ಮೋದಿ-ಕ್ಸಿ ದ್ವಿಪಕ್ಷೀಯ ಚರ್ಚೆ ಯಶಸ್ವಿ, ಗಡಿಯಲ್ಲಿ ಶಾಂತಿ ಸ್ಥಾಪನೆಗೆ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Modi-BRICS

ಕ್ಸಿಯಾಮೆನ್,ಸೆ.5- ಯುದ್ಧದ ದಟ್ಟ ಕಾರ್ಮೋಡಗಳು ಆವರಿಸುವಂತೆ ಮಾಡಿದ್ದ ಡೋಕ್ಲಾಂ ಬಿಕ್ಕಟ್ಟಿನ ನಂತರ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಇಂದು ಮಹತ್ವದ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು. ಚೀನಾದ ಬಂದರು ನಗರಿ ಕ್ಸಿಯಾಮೆನ್‍ನಲ್ಲಿ ನಡೆಯುತ್ತಿರುವ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ದಕ್ಷಿಣ ಆಫ್ರಿಕಾ) ದೇಶಗಳ 9ನೇ ಶೃಂಗಸಭೆಯಲ್ಲಿ ಹೊರಹೊಮ್ಮುತ್ತಿರುವ ಮಾರುಕಟ್ಟೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಈ ಇಬ್ಬರು ನಾಯಕರು ಪಾಲ್ಗೊಂಡದ್ದರು. ನಂತರ ಮೋದಿ-ಕ್ಷಿ ಪ್ರತ್ಯೇಕವಾಗಿ ಭೇಟಿಯಾಗಿ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಕುರಿತು ಸಮಾಲೋಚನೆ ನಡೆಸಿದರು.  ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಸೇರಿದಂತೆ ಉನ್ನತಾಧಿಕಾರಿಗಳು ಪ್ರಧಾನಿ ಜೊತೆಗಿದ್ದರು.

ಬ್ರಿಕ್ಸ್ ಸಮಾವೇಶವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿರುವುದಕ್ಕೆ ಹಾಗೂ ಭಯೋತ್ಪಾದನೆ ನಿಗ್ರಹಕ್ಕೆ ಬೆಂಬಲದ ಆಶ್ವಾಸನೆ ನೀಡಿರುವುದಕ್ಕೆ ಚೀನಾ ಅಧ್ಯಕ್ಷರಿಗೆ ಮೋದಿ ಅಭಿನಂದನೆ ಸಲ್ಲಿಸಿದರು ಎಂದು ಚೀನಾ ಸರ್ಕಾರಿ ಒಡೆತನದ ಕ್ಸಿನ್‍ಹುವಾ ವಾರ್ತಾ ಸಂಸ್ಥೆ ವರದಿ ಮಾಡಿದೆ. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಜೆ.ಶಂಕರ್, ಉಭಯ ನಾಯಕರ ಮಾತುಕತೆ ಯಶಸ್ವಿಯಾಗಿದೆ. ಭಿನ್ನಾಭಿಪ್ರಾಯಗಳು ಬಿಕ್ಕಟ್ಟಿಗೆ ಕಾರಣವಾಗಲು ಅವಕಾಶ ನೀಡದಂತೆ ಈ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಗಡಿಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ಮೋದಿ ಮತ್ತು ಕ್ಸಿ ಮಹತ್ವದ ಸಮಾಲೋಚನೆ ನಡೆಸಿದ್ದು, ಎರಡೂ ರಾಷ್ಟ್ರಗಳ ರಕ್ಷಣಾ ಸಚಿವಾಲಯದ ಉನ್ನತಾಧಿಕಾರಿಗಳ ನಡುವೆ ಸೌಹಾರ್ದಯುತ ಸಂವಹನಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಎರಡೂ ದೇಶಗಳ ಹಿತಾಸಕ್ತಿಗಾಗಿ ಸಂಬಂಧಗಳನ್ನು ಪರಸ್ಪರ ಸುಧಾರಣೆ ಮಾಡಿಕೊಳ್ಳಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈಶಾನ್ಯ ರಾಜ್ಯ ಸಿಕ್ಕಿಂನ ಡೋಕ್ಲಾಂ ಪ್ರಸ್ಥಭೂಮಿಯಲ್ಲಿ ಚೀನಾ ಅಂತಾರಾಷ್ಟ್ರೀಯ ನಿಯಮ ಉಲ್ಲಂಘಿಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಇದನ್ನು ಭಾರತದ ಯೋಧರು ಆಕ್ಷೇಪಿಸಿದಾಗ ಉಂಟಾದ ಬಿಕ್ಕಟ್ಟು ಬೃಹದಾಕಾರ ಪಡೆದು 73 ದಿನಗಳ ಕಾಲ ಉಭಯ ದೇಶಗಳ ನಡುವೆ ಸೇನಾ ಸಂಘರ್ಷದ ಸೂಕ್ಷ್ಮ ಪರಿಸ್ಥಿತಿ ನೆಲೆಗೊಂಡಿತ್ತು. ಉಭಯ ದೇಶಗಳ ರಾಜತಾಂತ್ರಿಕ ಸಮಾಲೋಚನೆಗಳ ಹಿನ್ನೆಲೆಯಲ್ಲಿ ಬಿಕ್ಕಟ್ಟು ಶಮನಗೊಂಡಿತ್ತು.  ಈ ಹಿನ್ನೆಲೆಯಲ್ಲಿ ಉಭಯ ನಾಯಕರ ನಡುವೆ ನಡೆದ ಮಾತುಕತೆ ಮಹತ್ವ ಪಡೆದುಕೊಂಡಿದೆ. ಚೀನಾದಲ್ಲಿ ಮೂರು ದಿನಗಳ ಯಶಸ್ವಿ ಪ್ರವಾಸದ ಬಳಿಕ ಮೋದಿ ಎರಡು ದಿನಗಳ ಭೇಟಿಗಾಗಿ ಕ್ಸಿಯಾಮೆನ್‍ನಿಂದ ಮ್ಯಾನ್ಮಾರ್‍ಗೆ ಪ್ರಯಣ ಬೆಳೆಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin