ಮೋದಿ ಬಿರುಗಾಳಿಗೆ ಕಾಂಗ್ರೆಸ್ ಕಂಗಾಲು..!

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಬೆಂಗಳೂರು, ಮೇ 15- ಪ್ರಧಾನಿ ನರೇಂದ್ರ ಮೋದಿ ಕೊನೆ ಸುತ್ತಿನಲ್ಲಿ ನಡೆಸಿದ ಭರ್ಜರಿ ಪ್ರಚಾರ ಬಿಜೆಪಿಯನ್ನು ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಮೇ 1ರಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಸಂತೆಮರಹಳ್ಳಿಯಿಂದ ಅಧಿಕೃತ ಪ್ರಚಾರ ಆರಂಭಿಸಿದ ಮೋದಿ, ಮೇ 8ರಂದು ಬೀದರ್‍ನಲ್ಲಿ ತಮ್ಮ 21ನೆ ರ್ಯಾಲಿಯನ್ನು ಕೊನೆಗೊಳಿಸಿದರು. ರ್ಯಾಲಿಯುದ್ದಕ್ಕೂ ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದ್ದು ಪಕ್ಷದ ಗೆಲುವಿಗೆ ಪ್ರಮುಖ ಕಾರಣಗಳಲ್ಲೊಂದು. [ #ಕನ್ನಡಿಗರ ತೀರ್ಪು : ಕರ್ನಾಟಕ ವಿಧಾನಸಭಾ ಚುನಾವಣೆ -2018 ಫಲಿತಾಂಶ (Live) ]

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಬಂದು ಎಷ್ಟೇ ಸರಣಿ ಸಭೆಗಳನ್ನು ನಡೆಸಿದರೂ ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವಂತಿತ್ತು. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಮೂಲ ಕಾರ್ಯಕರ್ತರ ನಡುವೆ ದೊಡ್ಡ ಕಂದಕವೇ ಸೃಷ್ಟಿಯಾಗಿತ್ತು. ಟಿಕೆಟ್ ಹಂಚಿಕೆ ಸೇರಿದಂತೆ ಪದಾಧಿಕಾರಿಗಳ ನೇಮಕಾತಿಯಲ್ಲೂ ಯಡಿಯೂರಪ್ಪ ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ತಮ್ಮ ಬೆಂಬಲಿಗರಿಗೆ ಮಣೆ ಹಾಕಿದ್ದರಿಂದ ಪಕ್ಷದಲ್ಲಿ ಯಾವುದೂ ಸರಿ ಇರಲಿಲ್ಲ. ಅಲ್ಲಿಯವರೆಗೂ ಅನೇಕ ಸಮೀಕ್ಷೆಗಳನ್ನು ನಡೆಸಿದ ಬಿಜೆಪಿಗೆ ಬಹುಮತ ಬರುವುದಿಲ್ಲ ಎಂಬುದು ಖಾತರಿಯಾಗಿತ್ತು.

ಮಿಷನ್-150 ಎಂದು ಬಿಜೆಪಿ ನಾಯಕರು ಅಬ್ಬರಿಸುತ್ತಿದ್ದರೂ ವಾಸ್ತವ ಪರಿಸ್ಥಿತಿ ಮಾತ್ರ ವಿಭಿನ್ನವಾಗಿತ್ತು. ಅಂತಿಮವಾಗಿ ದೆಹಲಿಯಿಂದ ಬಂದ ಚಿಂತಕರ ಚಾವಡಿ ಬಿಜೆಪಿ ಎಲ್ಲೆಲ್ಲಿ ಹಿನ್ನಡೆ ಅನುಭವಿಸುತ್ತದೆ ಎಂಬ ವಾಸ್ತವಿಕ ಸತ್ಯವನ್ನು ವರದಿ ರೂಪದಲ್ಲಿ ಹೈಕಮಾಂಡ್‍ಗೆ ನೀಡಿದರು. ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಬೇಕಾದರೆ ಮೋದಿಯಿಂದ ಮಾತ್ರ ಸಾಧ್ಯ ಎಂಬುದು ಹೈಕಮಾಂಡ್‍ಗೆ ಅರಿವಾಗುತ್ತಿದ್ದಂತೆ ಆರ್‍ಎಸ್‍ಎಸ್ ನಾಯಕರು ರಾಜ್ಯದಲ್ಲಿ ಪ್ರಚಾರ ನಡೆಸುವ ಕ್ಷೇತ್ರಗಳ ಪಟ್ಟಿಯನ್ನು ಸಿದ್ಧಪಡಿಸಿದರು.   ಇದರಂತೆ ಪಕ್ಷವನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟು ಅಖಾಡಕ್ಕಿಳಿದ ಮೋದಿ ಕಾಂಗ್ರೆಸ್‍ನ ಜನ್ಮ ಜಾಲಾಡಿದರು. 21 ರ್ಯಾಲಿಗಳಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಸೋಲಲಿದೆ ಎಂಬುದನ್ನು ಅರಿತುಕೊಂಡಿದ್ದ ಮೋದಿ, ಕಾರ್ಯಕರ್ತರನ್ನು ಹುಮ್ಮಸ್ಸುಗೊಳಿಸಲು ಏನೇನು ಬೇಕೋ ಎಲ್ಲ ಅಸ್ತ್ರಗಳನ್ನೂ ಬಳಸಿದರು. ಇದು 10 ಪರ್ಸೆಂಟ್ ಕಮಿಷನ್ ಸರ್ಕಾರ. ಸೀದಾ ರೂಪಾಯಿ ಸರ್ಕಾರ ಎಂಬೆಲ್ಲ ಟೀಕೆಗಳನ್ನು ಮಾಡಿ ಯಾವ ಯಾವ ಜಿಲ್ಲೆಗಳಲ್ಲಿ ಏನೇನು ಬಳಸಬೇಕೋ ಅದನ್ನು ಬಳಸಿ ಕಾರ್ಯಕರ್ತರನ್ನು ಪಕ್ಷದತ್ತ ಸೆಳೆಯಲು ಅನುಸರಿಸಿದ ತಂತ್ರ ಫಲ ನೀಡಿತು. ಇದರ ಜತೆಗೆ ಪ್ರಾರಂಭದಿಂದಲೂ ಬಿಜೆಪಿ ನಡೆಸಿದ ಬೂತ್ ಮಟ್ಟದ ಸಂಘಟನೆ, ಪೇಜ್‍ಮುಖ್, ಪರಿವರ್ತನಾ ರ್ಯಾಲಿ, ಸರಣಿ ಸಭೆಗಳು ಬಿಜೆಪಿ ಗೆಲುವಿಗೆ ಕಾರಣವಾದವು.

ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್, ಬಿಜೆಪಿಯ ತಂತ್ರಗಾರಿಕೆಯನ್ನು ಅರಿಯುವಲ್ಲಿ ವಿಫಲವಾಯಿತು. ಕರ್ನಾಟಕದಲ್ಲಿ ಮೋದಿ ಅಲೆ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದರು. ತಮ್ಮದು ಹಗರಣ ಮುಕ್ತ ಸರ್ಕಾರ. ಕೋಮುವಾದಿ ಬಿಜೆಪಿಗೆ ಮತ ಹಾಕಬೇಡಿ ಎಂದು ಮತದಾರರಿಗೆ ಮಾಡಿದ ಮನವಿ ಫಲ ನೀಡಲಿಲ್ಲ. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಮೇಲೆ ತೀರಾ ವೈಯಕ್ತಿಕ ಮಟ್ಟದಲ್ಲಿ ದಾಳಿ ನಡೆಸಿದ್ದು, ಆ ಸಮುದಾಯವನ್ನು ಕೆರಳುವಂತೆ ಮಾಡಿತ್ತು. ಇದರ ಪ್ರತಿಫಲವೇ ಕಾಂಗ್ರೆಸ್ ಸೋಲುವಂತಾಗಿದೆ.

Facebook Comments

Sri Raghav

Admin