‘ಮೋದಿಯನ್ನು ಪ್ರಧಾನಿ ಮಾಡಿದ್ದು ಆರ್‍ಎಸ್‍ಎಸ್ ಅಥವಾ ಬಿಜೆಪಿಯಲ್ಲ, 5 ಕಾರ್ಪೊರೇಟ್ ಕಂಪೆನಿಗಳು’

ಈ ಸುದ್ದಿಯನ್ನು ಶೇರ್ ಮಾಡಿ

Devegowda-02

ಬೆಂಗಳೂರು, ಮಾ.8-ನರೇಂದ್ರ ಮೋದಿಯನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು ಆರ್‍ಎಸ್‍ಎಸ್ ಅಥವಾ ಬಿಜೆಪಿಯಲ್ಲ. ಬದಲಾಗಿ ಗುಜರಾತ್‍ನ ಐದು ಕಾರ್ಪೊರೇಟ್ ಸಂಸ್ಥೆಗಳು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗಂಭೀರ ಆರೋಪ ಮಾಡಿದರು,.  ಪ್ರೆಸ್‍ಕ್ಲಬ್ ಮತ್ತು ವರದಿಗಾರರ ಒಕ್ಕೂಟ ಜಂಟಿಯಾಗಿ ಆಯೋಜಿಸಿದ್ದ ಸಂವಹನ ಕಾರ್ಯಕ್ರಮದಲ್ಲಿ ಭಾಗವಹಿಸಿ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಮೋದಿಯವರು ಪ್ರಧಾನಿ ಅಭ್ಯರ್ಥಿಯನ್ನಾಗಿ ಕಾರ್ಪೊರೇಟ್ಸಂಸ್ಥೆಗಳು ಆಯ್ಕೆ ಮಾಡಿದಾಗ ಆರ್‍ಎಸ್‍ಎಸ್ ಅನುಮತಿ ನೀಡಿತ್ತು. ಬಿಜೆಪಿಯಲ್ಲಿ ಗೊಂದಲಗಳಿದ್ದವು. ಆದರೆ ಆರ್‍ಎಸ್‍ಎಸ್‍ನ ಆದೇಶಕ್ಕೆ ತಲೆಬಾಗಿ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಮೋದಿ ಪ್ರಧಾನಿ ಅಭ್ಯರ್ಥಿಯಾಗುವ ಮೊದಲು ಬಿಹಾರದಲ್ಲಿ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಡಿದ್ದರು.

ಆ ಕಾರ್ಯಕ್ರಮಕ್ಕೂ ಮುನ್ನ ಮೋದಿ ಹತ್ಯೆಗೆ ಸಂಚು ನಡೆದಿದೆ ಎಂದು ಕೆಲವರನ್ನು ಬಂಧಿಸಲಾಗಿತ್ತು. ಬಿಜೆಪಿಯವರು ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸುವಲ್ಲಿ ನಿಪುಣರು. ದುರಂತವೆಂದರೆ 10 ವರ್ಷ ಕಾಂಗ್ರೆಸ್‍ನ ಆಡಳಿತ ಜನರಿಗೆ ಬೇಸರ ತಂದಿತ್ತು. ಹಾಗಾಗಿ ಕ್ರಮೇಣ ಕಾಂಗ್ರೆಸ್‍ನ ಶಕ್ತಿ ಕುಂದುತ್ತಾ ಬಂದಿದೆ ಎಂದು ಹೇಳಿದರು.  ವಾಜಪೇಯಿ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತೇನೆ. ಅವರು ಬೆಂಗಳೂರಿಗೆ ಬಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾಷಣ ಮಾಡಿದಾಗ ನಾನು ಕಾರಿನಲ್ಲಿ ಕುಳಿತು ಅವರ ಮಾತನ್ನು ಕೇಳಿದ್ದೆ. ಆದರೆ ಈಗಿನ ಪ್ರಧಾನಿ ಮೋದಿಯವರು ಆಯಾ ಸಂದರ್ಭಕ್ಕೆ ತಕ್ಕಂತೆ ಮಾತನಾಡುತ್ತಾರೆ. ಪ್ರಧಾನಿಯಾದ ಮೇಲೆ ಭ್ರಷ್ಟಾಚಾರ ಮುಕ್ತ ಭಾರತ, ಕಾಂಗ್ರೆಸ್ ಮುಕ್ತ ಭಾರತ, ಮೇಕ್ ಇನ್ ಇಂಡಿಯಾ, ಸ್ಟರ್ಟ್‍ಅಪ್ ಸೇರಿದಂತೆ ನಾನಾ ಯೋಜನೆಗಳನ್ನು ಘೋಷಿಸಿದ್ದಾರೆ. ಆದರೆ ಯಾವುದೂ ಫಲಾನುಭವಿಗಳಿಗೆ ತಲುಪಿಲ್ಲ. ಎರಡು ಮುಕ್ಕಾಲು ವರ್ಷದಲ್ಲಿ ಅವರು ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದರೆ ಸ್ವಕ್ಷೇತ್ರ ವಾರಣಾಸಿಯಲ್ಲಿ ಮೋದಿ 3 ದಿನ ಚುನಾವಣೆಗಾಗಿ ರೋಡ್‍ಶೋ ನಡೆಸುವ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಮೋದಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡುತ್ತಾರೆ.

ಲಕ್ಷಾಂತರ ಜನರನ್ನು ಸೇರಿಸುತ್ತಾರೆ. ರಾಜಕೀಯದಲ್ಲಿರುವ ನನಗೆ ಅವೆಲ್ಲಾ ಏನೂ ಹೊಸದಲ್ಲ. ಜನರನ್ನು ಹೇಗಾದರೂ ಕರೆತರಬಹುದು. ಆದರೆ ಆ ಕಾರ್ಯಕ್ರಮಗಳಿಗೆ ದುಡ್ಡು ಎಲ್ಲಿಂದ ಬರುತ್ತದೆ ಎಂಬುದು ಮುಖ್ಯ.  ಈಗ ರಾಷ್ಟ್ರದಲ್ಲಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅಪೂರ್ವ ಸಹೋದರರಂತೆ ಕೆಲಸ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ಉತ್ತರಪ್ರದೇಶದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಒಂದು ವೇಳೆ ಅಲ್ಲಿ ಬಿಜೆಪಿ ಗೆದ್ದರೆ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಿಜೆಪಿಯನ್ನು ನಿಯಂತ್ರಿಸಲು ಸಾದ್ಯವಾಗುವುದಿಲ್ಲ.  ನಾನು ತೃತೀಯ ರಂಗ ಸ್ಥಾಪನೆಗೆ ಬಹಳಷ್ಟು ಪ್ರಯತ್ನ ಮಾಡಿದೆ. ಆದರೆ ಯಶಸ್ವಿಯಾಗಲಿಲ್ಲ. ನನಗೆ ಪ್ರಧಾನಿಯಾಗುವ ಆಸೆಯಿಲ್ಲ. ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ. ತೃತೀಯ ರಂಗ ಬಲಗೊಳ್ಳಲಿ ಎಂದು ಎಷ್ಟೇ ಹೋರಾಟ ಮಾಡಿದರೂ ಅದು ಈಡೇರಲಿಲ್ಲ.

ದೇಶದಲ್ಲಿ ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದ ಎಲ್ಲಾ ಕಡೆ ಪ್ರಾದೇಶಿಕ ಪಕ್ಷಗಳು ದುರ್ಬಲವಾಗಿವೆ. ಮಮತಾ ಬ್ಯಾನರ್ಜಿ ಅವರನ್ನು ದುರ್ಬಲಗೊಳಿಸಲು ಬಿಜೆಪಿ ಸಾಕಷ್ಟು ಪ್ರಯತ್ನ ಮಾಡಿ ಬಿಜೆಪಿ ಸೋತಿದೆ. ನೋಟ್ ಬ್ಯಾನ್ ವಿಷಯವಾಗಿ ಮಮತಾ ಬ್ಯಾನರ್ಜಿ ಮಾತ್ರ ಗಟ್ಟಿ ದನಿಯಲ್ಲಿ ಕಠಿಣ ಟೀಕೆಗಳನ್ನು ಮಾಡಿದರು. ತಮಿಳುನಾಡು, ಕೇರಳ ಸೇರಿದಂತೆ ಬಹಳಷ್ಟು ಕಡೆ ಬಿಜೆಪಿ ಪ್ರಯತ್ನ ಮಾಡಿದರೂ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿಲ್ಲ.
ಕರ್ನಾಟಕದಲ್ಲಿ ಅಧಿಕಾರದ ಬಾಗಿಲು ತೆರೆಯಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.  ಕೇಂದ್ರ ಸರ್ಕಾರ ಪೂರ್ವಸಿದ್ಧತೆ ಇಲ್ಲದೆ ನೋಟ್ ಬ್ಯಾನ್ ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದ ದೇವೇಗೌಡರು, ಅದರ ಬೆನ್ನಲ್ಲೇ ರಾಜಕೀಯ ಕಾರಣಕ್ಕಾಗಿ ಆದಾಯ ತೆರಿಗೆ, ಸಿಬಿಐ, ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಖಂಡನಾರ್ಹ.

ಇತ್ತೀಚೆಗೆ ಕಾನೂನು ತಿದ್ದುಪಡಿ ತಂದು ಆದಾಯ ತೆರಿಗೆ ದಾಳಿಗೆ ಯಾವುದೇ ಸಂಸ್ಥೆಗಳ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಮಾರ್ಪಾಡು ಮಾಡಿಕೊಳ್ಳಲಾಗಿದೆ. ಇದೂ ಕೂಡ ಅಪಾಯಕಾರಿ ಎಂದರು.  ನನಗೆ ಪ್ರಧಾನಿ ಮೋದಿಯವರ ಬಗ್ಗೆ ಗೌರವವಿದೆ. ತೃತೀಯ ರಂಗದ ಬಗ್ಗೆ ಗುಜರಾತ್ ಮೋದಿಯವರು ಮಾಡಿದ ಚರ್ಚೆಗೆ ನಾನು ಕಠಿಣವಾಗಿಯೇ ಪ್ರತಿಕ್ರಿಯಿಸಿದ್ದೆ. 280 ಸ್ಥಾನ ಗಳಿಸಿ ಕೇಂದ್ರದಲ್ಲಿ ಸ್ವಂತ ಬಲದಿಂದ ಅಧಿಕಾರ ಹಿಡಿದರೆ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ್ದೆ. ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಿ ಹಿಡಿಯಿತು. ನನ್ನ ಮಾತಿನಂತೆ ರಾಜೀನಾಮೆ ನೀಡಲು ಹೋಗಿದ್ದೆ. ಆ ಸಂದರ್ಭದಲ್ಲಿ ಅತ್ಯಂತ ಗೌರವವಾಗಿ ನಡೆದುಕೊಂಡ ಮೋದಿಯವರು, ನೀವು ಹಿರಿಯರು ರಾಜಕೀಯದಲ್ಲಿ ಇಂತಹ ಹೇಳಿಕೆಗಳು ಸಾಮಾನ್ಯ. ರಾಜೀನಾಮೆ ನೀಡಬೇಡಿ, ಅಭಿವೃದ್ಧಿ ವಿಷಯ ಬಂದಾಗ ನಿಮ್ಮ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿzದ್ದಲ್ಲದೆ, ಕಾರಿನವರೆಗೂ ಬಂದು ನನ್ನನ್ನು ಬೀಳ್ಕೊಟ್ಟಿದ್ದರು. ಮೋದಿ ಬದಲಾಗಿದ್ದಾರೆ ಎಂದು ನಾನು ಭಾವಿಸಿದ್ದೆ. ಆದರೆ ಇತ್ತೀಚಿನ ಅವರ ಮಾತಿನ ಧೋರಣೆಗಳು ನನ್ನಲ್ಲಿ ಬೇಸರ ಮೂಡಿಸಿವೆ ಎಂದು ಹೇಳಿದರು.

ನಾನು ರಾಜಕೀಯಕ್ಕೆ ಬಂದಾಗ ಇದ್ದ ವಾತಾವರಣ ಈಗಿಲ್ಲ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಎಲ್ಲದರಲ್ಲೂ ಮೌಲ್ಯಗಳು ಕುಸಿತವಾಗಿವೆ. ಈ ಬಗ್ಗೆ ನನಗೆ ತುಂಬಾ ನೋವಿದೆ. ಹಿಂದೆ ಪ್ರಧಾನಿಯಾಗಿದ್ದ ಮನ್‍ಮೋಹನ್ ಅವರು ಪ್ರಾಮಾಣಿಕ ವ್ಯಕ್ತಿ. ದೇಶದ ಆರ್ಥಿಕತೆಯನ್ನು ಗಟ್ಟಿಗೊಳಿಸಿದ ತಜ್ಞ. ಆದರೆ ಕೆಲವು ನಿರ್ಣಯಗಳು ಅವರನ್ನು ಸಂಶಯದಿಂದ ನೋಡು ವಂತೆ ಮಾಡಿವೆ. ಭ್ರಷ್ಟಾಚಾರ ಎಂಬುದು ಕೇವಲ ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ನಡೆದಿಲ್ಲ. ಸಾಮಾಜಿಕ ಜಾಲತಾಣ ಪ್ರಬಲವಾಗಿರುವ ಈ ಕಾಲದಲ್ಲಿ ಹೆಚ್ಚು ಪ್ರಚಾರ ಪಡೆಯುವವರು ಗೆಲ್ಲುತ್ತಾರೆ. 40 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ 46 ಸ್ಥಾನ ಗೆಲ್ಲಲು ಆಗಿಲ್ಲ. ಸಂಸತ್‍ನಲ್ಲಿ ಪ್ರತಿಪಕ್ಷ ಎಂಬುದು ಇಲ್ಲ ಎಂದು ದೇವೇಗೌಡರು ವಿಷಾದಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin