ಮೋದಿ, ಅಮಿತ್ ಶಾ ಪಕ್ಕಾ ಮೋಸಗಾರರು, ಬಿಜೆಪಿ ಬೆಂಬಲಿಸಬೇಡಿ : ರಾಮ್‍ಜೇಠ್ಮಲಾನಿ

ಈ ಸುದ್ದಿಯನ್ನು ಶೇರ್ ಮಾಡಿ

Ramjetmalani--01

ಬೆಂಗಳೂರು, ಮೇ 7- ವಿದೇಶದಿಂದ ಕಪ್ಪು ಹಣ ತರುತ್ತೇವೆಂದು ಭರವಸೆ ನೀಡಿದ್ದ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತು ನಂಬಿ ನಾನು ಮೂರ್ಖನಾದೆ. ದೇಶದ ಜನತೆಗೆ ಮೋಸ ಮಾಡಿರುವ ಈ ಜೋಡಿಗೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಕೇಂದ್ರದ ಮಾಜಿ ಸಚಿವ, ಹಿರಿಯ ವಕೀಲರಾದ ರಾಮ್‍ಜೇಠ್ಮಲಾನಿ ಇಂದಿಲ್ಲಿ ಗುಡುಗಿದರು.

ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, 1400 ಭಾರತೀಯ ರ್ಯಾಸ್ಕಲ್‍ಗಳ 90 ಲಕ್ಷ ಕೋಟಿ ಕಪ್ಪುಹಣ ವಿದೇಶದಲ್ಲಿದೆ. ಇದನ್ನು ಭಾರತಕ್ಕೆ ತರಲು ನಾನು ಮೊದಲಿನಿಂದಲೂ ಹೋರಾಟ ಮಾಡಿದೆ. 2009ರಲ್ಲಿ ಮೋದಿ ಅವರು ನನ್ನನ್ನು ಭೇಟಿ ಮಾಡಿ ನನ್ನ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರು. ಇದನ್ನು ನಾನು ನಂಬಿದ್ದೆ ಮತ್ತು ಅಮಿತ್ ಶಾ ಅವರು ನನ್ನ ಮನೆಯಲ್ಲೇ ಕೂತು ನನ್ನ ಹೋರಾಟಕ್ಕೆ ಬೆಂಬಲ ನೀಡುವ ಭರವಸೆ ನೀಡಿದ್ದರು. ಆ ಮೇಲೆ ಗೊತ್ತಾಯ್ತು ಇವರು ನಮ್ಮ ಮನೆಯಲ್ಲಿ ಏಕೆ ಕೂತಿದ್ದರು ಎಂಬುದು. ಅವರ ಮೇಲಿನ ಕೊಲೆ ಕೇಸಿನಿಂದ ಪಾರಾಗಬೇಕಿತ್ತು. ಅದಕ್ಕಾಗಿ ನನ್ನ ಮನೆಯಲ್ಲಿದ್ದರು ಎಂದು ಜೇಠ್ಮಲಾನಿ ಹೇಳಿದರು.

2014ರ ಲೋಕಸಭೆ ಚುನಾವಣೆ ಗೆದ್ದ ನಂತರ ಕಪ್ಪು ಹಣದ ವಿರುದ್ಧ ಹೋರಾಟವನ್ನು ಕೈ ಬಿಡುವಂತೆ ಪರೋಕ್ಷ ಸಲಹೆಗಳನ್ನು ನನಗೆ ನೀಡಲಾರಂಭಿಸಿದರು. ಆಗ ನಾನು ಮೂರ್ಖ ನಿರ್ಧಾರ ಮಾಡಿದ್ದೆ ಎಂಬುದು ಅರ್ಥವಾಯಿತು. ಆದರೂ ನನ್ನ ಹೋರಾಟವನ್ನು ಕೈ ಬಿಟ್ಟಿಲ್ಲ. ಸುಪ್ರೀಂಕೋರ್ಟ್‍ನಲ್ಲಿ ಕಪ್ಪಹಣದ ವಿರುದ್ಧ ಹೋರಾಟವನ್ನು ಮುಂದುವರೆಸಿದ್ದೇನೆ. ಜುಲೈ 15ರಂದು ಇದರ ವಿಚಾರಣೆ ಬರಲಿದೆ ಎಂದು ಅವರು ಹೇಳಿದರು. ಜರ್ಮನ್, ಸ್ವಿಜರ್‍ಲ್ಯಾಂಡ್ ಕಪ್ಪು ಕುಬೇರರ ಪಟ್ಟಿ ಪ್ರಕಟಿಸಲು ಸಿದ್ದವಿದೆ. ಆದರೆ, ಇಂದಿನ ಸರ್ಕಾರ ಸರಿಯಾದ ನಿರ್ಧಾರ ಕೈಗೊಳ್ಳಲಿಲ್ಲ. ಕಪ್ಪು ಹಣವನ್ನು ವಾಪಸ್ ತರುವುದಾಗಿ ಚುನಾವಣೆಯಲ್ಲಿ ಭರವಸೆ ನೀಡಿ ಗೆದ್ದ ಮೋದಿ ಆ ಭರವೆಯನ್ನು ಈಡೇರಿಸಲಿಲ್ಲ. ಲಕ್ಷಾಂತರ ಕೋಟಿ ಹಣವನ್ನು ವಾಪಸ್ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂದು ಹೇಳಿದ ಅವರು ಹಾಕಲಿಲ್ಲ.

ಬಿಜೆಪಿ, ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಈ ಸಂಬಂಧ 15 ಪ್ರಶ್ನೆಗಳನ್ನು ಕೇಳಿದ್ದೆ. ಈವರೆಗೂ ಉತ್ತರ ಬಂದಿಲ್ಲ. ಅವರು ಮೋಸಗಾರರು. ಅವರಿಗೆ ಈ ವಿಧಾನಸಭೆ ಚುನಾವಣೆ ಮೂಲಕ ತಕ್ಕ ಪಾಠ ಕಲಿಸಬೇಕೆಂದು ಹೇಳಿದರು. ಹಾಗೆಂದ ಮಾತ್ರಕ್ಕೆ ನಾನು ಕಾಂಗ್ರೆಸ್ ಬೆಂಬಲಿಸಿ ಎಂದು ನಾನು ಹೇಳುವುದಿಲ್ಲ. ನೀವು ಯಾರಿಗಾದರೂ ಮತ ಹಾಕಿ. ಆದರೆ, ಬಿಜೆಪಿಯನ್ನು ಮಾತ್ರ ಬೆಂಬಲಿಸಬೇಡಿ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.

ನಾಲ್ಕು ವರ್ಷಗಳ ಕಾಲ ಮೋದಿ ಮತ್ತು ಶಾ ಅವರು ಬರೀ ಸುಳ್ಳುಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಬಿಜೆಪಿ ಆಡಳಿತ ಪಕ್ಷವಾಗಿರಲು, ಕಾಂಗ್ರೆಸ್ ಪ್ರತಿಪಕ್ಷವಾಗಿರಲು ಅನರ್ಹ ಎಂದು ಈ ಹಿಂದೆಯೇ ಹೇಳಿದ್ದೆ. 2019ರ ಚುನಾವಣೆಯಲ್ಲಿ ಮೋದಿ ಹೀನಾಯವಾಗಿ ಸೋಲುತ್ತಾರೆ. ಆ ಪಕ್ಷದಲ್ಲಿ ಶೇ.37ರಷ್ಟು ಕ್ರಿಮಿನಲ್ ಹಿನ್ನೆಲೆಯುಳ್ಳವರಿದ್ದಾರೆ ಎಂದು ತಿಳಿಸಿದರು.

ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರುವ ಸಂಬಂಧ ಜರ್ಮನ್‍ಗೆ ಹೋಗಿದ್ದೆ. ಆ ದೇಶದವರು ಪಟ್ಟಿ ಕೊಡಲು ಸಿದ್ದರಿದ್ದರು. ಆದರೆ, ನಮ್ಮ ದೇಶದ ಆಡಳಿತ ಮತ್ತು ಪ್ರತಿಪಕ್ಷಗಳು ನೀಡಬೇಕಿತ್ತು. ಈ ಸಂಬಂಧ ಎಲ್.ಕೆ.ಅಡ್ವಾಣಿ, ಮುರಳಿಮನೋಹರ ಜೋಷಿ ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದೆ. ಇದಕ್ಕೆ ಸ್ಪಂದಿಸಿರಲಿಲ್ಲ. ಈ ವಿಷಯವನ್ನೇ ಬಂಡವಾಳವಾಗಿಟ್ಟುಕೊಂಡು 2014ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೋದಿ, 2015ರಲ್ಲಿ ಕಪ್ಪು ಹಣದ ವಿಷಯ ಒಂದು ಗಿಮಿಕ್. ಇದೊಂದು ದೊಡ್ಡ ಜೋಕ್ ಎಂದು ಹೇಳಿದ್ದರು. ಇವರ ಬಣ್ಣ ಬಯಲು ಮಾಡಲು ನಾನು ಬೆಂಗಳೂರಿಗೆ ಬಂದಿದ್ದೇನೆ ಯಾವುದೇ ಕಾರಣಕ್ಕೂ ಇವರನ್ನು ಬೆಂಬಲಿಸಬೇಡಿ. ಇವರಿಗೆ ತಕ್ಕ ಪಾಠ ಕಲಿಸಬೇಕೆಂದು ರಾಮ್‍ಜೇಠ್ಮಲಾನಿ ಪುನರುಚ್ಚಾರ ಮಾಡಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin