ಮೋದಿ ಆಡಳಿತ ಜನತೆಗೆ ನೆಮ್ಮದಿ ತಂದಿದೆ : ಶಿವಕುಮಾರ ಉದಾಸಿ

ಈ ಸುದ್ದಿಯನ್ನು ಶೇರ್ ಮಾಡಿ

BELAGAM10

 

ನರೇಗಲ್ಲ,ಆ.30- ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಜನತೆಗೆ ನೆಮ್ಮದಿಯನ್ನು ತಂದಿದೆಯಲ್ಲದೆ, ಜಗತ್ತಿನಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.ಕೋಟುಮಚಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಂಸದರ ಪ್ರದೇಶಾಭಿವೃದ್ದಿ ಅನುದಾನದಲ್ಲಿ ನಿರ್ಮಿಸಿದ ವ್ಯಾಪಾರಿ ಮಳಿಗೆಗೆಳನ್ನು ಮತ್ತು ವೀರಯೋಧ ಬಸವರಾಜ ರಮಾಣಿ ಅವರ ಸಮಾಧಿ ಬಳಿ ನಿರ್ಮಿಸಿದ ಬಸ್ ತಂಗು ದಾಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2022ರ ವೇಳೆಗೆ ಈ ದೇಶದಲ್ಲಿ ಯಾರೂ ಸೂರಿಲ್ಲದಂತಿರಬಾರದು ಎಂಬುದು ಮೋದಿಯವರ ಮಹತ್ತರ ಆಸೆಯಾಗಿದೆ.

ಅದಕ್ಕಾಗಿ ಅವರು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಉರುವಲು ಬಳಸಿ ಅಡುಗೆ ಮಾಡುವುದರಿಂದ ತಾಯಂದಿರು ಅನೇಕ ರೋಗ ರುಜಿನಗಳಿಗೆ ಬಲಿಯಾಗುತ್ತಿದ್ದಾರೆ. ಇದನ್ನು ತಪ್ಪಿಸುವುದಕ್ಕಾಗಿ ಎಲ್ಲ ಬಿಪಿಎಲ್ ಕಾರ್ಡುದಾರರಿಗೆ ಅಡುಗೆ ಅನಿಲದ ಪೂರೈಕೆಯ ಕ್ರಮಗಳನ್ನು ಮೋದಿ ತೆಗೆದುಕೊಂಡಿದ್ದು, ಆ ಕಾರ್ಯ ಪ್ರಗತಿಯಲ್ಲಿದೆ ಎಂದರು.ಸುಶಿಕ್ಷಿತ ನಿರುದ್ಯೋಗಿ ಯುವಕರಿಗೆ ಸ್ವಾವಲಂಬಿ ಬದುಕನ್ನು ನಡೆಸಲು ಅನುಕೂಲವಾಗುವಂತೆ 10 ಲಕ್ಷದವರೆಗೂ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಎಲ್ಲ ರಾಜ್ಯಗಳಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಂಡಂತೆ ಕರ್ನಾಟಕದಲ್ಲಿಯೂ ಅನೇಕ ಯೋಜನೆಗಳಿಗೆ ಕೇಂದ್ರ ಬೇಕಾದಷ್ಟು ಸಹಕಾರ ನೀಡುತ್ತಿದೆ ಆದರೆ ರಾಜ್ಯ ಸರ್ಕಾರವೇ ಅದಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 10 ತಾಲೂಕುಗಳು ಬರುತ್ತಿದ್ದು, ಅದರಲ್ಲಿ 864 ಗ್ರಾಮಗಳಿವೆ. ಈ ಎಲ್ಲ ಗ್ರಾಮಗಳ ಅಭಿವೃದ್ದಿಗೂ ನಾನು ಕಂಕಣಬದ್ದನಾಗಿದ್ದು, ರೋಣ ಮತ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡಿದ್ದೇನೆ. ಅದಕ್ಕೆ ಕಾರಣ ಮಾಜಿ ಸಚಿವ ಕಳಕಪ್ಪ ಬಂಡಿ ಎಂದು ಹೇಳಿದ ಉದಾಸಿ, ಬಂಡಿಯವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ರೋಣ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗಿವೆ ಎಂದರು. ಕೋಟುಮಚಗಿ ಗ್ರಾಮದ ಕರೆಯ ಕಾಯಕಲ್ಪಕ್ಕೆ ನಿರ್ಧರಿಸಲಾಗಿದ್ದು, ಈ ಬಗ್ಗೆ ಗದಗನಲ್ಲಿ ಸಭೈಯೊಂದು ಜರುಗಲಿದ್ದು, ಆ ಸಂದರ್ಭದಲ್ಲಿ ಈ ಗ್ರಾಮದ ಕೆರೆಯ ಬಗ್ಗೆ ಪ್ರಸ್ತಾಪ ಮಾಡುವದಾಗಿ ಉದಾಸಿ ತಿಳಿಸಿದರು.

ನೀವು ನೀಡಿದ ತೆರಿಗೆಯ ಹಣವನ್ನು ನಿಮಗೆ ಮರಳಿ ಈ ರೂಪದಲ್ಲಿ ನಾನು ನೀಡಿದ್ದೇನೆಯೆ ಹೊರತು ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನಿಲ್ಲ ಎಂದು ತಿಳಿಸಿದ ಉದಾಸಿ, ಚುನಾವಣೆಯ ಸಂದರ್ಭದಲ್ಲಿ ನೀವು ನನಗೆ ಮತ ನೀಡಿದ ಋಣವೆ ನನ್ನ ಮೇಲೆ ಹೆಚ್ಚಾಗಿದೆ ಎಂದು ವಿನೀತರಾಗಿ ನುಡಿದರು. ಎಲ್ಲಿಯವರೆಗೂ ನಿಮ್ಮ ಸೇವೆಯ ಭಾಗ್ಯ ನನಗೆ ದೊರಕುತ್ತದೆಯೋ ಅಲ್ಲಿಯವರೆಗೂ ನಿರ್ವಂಚನೆಯಿಂದ ನಿಮ್ಮ ಸೇವೆ ಮಾಡುವುದಾಗಿ ತಿಳಿಸಿದ ಉದಾಸಿ, ನಾನು ಇಂದು ಉದ್ಘಾಟನೆಗೊಂಡ ಎರಡು ಕಾಮಗಾರಿಗಳಿಗೆ ನೀಡಿದ ಹಣ ಸದುಪಯೋಗವಾಗಿದ್ದನ್ನು ಕಂಡು ನನಗೆ ಅತೀವ ಸಂತಸವಾಗಿದೆ ಎಂದರು.

ನಂತರ ಮಾತನಾಡಿದ ಮಾಜಿ ಸಚಿವ ಕಳಕಪ್ಪ ಬಂಡಿ ಎಲ್ಲವನ್ನೂ ಸರ್ಕಾರವೇ ಮಾಡಬೇಕೆಂದು ಬಯಸುವುದು ತಪ್ಪು. ನಮ್ಮ ಕರ್ತವ್ಯಗಳನ್ನು ನಾವು ಅರಿತುಕೊಂಡು ಕಾರ್ಯ ನಿರ್ವಹಿಸಿದರೆ ಸುಂದರ ಸಮಾಜವನ್ನು ಕಟ್ಟಲು ಸಾಧ್ಯ. ಉದಾಸಿಯವರಿಗೆ ನಮ್ಮ ಕ್ಷೇತ್ರದ ಮೇಲೆ ವಿಶೇಷ ಪ್ರೀತಿಯಿರುವುದರಿಂದಲೇ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಅನುದಾನ ನೀಡಲು ಮನವಿ ಮಾಡುತ್ತೇನೆ ಎಂದರು.ಸಮಾರಂಭದಲ್ಲಿ ಸಂಸದ ಶಿವಕುಮಾರ ಉದಾಸಿ, ಸಚಿವ ಕಳಕಪ್ಪ ಬಂಡಿ, ತಾಪಂ ಸದಸ್ಯ ವಿದ್ಯಾದರ ದೊಡ್ಡಮನಿ ಮತ್ತಿತರರನ್ನು ಸಂಘದ ಅಧ್ಯಕ್ಷ ಸಂಗಪ್ಪ ಗಾಣಿಗೇರ, ನಿರ್ದೇಶಕ ಎಂ.ಬಿ. ರಮಾಣಿ ಮತ್ತಿತರ ನಿರ್ದೇಶಕರು ಸನ್ಮಾನಿಸಿ, ಗೌರವಿಸಿದರು. ವಸಂತ ಮೇಟಿ, ರಾಜು ಕುರುಡಗಿ, ಆರ್.ವಿ. ಕುಲಕರ್ಣಿ, ಸಂಘದ ನಿದೇರ್ಶಕರು ಮತ್ತಿತರರಿದ್ದರು.
► Follow us on –  Facebook / Twitter  / Google+

Facebook Comments

Sri Raghav

Admin