ಮೌಢ್ಯ ನಿಷೇಧ ಕಾಯ್ದೆಗೆ ಪ್ರಗತಿಪರರ ಗಡುವು

ಈ ಸುದ್ದಿಯನ್ನು ಶೇರ್ ಮಾಡಿ

Freedom-Park

ಬೆಂಗಳೂರು, ಸೆ.4-ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಯಾಗಬೇಕೆಂದು ಆಗ್ರಹಿಸಿ ಪ್ರಗತಿಪರ ಮಠಾಧೀಶರ ವೇದಿಕೆ ಇಂದು ಹೋರಾಟ ಆರಂಭಿಸಿದೆ. ನಗರದ ಫ್ರೀಡಂಪಾರ್ಕ್‍ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಿರಂತರ ಧರಣಿ ನಡೆಸಿ ಮುಂಬರುವ ಬುಧವಾರದಂದು ಮೌಢ್ಯ ನಿಷೇಧ ಕಾಯ್ದೆ ಜಾರಿಗೊಳಿಸಲು ಸ್ಪಷ್ಟ ಭರವಸೆ ನೀಡಬೇಕು ಎಂದು ವೇದಿಕೆ ಒತ್ತಾಯಿಸಲಿದೆ. ಒಂದು ವೇಳೆ ಮೌಢ್ಯ ನಿಷೇಧ ಕಾಯ್ದೆ ಜಾರಿಗೊಳಿಸಲು ಹಿಂದೇಟು ಹಾಕಿದರೆ ಪ್ರಗತಿಪರ ಚಿಂತಕರು, ಸಾಹಿತಿಗಳು, ವಿವಿಧ ಮಠಾಧೀಶರು ಸೇರಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರಗತಿಪರ ಮಠಾಧೀಶರ ವೇದಿಕೆ ಅಧ್ಯಕ್ಷ ನಿಡುಮಾಮಿಡಿ ಶ್ರೀಗಳು ಎಚ್ಚರಿಕೆ ನೀಡಿದರು.

ಕಳೆದ ಆರು ವರ್ಷಗಳಿಂದಲೂ ಸಾಮಾಜಿಕ ಅನುಷ್ಟಾನಗಳ ವಿರುದ್ಧ ಮಠಾಧೀಶರ ವೇದಿಕೆ ಹೋರಾಟ ನಡೆಸುತ್ತಾ ಬಂದಿದೆ. ಮೌಢ್ಯ ನಿಷೇಧದ ಬಗ್ಗೆ ಮೂರು ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಇದನ್ನು ಜಾರಿಗೆ ತಂದಿಲ್ಲ. ನಮ್ಮ ತಾಳ್ಮೆಗೆ ಮಿತಿ ಇದೆ. ಯಾವುದೇ ಕಾರಣಕ್ಕೂ ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ. ಈ ಬಾರಿ ಕಾಯ್ದೆ ಜಾರಿಯಾಗದಿದ್ದರೆ ಪ್ರತಿಭಟನೆಯಿಂದ ಯಾರೊಬ್ಬರೂ ಹಿಂದೆ ಸರಿಯುವುದಿಲ್ಲ. ಯಾವುದೇ ರೀತಿಯ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

ಈಗ ರೂಪಿಸಲಾಗಿರುವ ಕರಡು ಮಸೂದೆಯಲ್ಲಿ ಮಡೆ, ಮಡೆಸ್ನಾನ ನಿಷೇಧಿಸಲಾಗಿದೆ. ಆದರೆ ಎಡೆಸ್ನಾನ, ಪಂಕ್ತಿಭೇದ ನಿಷೇಧವಾಗಿಲ್ಲ. ಕೂಡಲೇ ರಾಜ್ಯಸರ್ಕಾರ ಇದನ್ನು ನಿಷೇಧಿಸಬೇಕು. ಜ್ಯೋತಿಷ್ಯ, ವಾಸ್ತುಗಳನ್ನು ಗ್ರಾಹಕರ ಕಾಯ್ದೆ ವ್ಯಾಪ್ತಿಗೆ ತಂದು ಶೋಷಣೆಯನ್ನು ಕಡಿವಾಣ ಹಾಕಬೇಕು. ಇದರಿಂದ ಶೋಷಣೆಗೊಳಗಾಗುತ್ತಿರುವ ಜನರಿಗೆ ರಕ್ಷಣೆ ಸಿಗದಂತಾಗುತ್ತದೆ. ಕಾಯ್ದೆ ಬಗ್ಗೆ ವ್ಯವಸ್ಥಿತ ಅಪಪ್ರಚಾರ ನಡೆಯುತ್ತಿದೆ. ಇದು ಒಂದು ಧರ್ಮ, ದೇವರ ಹಾಗೂ ಆಚರಣೆಗಳ ವಿರುದ್ಧವಾಗಿ ನಡೆಯುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ ಎಂದರು.

ಪ್ರಗತಿಪರ ಮಠಾಧೀಶರ ವಿರುದ್ಧ ಯಾರೇ ಹಗುರವಾಗಿ ಟೀಕೆ ಮಾಡಿದರೂ ನಾವು ವಿಚಲಿತರಾಗುವುದಿಲ್ಲ. ಕಾಯ್ದೆ ಜಾರಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಸಕ್ತಿ ಇದೆ. ಆದರೆ ಸಂಪುಟದ ಕೆಲವು ಸಚಿವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಬಾರಿ ಸರ್ಕಾರಕ್ಕೆ ಮೌಢ್ಯ ನಿಷೇಧದ ಬಗ್ಗೆ ಸ್ಪಷ್ಟ ನಿಲುವು ಕೇಳಿದರೆ ಏನಾದರೊಂದು ಕುಂಟು ನೆಪವೊಡ್ಡಿ ತಪ್ಪಿಸಿಕೊಳ್ಳುತ್ತಿದೆ. ಆದರೆ ಇನ್ನು ಮೂರು ದಿನಗಳೊಳಗೆ ಸರ್ಕಾರ ಸ್ಪಷ್ಟ ನಿಲುವು ತಿಳಿಸಬೇಕು. ಕಳೆದ ಎರಡು ವರ್ಷಗಳಿಂದ ಜಾರಿಯಾಗಬೇಕಿದ್ದ ಕಾಯ್ದೆ ಇದುವರಗೂ ನೆನೆಗುದಿಗೆ ಬಿದ್ದಿದೆ. ಇದು ನಮ್ಮ ನಿರ್ಣಾಯಕ ಹೋರಾಟ. ಸರ್ಕಾರ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಇದರ ಬಗ್ಗೆ ವಿಶೇಷವಾಗಿ ಮೂರು ದಿನಗಳ ಕಾಲ ಅಧಿವೇಶನ ನಡೆಸಿ ಚರ್ಚಿಸಿ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಇನ್ಫೋಸಿಸ್‍ನ ಸುಧಾಮೂರ್ತಿ, ನ್ಯಾ.ಗೋಪಾಲಗೌಡ ಸೇರಿದಂತೆ 50ಕ್ಕೂ ಹೆಚ್ಚು ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

Facebook Comments

Sri Raghav

Admin