ಮೋದಿ ಭೇಟಿ ವಿರೋಧಿಸಿ ಒಡಿಶಾದ ದಹಿಕಲ್ ರೈಲು ನಿಲ್ದಾಣದ ಮೇಲೆ ನಕ್ಸಲರಿಂದ ಬಾಂಬ್ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Naxal-Attack-2

ದಹಿಕಲ್ (ಒಡಿಶಾ) ಮಾ.31- ಸುಮಾರು 30 ಜನರಿದ್ದ ನಕ್ಸಲರ ಗುಂಪೊಂದು ಇಂದು ಬೆಳ್ಳಂಬೆಳಗ್ಗೆ ಒಡಿಶಾ ರಾಯಗಢ ಜಿಲ್ಲೆಯ ದಹಿಕಲ್ ರೈಲು ನಿಲ್ದಾಣದ ಮೇಲೆ ಹಠಾತ್ ದಾಳಿ ನಡೆಸಿ ಅವಳಿ ಬಾಂಬ್ ಸ್ಫೋಟಿಸಿದ ಘಟನೆ ನಡೆದಿದೆ. ಈ ಸ್ಫೋಟದಿಂದಾಗಿ ಪೊಲೀಸ್ ನಿಯಂತ್ರಣ ಕೊಠಡಿ ಧ್ವಂಸಗೊಂಡಿದ್ದು, ರೈಲುಗಳ ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಏ.15ರಂದು ಒಡಿಶಾಗೆ ಭೇಟಿ ನೀಡುವುದನ್ನು ವಿರೋಧಿಸಿ ನಕ್ಸಲರು ಈ ಕೃತ್ಯ ಎಸಗಿದ್ದಾರೆ. ಅಲ್ಲದೇ ಮೋದಿ ಭೇಟಿ ವಿರುದ್ಧ ಪೋಸ್ಟರ್‍ಗಳು ಮತ್ತು ಭಿತ್ತಿ ಪತ್ರಗಳನ್ನು ಅಂಟಿಸಿದ್ದಾರೆ. ಒಡಿಶಾದಲ್ಲಿ ಈವರೆಗೆ ಅರಣ್ಯ ಪ್ರದೇಶಗಳಲ್ಲಿ ಮಾತ್ರ ಹಿಂಸಾಚಾರ ನಡೆಸುತ್ತಿದ್ದ ನಕ್ಸಲರು ಈಗ ಸಾರ್ವಜನಿಕ ಸ್ಥಳಗಳನ್ನೂ ಗುರಿಯಾಗಿಟ್ಟುಕೊಂಡು ದಾಳಿ ನಡೆಸಿ ಜನರಲ್ಲಿ ಭಯಭೀತ ವಾತಾವರಣ ಸೃಷ್ಟಿಸುತ್ತಿದ್ದಾರೆ.

Naxal-Attack-1

ದಹಿಕಲ್ ರೈಲ್ವೆ ನಿಲ್ದಾಣವನ್ನು ಗುರಿಯಾಗಿಟ್ಟುಕೊಂಡು ಮಾವೋವಾದಿ ನಕ್ಸಲರ ಗುಂಪೊಂದುಇಂದು ಬೆಳಗ್ಗೆ ಏಕಾಏಕಿ ದಾಳಿ ನಡೆಸಿತು. ಭಾರೀ ವಿಧ್ವಂಸಕ ಕೃತ್ಯ ಎಸಗುವ ಸಂಚು ಪೊಲೀಸರ ಮುನ್ನೆಚ್ಚರಿಕೆಯಿಂದ ವಿಫಲಗೊಂಡಿತು. ಯಾವುದೇ ಸಾವು-ನೋವು ಸಂಭವಿಸಿಲ್ಲ.  ಬಂಡುಕೋರರು ಎಸೆದ ಎರಡು ಬಾಂಬ್‍ಗಳು ರೈಲ್ವೆ ಕಂಟ್ರೋಲ್ ರೂಂನಲ್ಲಿ ಸ್ಪೋಟಗೊಂಡು, ಕಟ್ಟಡ ಧ್ವಂಸಗೊಂಡಿತು. ಇದರಿಂದ ರೈಲುಗಳ ಸಂಚಾರದಲ್ಲಿ ಏರುಪೇರಾಗಿ ಭಾರೀ ಗೊಂದಲ ಉಂಟಾಯಿತು.

ಪರಾರಿಯಾದ ನಕ್ಸಲರಿಗಾಗಿ ಪೊಲೀಸರು ವ್ಯಾಪಕ ಶೋಧ ಮುಂದುವರಿಸಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಿರಿಯ ಧುರೀಣ ಎಲ್.ಕೆ.ಅಡ್ವಾಣಿ ಮೊದಲಾದ ಅಗ್ರ ನಾಯಕರು ಏ.15ರಂದು ರಾಜ್ಯಕ್ಕೆ ಭೇಟಿ ನೀಡಿ ಪಂಚಾಯತಿ ಚುನಾವಣೆಗಳಲ್ಲಿ ಪಕ್ಷಕ್ಕೆ ಬೆಂಬಲ ಸೂಚಿಸಿದ ಮತದಾರರನ್ನು ಅಭಿನಂದಿಸುವ ಕಾರ್ಯಕ್ರಮವಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin