ಮ್ಯಾನ್ ಹೋಲ್ ಕ್ಲೀನ್‍ಗೆ ಹೊಸ ನಿಯಮ

ಈ ಸುದ್ದಿಯನ್ನು ಶೇರ್ ಮಾಡಿ

Man-hole

ಬೆಂಗಳೂರು,ಮಾ.10– ಒಳಚರಂಡಿ ಸಂಪರ್ಕ ಹೊಂದಿರುವ ಮ್ಯಾನ್‍ಹೋಲ್ ಸ್ವಚ್ಛಗೊಳಿಸುವ ಆಂಬುಲೆನ್ಸ್ , ಇಂಜಿನಿಯರ್, ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕೆಂಬ ಮಾರ್ಗಸೂಚಿಯನ್ನು ಜಾರಿಗೆ ತರಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ತಿಳಿಸಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮ್ಯಾನ್‍ಹೋಲ್ ಸ್ವಚ್ಛಗೊಳಿಸುವಾಗ ಮೂವರು ಮೃತಪಟ್ಟಿದ್ದರು. ಇಂತಹ ದುರಂತಗಳು ಮರುಕಳಿಸದಂತೆ ಮಾರ್ಗಸೂಚಿಗಳನ್ನು ಪರಿಷ್ಕರಿಸಿ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಇಷ್ಟಾದರೂ ಮ್ಯಾನ್‍ಹೋಲ್‍ನಲ್ಲಿ ಪೌರಕಾರ್ಮಿಕರು ಮೃತಪಟ್ಟ ಘಟನೆ ಮರುಕಳಿಸಿದರೆ ನಗರಸಭೆ, ಪುರಸಭೆ, ಮಹಾನಗರ ಪಾಲಿಕೆ ಸೇರಿದಂತೆ ನಗರ ಸ್ಥಳೀಯ ಆಡಳಿತ ಸಂಸ್ಥೆಗಳೇ ಹೊಣೆಯಾ ಗುತ್ತವೆ ಎಂದು ಹೇಳಿದರು.

ಕಡ್ಡಾಯವಾಗಿ ಯಂತ್ರದ ಮೂಲಕ ಮ್ಯಾನ್‍ಹೋಲನ್ನು ಸ್ವಚ್ಛಗೊಳಿಸಬೇಕು. ಇದಕ್ಕೆ ಸುಪ್ರೀಂಕೋರ್ಟ್‍ನ ಮತ್ತು ರಾಜ್ಯ ಸರ್ಕಾರದ ಆದೇಶವಿದ್ದರೂ ಕೂಡ ಗುತ್ತಿಗೆದಾರರು ಪೌರಕಾರ್ಮಿಕರನ್ನೇ ಬಳಸಿಕೊಳ್ಳುತ್ತಿರುವುದರಿಂದ ಈ ದುರಂತ ಸಂಭವಿಸಿದೆ.   ಅನಿವಾರ್ಯವಾಗಿ ಪೌರಕಾರ್ಮಿಕರಿಂದಲೇ ಮ್ಯಾನ್‍ಹೋಲ್ ಸ್ವಚ್ಛಗೊಳಿಸುವ ಅನಿವಾರ್ಯತೆ ಎದುರಾದರೆ ಮುಖವಾಡ, ಆಮ್ಲಜನಕದೊಂದಿಗೆ ಆಂಬುಲೆನ್ಸ, ಪೊಲೀಸ್ ಸಿಬ್ಬಂದಿಗಳನ್ನು ರಕ್ಷಣೆಗಾಗಿ ನಿಯೋಜಿಸಬೇಕೆಂಬ ಮಾರ್ಗಸೂಚಿಯನ್ನು ಪರಿಷ್ಕರಿಸಲಾಗುತ್ತದೆ ಎಂದು ಹೇಳಿದರು.

ಸಿ.ವಿ.ರಾಮನ್‍ನಗರದ ದುರ್ಘಟನೆಯಲ್ಲಿ ಮೃತಪಟ್ಟ ಪೌರಕಾರ್ಮಿಕರ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರ ನೀಡಲು ಜಲಮಂಡಳಿಗೆ ಸೂಚಿಸಲಾಗಿದೆ. ಈ ಹಿಂದೆ ಮೃತಪಟ್ಟಿದ್ದ ಕಾರ್ಮಿಕರ ಕುಟುಂಬದವರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin