ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿದರೇ ದೊಡ್ಡವನಾಗುತ್ತೇನೆ ಎಂಬ ಭ್ರಮೆ ಸಿಎಂರದ್ದು : ಬಿಎಸ್’ವೈ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--Yadiyurappa-
ತಿ.ನರಸೀಪುರ, ಮಾ.6- ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿದರೇ ನಾನು ದೊಡ್ಡವನಾಗುತ್ತೇನೆ ಎಂಬ ಭ್ರಮೆಯಲ್ಲಿರುವ ಸಿದ್ದರಾಮಯ್ಯ ತನ್ನ ಸ್ಥಾನ ಏನು, ಪ್ರಧಾನಮಂತ್ರಿ ಸ್ಥಾನ ಏನು ಎಂಬುದನ್ನು ತಿಳಿದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು. ಪಟ್ಟಣದ ವಿದ್ಯೋದಯ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಸಂಘಟನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಸಮುದಾಯಗಳನ್ನು ಒಡೆದು, ಹಣ ಹೆಂಡ, ತೋಳ್ಬಲದಿಂದ ಅಧಿಕಾರ ಹಿಡಿಯಬಹುದೆಂಬ ಭ್ರಮೆಯಲ್ಲಿರುವ ಸಿದ್ದರಾಮಯ್ಯನಿಗೆ ತ್ರಿಪುರ, ನಾಗಲ್ಯಾಂಡ್ ರೀತಿಯಲ್ಲೇ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಕಾರ್ಯಕರ್ತರು, ಯುವಕರು ಮನೆಮನೆಗೆ ತೆರಳಿ ಪಕ್ಷವನ್ನು ಸಂಘಟಿಸುವ ಮೂಲಕ ರಾಜ್ಯದ 150 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಲು ಪಣ ತೊಡಬೇಕೆಂದರು. ಪಕ್ಷದ ಕಾರ್ಯಕರ್ತರು ಕೇವಲ ಘೋಷಣೆ ಕೂಗುವ ಮೂಲಕ ಮೈಮರೆಯಬೇಡಿ. ಮನೆಮನೆಗೆ ತೆರಳಿ ಮತದಾರರನ್ನು ಭೇಟಿ ಮಾಡುವ ಮೂಲಕ ಪ್ರತಿ ಬೂತ್ ಮಟ್ಟದಲ್ಲಿ ಶೇ.70 ಮತ ಪಡೆಯುವಂತಾಗಲು ಕಾರ್ಯ ನಿರ್ವಹಿಸಿ ಎಂದರು.

ಕ್ಷೇತ್ರದಲ್ಲಿ ಅಧಿಕಾರ ಹಿಡಿದಿರುವ ಮಹದೇವಪ್ಪ ಹಾಗೂ ಅವರ ಮಗ ಸುನೀಲ್‍ಬೋಸ್ ನಿರಂತರವಾಗಿ ಆಕ್ರಮ ಮರಳು ಲೂಟಿ ಮಾಡಿದ್ದಲ್ಲದೇ ಪಕ್ಷದ ಕಾರ್ಯಕರ್ತರು, ಬಡವರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದು, ನಾನು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ತಕ್ಷಣ ಮರಳು ನೀತಿಯನ್ನು ಸರಿಪಡಿಸುವ ಜೊತೆಗೆ ಬಡವರು, ಪಕ್ಷದ ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ಕೇಸನ್ನು ವಾಪಸ್ ಪಡೆಯುತ್ತೇನೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಎಸ್.ಶಂಕರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ಕಾರ್ಯಕರ್ತರ ವತಿಯಿಂದ ಯಡಿಯೂರಪ್ಪರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ 8 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮಾಜಿ ಸಚಿವ ಶ್ರೀರಾಮುಲ್, ಸಿ.ಪಿ.ಯೋಗೇಶ್ವರ, ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ, ಮಾಜಿ ಜಿ.ಪಂ ಅಧ್ಯಕ್ಷ ರಾಮಚಂದ್ರು, ಮಾಜಿ ಶಾಸಕ ಭಾರತೀಶಂಕರ್, ಜಿ.ಪಂ ಉಪಾಧ್ಯಕ್ಷ ಕೈಯಂಬಳ್ಳಿ ನಟರಾಜು, ಕಾ.ಪು.ಸಿದ್ದಲಿಂಗಸ್ವಾಮಿ, ಶಶಿಕಲಾ ನಾಗರಾಜು, ಕ್ಷೇತ್ರಾಧ್ಯಕ್ಷ ಪರಶಿವಮೂರ್ತಿ, ತೋಟದಪ್ಪ ಬಸವರಾಜು, ಮಹೇಶ್, ಇತರರು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಶ್ರೀ ಗುಂಜಾನರಸಿಂಹಸ್ವಾಮಿ ದೇಗುಲಕ್ಕೆ ತೆರಳಿ ಬಿ.ಎಸ್.ಯಡಿಯೂರಪ್ಪ ದರ್ಶನ ಪಡೆದರು.

Facebook Comments

Sri Raghav

Admin