ಮೋದಿ ಸಂಪುಟಕ್ಕೆ ಟಿಡಿಪಿ ಸಚಿವರ ರಾಜೀನಾಮೆ..?

ಈ ಸುದ್ದಿಯನ್ನು ಶೇರ್ ಮಾಡಿ

TDP--01

ನವದೆಹಲಿ/ವಿಜಯವಾಡ, ಮಾ.7- ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿರುವುದರಿಂದ ಎನ್‍ಡಿಎ ಮಿತ್ರ ಪಕ್ಷವಾದ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಕುಪಿತಗೊಂಡಿದೆ. ವಿಶೇಷ ಪ್ಯಾಕೆಜ್‍ಗೆ ಆಗ್ರಹಿಸಿ ಸಂಸತ್ತಿನ ಹೊರಗೆ ಮತ್ತು ಒಳಗೆ ಪ್ರತಭಟನೆ ಮುಂದುವರಿಸಿರುವ ಟಿಡಿಪಿ, ಬಿಜೆಪಿ ಜೊತೆ ಸಖ್ಯ ಕೊನೆಗೊಳಿಸಲು ಗಂಭೀರ ಚಿಂತನೆ ನಡೆಸುತ್ತಿದೆ.

ಮೈತ್ರಿ ಕೊನೆಗೊಂಡರೆ ಪಕ್ಷದ ಇಬ್ಬರು ಸಚಿವರು ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದಾರೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಮತ್ತು ಪ್ಯಾಕೇಜ್ ನೀಡುವಂತೆ ಕಳೆದ ಕೆಲವು ದಿನಗಳಿಂದಲೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದರೂ ಕ್ಯಾರೆ ಎನ್ನದ ಮೋದಿ ಧೋರಣೆ ಬಗ್ಗೆ ಟಿಡಿಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿಜಯವಾಡದಲ್ಲಿ ನಿನ್ನೆ ನಡೆದ ಟಿಡಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ 125 ಶಾಸಕರು ಮತ್ತು 34 ವಿಧಾನಪರಿಷತ್ ಸದಸ್ಯರು(ಆರು ಮಂದಿ ಗೈರು ಹಾಜರಾಗಿದ್ದರು) ಬಿಜೆಪಿ ಜೊತೆ ಮೈತ್ರಿ ಕೊನೆಗೊಳಿಸಬೇಕೆಂಬ ಸಲಹೆ ನೀಡಿದ್ದಾರೆ.
ಶಾಸಕರು ಮತ್ತು ಎಂಎಲ್‍ಸಿಗಳೊಂದಿಗೆ ಪಕ್ಷದ ಸಂಸದರೂ ಕೂಡ ಬಿಜೆಪಿ ಸಖ್ಯ ತೊರೆಯುವಂತೆ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಈ ಬಗ್ಗೆ ಶೀಘ್ರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಬಿಜೆಪಿ-ಟಿಡಿಪಿ ಮೈತ್ರಿ ಅಂತ್ಯಗೊಂಡರೆ ಮೋದಿ ಸಂಪುಟದಲ್ಲಿ ಸಚಿವರಾಗಿರುವ ಅಶೋಕ್ ಗಜಪತಿ ರಾಜು(ವಿಮಾನಯಾನ ಸಚಿವ) ಹಾಗೂ ವೈ.ಎಸ್.ಚೌಧರಿ(ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ) ರಾಜೀನಾಮೆ ನೀಡಲಿದ್ದಾರೆ. ಇನ್ನೆರಡು ಮೂರು ದಿನಗಳಲ್ಲಿ ಈ ಬೆಳವಣಿಗೆ ಕಂಡು ಬರಲಿದ್ದು, ಇಬ್ಬರು ಟಿಡಿಪಿ ಸಚಿವರು ಸೋಮವಾರದ ನಂತರ ಮೋದಿ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಟಡಿಪಿ ಉನ್ನತ ಮೂಲಗಳು ತಿಳಿಸಿವೆ. ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೆಜ್ ನೀಡಬೇಕೆಂದು ಆಗ್ರಹಿಸಿ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರತಿಭಟನೆ ನಡೆಸಿ ಕಲಾಪಗಳಿಗೆ ಅಡ್ಡಿಯುಂಟು ಮಾಡುತ್ತಿರುವ ಟಿಡಿಪಿ ಸದಸ್ಯರು ಪಾರ್ಲಿಮೆಂಟ್‍ನ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿ ಸರ್ಕಾರದ ಗಮನ ಸೆಳೆದಿದ್ದಾರೆ.

Facebook Comments

Sri Raghav

Admin