ಮ್ಯಾನ್‍ಹೋಲ್‍ಗೆ ಮೂವರು ಬಲಿ : ತಲಾ 10 ಲಕ್ಷ ರೂ. ಪರಿಹಾರ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Man-hole--1 ಬೆಂಗಳೂರು, ಮಾ.7-ತುಂಬಿ ಹರಿಯುತ್ತಿದ್ದ ಮ್ಯಾನ್‍ಹೋಲ್‍ಗೆ ಇಳಿದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯರಾತ್ರಿ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಸಿರುಗಟ್ಟಿ ಸಾವನ್ನಪ್ಪಿದ ಕಾರ್ಮಿಕರನ್ನು ಆಂಧ್ರ ಮೂಲದ ಆಂಜನೇಯರೆಡ್ಡಿ, ಈರಯ್ಯ, ಸೌತಿನಾಯ್ಡು ಎಂದು ಗುರುತಿಸಲಾಗಿದೆ.   ನಿನ್ನೆ ಮಧ್ಯರಾತ್ರಿ ಸುರಿದ ಅಕಾಲಿಕ ಮಳೆಗೆ ಸಿ.ವಿ.ರಾಮನ್ ನಗರ ಸಮೀಪದ ಕಗ್ಗದಾಸನಪುರದ ರಸ್ತೆ ಮಧ್ಯದಲ್ಲಿರುವ ಮ್ಯಾನ್‍ಹೋಲ್ ತುಂಬಿ ಹರಿಯುತ್ತಿತ್ತು. ಒಳಚರಂಡಿ ಉಸ್ತುವಾರಿ ವಹಿಸಿದ್ದ ರಾಂಕಿ ಸಂಸ್ಥೆಯವರು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಆಂಧ್ರ ಮೂಲದ ಈ ಕಾರ್ಮಿಕರನ್ನು ಮ್ಯಾನ್‍ಹೋಲ್ ದುರಸ್ತಿಗೆ ನಿಯೋಜಿಸಿದ್ದರು.

ತುಂಬಿ ಹರಿಯುತ್ತಿದ್ದ ಮ್ಯಾನ್‍ಹೋಲ್‍ಗೆ ಇಳಿದ ಮೊದಲ ಕಾರ್ಮಿಕ ಉಸಿರುಗಟ್ಟಿ ಮೇಲೆ ಬರಲು ಸಾಧ್ಯವಾಗಲಿಲ್ಲ. ತಕ್ಷಣ ಆತನನ್ನು ಬಚಾವ್ ಮಾಡಲು ಮತ್ತೊಬ್ಬ ಕಾರ್ಮಿಕ ಇಳಿದ. ಆತನೂ ಮೇಲೆ ಬಾರದಿದ್ದಾಗ ಹಗ್ಗದ ಮೂಲಕ ಮ್ಯಾನ್‍ಹೋಲ್‍ಗೆ ಇಳಿದ ಟ್ರ್ಯಾಕ್ಟರ್ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ರಾತ್ರಿ 1 ಗಂಟೆ ಸುಮಾರಿಗೆ ಈ ಕುರಿತು ಮಾಹಿತಿ ಪಡೆದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಶವಗಳನ್ನು ಮೇಲೆತ್ತಿ ಬೌರಿಂಗ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

ಹತ್ತು ಲಕ್ಷ ಪರಿಹಾರ:

ಘಟನಾ ಸ್ಥಳಕ್ಕೆ ದೌಡಾಯಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮತ್ತು ಮೇಯರ್ ಜಿ.ಪದ್ಮಾವತಿ ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಮೃತಪಟ್ಟ ಕುಟುಂಬವರ್ಗದವರಿಗೆ ಜಾರ್ಜ್ ಅವರು ತಲಾ 10 ಲಕ್ಷ ರೂ.ಗಳ ಪರಿಹಾರ ಘೋಷಿಸಿದರು. ಮಾತ್ರವಲ್ಲ, ಮ್ಯಾನ್‍ಹೋಲ್‍ಗೆ ಮನುಷ್ಯರನ್ನು ಇಳಿಸಬಾರದು, ಸಕ್ಕಿಂಗ್ ಯಂತ್ರದ ಮೂಲಕವೇ ದುರಸ್ತಿಪಡಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ಕಾನೂನುಬಾಹಿರವಾಗಿ ಮಾನವರನ್ನು ಮ್ಯಾನ್‍ಹೋಲ್‍ಗೆ ಇಳಿಸಿದ ರಾಂಕಿ ಸಂಸ್ಥೆಯ ಮಾಲೀಕರನ್ನು ಬಂಧಿಸುವಂತೆ ಜಾರ್ಜ್ ಸೂಚಿಸಿದರು.

Man-hole--2

ರಾಮಲಿಂಗಾ ರೆಡ್ಡಿ ಸಂತಾಪ:

ಘಟನೆ ಬಗ್ಗೆ, ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯ ವಿಚಾರ ತಿಳಿದು ಬೇಸರವಾಯಿತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.

ಮೇಯರ್ ಪದ್ಮಾವತಿ ಕಿಡಿ :

ಘಟನೆ ಬಗ್ಗೆ ಮೇಯರ್ ಪದ್ಮಾವತಿ ಸಹ ಬೇಸರ ವ್ಯಕ್ತಪಡಿಸಿದ್ದು, ಮ್ಯಾನ್ ಹೋಲ್ ಸ್ವಚ್ಛತೆಯ ಕಾಮಗಾರಿ ಪಡೆದಿದ್ದ ಗುತ್ತಿಗೆದಾರನ ವಿರುದ್ಧ ಹರಿಹಾಯ್ದರು. ಕಳೆದ ಎರಡು ವರ್ಷಗಳಿಂದ ಸಿ.ವಿ. ರಾಮನ್ ನಗರದಲ್ಲಿ ರಾಂಕಿ ಎಂಬಾತ ಮ್ಯಾನ್ ಹೋಲ್ ಸ್ವಚ್ಛತೆಯ ಗುತ್ತಿಗೆ ಪಡೆದಿದ್ದಾನೆ. ಆತ, ಈ ಕಾರ್ಯಕ್ಕೆ ಕಾರ್ಮಿಕರನ್ನು ಬಳಸಿದ್ದು ತಪ್ಪು. ಅಲ್ಲದೆ, ಮಧ್ಯರಾತ್ರಿ ಸ್ವಚ್ಛತೆ ಕಾರ್ಯ ನಡೆಯಬೇಕಿದ್ದರಿಂದ ಆತ ಸ್ಥಳದಲ್ಲಿದ್ದು ಭದ್ರತಾ ನಿಯಮಗಳ ಉಸ್ತುವಾರಿ ವಹಿಸಿಕೊಳ್ಳಬೇಕಿತ್ತು. ಆತನ ಬೇಜವಾಬ್ದಾರಿತನದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಕಿಡಿ ಕಾರಿದರು.
ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಮ್ಯಾನ್‍ಹೋಲ್‍ನಲ್ಲಿ ಕಾರ್ಮಿಕರನ್ನು ಇಳಿಸಕೂಡದೆಂದು ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟವಾದ ಸೂಚನೆ ನೀಡಿದೆ. ಆದಾಗ್ಯೂ ಮ್ಯಾನ್‍ಹೋಲ್ ಸ್ವಚ್ಛತೆಗೆ ಕಾರ್ಮಿಕರನ್ನು ಇಳಿಸಿದ್ದು ದೊಡ್ಡ ಅಪರಾಧ. ಅಧಿಕಾರಿಗಳು ಯಂತ್ರೋಪಕರಣಗಳನ್ನು ಉಪಯೋಗಿಸಿ ಮ್ಯಾನ್ ಹೋಲ್ ಸ್ವಚ್ಛಗೊಳಿಸಬಹುದಿತ್ತು ಎಂದು ಗುಡುಗಿದ್ದಾರೆ.

ಗಮನಕ್ಕೆ ತಾರದೆ ಕೆಲಸ:

ಮಧ್ಯರಾತ್ರಿ ವೇಳೆ ಮ್ಯಾನ್‍ಹೋಲ್ ದುರಸ್ತಿ ಕಾರ್ಯ ನಡೆಸುತ್ತಿದ್ದ ಬಗ್ಗೆ ಗುತ್ತಿಗೆದಾರರು ಮಂಡಳಿ ಗಮನಕ್ಕೆ ತಂದಿರಲಿಲ್ಲ. ಸಾಮಾನ್ಯವಾಗಿ ಯಂತ್ರ ಬಳಸಿಯೇ ದುರಸ್ತಿ ಕಾರ್ಯ ನಡೆಸಲಾಗುತ್ತಿತ್ತು ಎಂದು ಬಿಡಬ್ಲ್ಯುಎಸ್‍ಎಸ್‍ಬಿಯ ಚೀಫ್ ಎಂಜಿನಿಯರ್ ಮಂಜುನಾಥ್ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin