ಮೋದಿ, ಅಮಿತ್ ಷಾ, ಉಮಾಭಾರತಿಗೆ ಈಶ್ವರಪ್ಪ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

eshwarappa

ಬೆಂಗಳೂರು,ಸೆ.17-ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಾವೇರಿಯಿಂದ ತಮಿಳ್ನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದರಿಂದ ರಾಜ್ಯದ ಜನ ಎದುರಿಸುತ್ತಿರುವ ಆತಂಕವನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರಿಗೆ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಇಂದು ಮೂವರು ನಾಯಕರಿಗೆ ಪತ್ರ ಬರೆದಿರುವ ಈಶ್ವರಪ್ಪ, ಕಾವೇರಿ ನದಿ ನೀರಿನ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಪರಿಹರಿಸಲು ಮಧ್ಯಸ್ಥಿಕೆ ವಹಿಸಲು ಕೇಂದ್ರ ಸಚಿವರಾದ ಉಮಾಭಾರತಿ ಮುಂದೆ ಬಂದಿದ್ದಾರೆ. ಹೀಗೆಯೇ ಮೂವರೂ ಹಿರಿಯ ನಾಯಕರು ಸೇರಿ ರಾಜ್ಯದ ಜನರ ಅತಂಕವನ್ನು ದೂರ ಮಾಡಲು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

ಸೆ. 5 ಹಾಗೂ 12 ರಂದು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕದ ಕಾವೇರಿ ನದಿ ಪಾತ್ರದಲ್ಲಿ ಆತಂಕದ ಸ್ಥಿತಿ ಉಂಟಾಗಿದೆ.ಇದನ್ನು ರಾಷ್ಟ್ರೀಯ ನಾಯಕರ ಗಮನಕ್ಕೆ ತರುವಂತೆ ಹಿರಿಯ ಪತ್ರಕರ್ತರು ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು. ಕಾವೇರಿ ನದಿ ನೀರಿನ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿರುವುದು ಬೇರೆ ವಿಷಯ.ಆದರೆ ಪದೇ ಪದೇ ಸುಪ್ರೀಂಕೋರ್ಟ್ ಕರ್ನಾಟಕದ ವಿರುದ್ಧವಾಗಿ ಯಾಕೆ ತೀರ್ಪು ನೀಡುತ್ತಿದೆ?ಎಂಬುದು ತಮಗೆ ಅರ್ಥವಾಗುತ್ತಿಲ್ಲ ಎಂದರು.
ಕರ್ನಾಟಕದ ಕಾವೇರಿ ಕಣಿವೆ ಪ್ರದೇಶದಲ್ಲಿ ಲಭ್ಯವಿರುವ ನೀರು ಎಷ್ಟು ಎಂಬುದು ಗೊತ್ತು.ಅದೇ ರೀತಿ ತಮಿಳುನಾಡು ತನ್ನಲ್ಲಿರುವ ಸಾಂಬಾ ಬೆಳೆಗೆ ನೀರು ಕೇಳುತ್ತಿದೆ ಎಂಬುದೂ ಗೊತ್ತು.ಆದರೂ ಕರ್ನಾಟಕಕ್ಕೆ ವ್ಯತಿರಿಕ್ತವಾಗಿ ತೀರ್ಪು ಬರಲು ಏನು ಕಾರಣ ಅನ್ನುವುದು ತಿಳಿಯುತ್ತಿಲ್ಲ ಎಂದರು.

ರಾಜಕೀಯ ಏನಾದರೂ ಇರಲಿ,ಆದರೆ ಜನ ಆತಂಕದಲ್ಲಿದ್ದಾರೆ ಎಂಬುದು ಮಾತ್ರ ನಿಜ.ಹೀಗಾಗಿ ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ಅಮಿತ್ ಷಾ ಹಾಗೂ ಕೇಂದ್ರ ಸಚಿವೆ ಉಮಾಭಾರತಿ ಅವರಿಗೆ ತುರ್ತು ಪತ್ರ ಬರೆದು ಜನರ ಆತಂಕವನ್ನು ಅವರ ಗಮನಕ್ಕೆ ತರುತ್ತೇನೆ ಎಂದರು. ಮಹಾರಾಷ್ಟ್ರದ ಲಾತೂರ್‍ನಲ್ಲಿ ಇತ್ತೀಚೆಗೆ ಸಂಭವಿಸಿದ ಜಲಕ್ಷಾಮದ ಹಿನ್ನೆಲೆಯಲ್ಲಿ ಜನ ಹನಿ ನೀರಿಗೂ ಪರದಾಡುವಂತಾಯಿತು.ಅಂತಹ ಸ್ಥಿತಿ ಕರ್ನಾಟಕಕ್ಕೆ ಬರುವುದು ಬೇಡ ಎಂಬ ನಿಯೋಗದ ಕಳಕಳಿಗೆ ಸಹಮತ ವ್ಯಕ್ತಪಡಿಸಿದ ಅವರು,ಈ ಪರಿಸ್ಥಿತಿ ಶಾಂತಿಯುತವಾಗಿ ಇತ್ಯರ್ಥವಾಗುವಂತೆ ಮಾಡಬೇಕು ಎಂದು ಹೇಳಿದರು. ಮಹದಾಯಿ ನದಿ ನೀರಿನ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆ.ಆ ರಾಜ್ಯದ ಚುನಾವಣೆ ಹತ್ತಿರದಲ್ಲಿರುವುದರಿಂದ ನೀರು ಕೊಡಲು ಮೋದಿಯವರು ಬಯಸಿದರೂ ಅಲ್ಲಿನ ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ.

ಹೀಗಾಗಿ ಪ್ರಧಾನಿಯವರು ಮಧ್ಯೆ ಪ್ರವೇಶಿಸಿ ಮಹದಾಯಿ ನೀರು ಕೊಡಿಸಲು ಯತ್ನಿಸಿದರೆ ಅದರ ರಾಜಕೀಯ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು. ಮಹದಾಯಿ ನದಿ ನೀರಿನಿಂದ ವ್ಯರ್ಥವಾಗಿ 250 ಟಿಎಂಸಿ ನೀರು ಸಮುದ್ರಕ್ಕೆ ಹೋಗುತ್ತಿದೆ ಎಂಬುದು ತಿಳಿದ ಕೂಡಲೇ ಕೇಂದ್ರ ಸಚಿವರು,ನೀರು ಬಿಡಲು ಸಮಸ್ಯೆಯೇನು?ಎಂದವರೇ ಅಗತ್ಯದ ಕ್ರಮ ಕೈಗೊಂಡರು. ಆದರೆ ಕಾಂಗ್ರೆಸ್ ನಾಯಕರು,ಮಹದಾಯಿ ನದಿ ನೀರನ್ನು ಬಿಡುಗಡೆ ಮಾಡಿಸಲು ಸೋನಿಯಾಗಾಂಧಿ ಒಪ್ಪಿದ್ದಾರೆ. ಆದರೆ ಇದಾದ ತಕ್ಷಣವೇ ಸೋನಿಯಾಗಾಂಧಿ ಅವರು,ಯಾವ ಕಾರಣಕ್ಕೂ ಗೋವಾದಿಂದ ಮಹದಾಯಿ ನದಿ ನೀರನ್ನು ಬಿಡುಗಡೆ ಮಾಡಲು ತಮ್ಮ ಸಹಮತವಿಲ್ಲ ಎಂದರು. ಹೀಗೆ ಒಂದು ವಿಷಯವನ್ನು ರಾಜಕೀಯ ಲಾಭಕ್ಕಾಗಿ ಪಡೆದುಕೊಂಡರೆ ಸಮಸ್ಯೆಯನ್ನು ಬಗೆಹರಿಸಲು ಹೇಗೆ ಸಾಧ್ಯ?ಎಂದು ಪ್ರಶ್ನಿಸಿದ ಅವರು,ಎಲ್ಲಿಯವರೆಗೆ ಇಂತಹ ವಿಷಯದಲ್ಲಿ ರಾಜಕೀಯ ನಡೆಯುತ್ತದೆಯೋ ಅಲ್ಲಿಯ ತನಕ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ವಿಧಾನಸೌಧದ ಮೊದಲ ಅಂತಸ್ತಿನಲ್ಲಿರುವ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕರ ಕಛೇರಿಗೆ ಹೋಗಿ ಈಶ್ವರಪ್ಪ ಅವರನ್ನು ಭೇಟಿ ಮಾಡಿದ ಹಿರಿಯ ಪತ್ರಕರ್ತರಾದ ಆರ್.ಟಿ.ವಿಠ್ಠಲಮೂರ್ತಿ ಸೇರಿದಂತೆ ಕೆಲ ಪತ್ರಕರ್ತರು ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಗಣನೀಯ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗಿದೆ.ಅದೇ ರೀತಿ ಈ ವಿಷಯದಲ್ಲಿ ರಾಜ್ಯದ ಜನರ ಅತಂಕವನ್ನು ಕೇಂದ್ರದ ನಾಯಕರಿಗೆ ಯಾರೂ ತಿಳಿಸುತ್ತಿಲ್ಲ ಎಂಬ ಭಾವನೆ ಜನರಲ್ಲಿದೆ.ಇದನ್ನು ನಿವಾರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಸಲ್ಲಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin