಾರ, ದಾವಣಗೆರೆ ಮತ್ತಿತರ ಕಡೆ ಕಾಂಗ್ರೆಸ್‍ನ ಕಿಡಿಗೇಡಿಗಳು ಕಲ್ಲು ಹೊಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನೀಡುತ್ತಿರುವ ಜಾಹಿರಾತಿನಲ್ಲಿ ಅಶ್ಲೀಲ ಪದಗಳನ್ನು ಬಳಸಲಾಗುತ್ತಿದೆ. ರೆಡ್ಡಿ-ಚೆಡ್ಡಿ ಎಂಬ ಪದಗಳನ್ನು ಬಳಸಲಾಗಿತ್ತು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರಿಂದ ತಡೆ ಹಿಡಿಯಲಾಗಿದೆ. ಇದರಿಂದ ಕಾಂಗ್ರೆಸ್‍ಗೆ ಕಪಾಳ ಮೋಕ್ಷವಾಗಿದೆ ಎಂದರು.  ಜನಾರ್ಧನ ರೆಡ್ಡಿ ಶ್ರೀರಾಮುಲು ಅವರ ಅತ್ಮೀಯರ ಗೆಳೆಯರು. ಅವರ ಪರ ಪ್ರಚಾರ ಮಾಡಿದರೆ ತಪ್ಪೇನಿಲ್ಲ. ಈ ಬಗ್ಗೆ ಹೆಚ್ಚು ವಿವಾದ ಬೇಡ ಎಂದು ಮನವಿ ಮಾಡಿದರು.

ಹಿರಿಯ ಪೊ ಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್, ಗುಪ್ತಚರ ವಿಭಾಗದ ಅಧಿಕಾರಿಗಳ ಸಭೆ ನಡೆಸುವುದು ಅಕ್ಷಮ್ಯ ಅಪರಾಧ. ತಮ್ಮ ಪತ್ನಿ ಸೋಲುತ್ತಾರೋ, ಗೆಲ್ಲುತ್ತಾರೊ ಎಂಬುದನ್ನು ತಿಳಿಯಲು ಸಭೆ ನಡೆಸಿರಬೇಕು. ಕಾಂಗ್ರೆಸ್ ಹೇಗೆ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತದೆ ಎಂಬುದಕ್ಕೆ ಇದು ತಾಜಾ ನಿದರ್ಶನ ಎಂದರು.

Facebook Comments

Sri Raghav

Admin