ಯಡಿಯೂರಪ್ಪಗೆ ಸುಪ್ರೀಂ ಶಾಕ್, ನಾಳೆಯೇ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Supreme-Court-Yadiyurappa

ನವದೆಹಲಿ,ಮೇ18- ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್.ಯಡಿಯೂರಪ್ಪ ಅವರು ನಾಳೆಯೇ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ನಾಳೆ ಸಂಜೆ 4 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸಬೇಕು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ತ್ರಿಸದಸ್ಯ ಪೀಠ ನಿರ್ದೇಶನ ನೀಡಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎಸ್.ಎ.ಬೋಬ್ಡೆ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನಾಳೆಯೇ ವಿಶ್ವಾಸ ಮತ ಸಾಬೀತುಪಡಿಸಬೇಕು. ಯಾವುದೇ ಕಾರಣಕ್ಕೂ ಯಾರಿಗೂ ಹೆಚ್ಚಿನ ಸಮಯ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.
ನ್ಯಾಯಾಲಯದ ಈ ಆದೇಶದಿಂದ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ. ಸರಳ ಬಹುಮತಕ್ಕೆ ಇನ್ನು ಎಂಟು ಶಾಸಕರನ್ನು ಹೇಗೆ ಹೊಂದಿಸುತ್ತದೆ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟದಿಂದ 116 ಶಾಸಕರು ಇರುವುದರಿಂದ ನಾಳೆ ಸದನದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದನ್ನು ಇಡೀ ದೇಶದ ಜನತೆ ಎದುರು ನೋಡುತ್ತಿದೆ. ವಿಶ್ವಾಸ ಮತಯಾಚನೆಯನ್ನು ಹೇಗೆ ಮಾಡಬೇಕು ಎಂಬುದನ್ನು ಹಂಗಾಮಿ ಸ್ಪೀಕರ್ ನಿರ್ಧರಿಸಬೇಕು. ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಪೀಠ ಸೂಚಿಸಿದೆ.

ಭಾರೀ ವಾಗ್ವಾದ:
ಇದಕ್ಕೂ ಮುನ್ನ ಸುಪ್ರೀಂಕೋರ್ಟ್‍ನಲ್ಲಿ ಇಂದು ಬೆಳಗ್ಗೆ 10.30ರಿಂದ ಎರಡು ಕಡೆ ಕಾವೇರಿದ ಚರ್ಚೆ ನಡೆಯಿತು. ಕಾಂಗ್ರೆಸ್ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಹಾಗೂ ಬಿಜೆಪಿ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಸಮರ್ಥ ವಾದ ಮಂಡಿಸಿದರು. ಯಾವುದೇ ಒಂದು ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ ರಾಜ್ಯಪಾಲರು ತಮಗಿರುವ ಪರಮಾಧಿಕಾರವನ್ನು ಬಳಸಿಕೊಂಡು ಸರ್ಕಾರ ರಚಿಸಲು ಆಹ್ವಾನ ನೀಡುವುದು ಸರಿ ಎಂದು ಮುಕುಲ್ ರೋಹ್ಟಗಿ ವಾದ ಮಂಡಿಸಿದರು.

ನಮಗೆ ಸರ್ಕಾರ ರಚಿಸಲು ಬೇಕಾದ ಬಹುಮತವಿದೆ. ಅಗತ್ಯವಿರುವ ಶಾಸಕರನ್ನು ಹೇಗೆ ಹೊಂದಿಸಿಕೊಳ್ಳುತ್ತೇವೆ ಎಂಬುದು ಗೌಪ್ಯವಾದ ವಿಷಯ. ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು. ಕಾಂಗ್ರೆಸ್, ಜೆಡಿಎಸ್ ಚುನಾವಣೆಗೂ ಮುನ್ನ ವಿರುದ್ಧ ದಿಕ್ಕಿನಲ್ಲಿದ್ದವರು. ಫಲಿತಾಂಶ ಬಂದ ಬಳಿಕ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಹೊರಟಿರುವುದು ಸಂವಿಧಾನ ವಿರೋಧಿ ಎಂದರು.  ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಭಿಷೇಕ್ ಮನು ಸಿಂಘ್ವಿ, ನಮಗೆ ಸರ್ಕಾರ ರಚಿಸಲು ಅಗತ್ಯವಾದ ಬೆಂಬಲವಿದೆ. ರಾಜ್ಯಪಾಲರನ್ನು ಭೇಟಿ ಮಾಡಿ ಶಾಸಕಾಂಗ ಪಕ್ಷದ ನಾಯಕರೇ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಪತ್ರ ನೀಡಿದ್ದರೂ ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಆಹ್ವಾನ ನೀಡದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸಮಯಾವಕಾಶ ನೀಡುವುದಿಲ್ಲ:
ಒಂದು ಹಂತದಲ್ಲಿ ನಾಳೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧರಿದ್ದೀರಾ ಎಂದು ಎರಡು ಕಡೆಯ ವಕೀಲರನ್ನು ಪ್ರಶ್ನಿಸಿದರು. ಇದಕ್ಕೆ ಮನು ಸಿಂಘ್ವಿ, ನ್ಯಾಯಾಲಯ ಆದೇಶ ನೀಡಿದರೆ ನಾವು ನಾಳೆಯೇ ಸಿದ್ದ ಎಂದು ಒಪ್ಪಿಕೊಂಡರು.  ಆದರೆ ಇದಕ್ಕೆ ಮುಕುಲ್ ರೋಹ್ಟಗಿ ಆಕ್ಷೇಪಿಸಿ, ನಾಳೆ ಬಹುಮತ ಸಾಬೀತುಪಡಿಸಲು ಸಾಧ್ಯವಿಲ್ಲ. ನ್ಯಾಯಾಲಯ ಒಂದಿಷ್ಟು ಸಮಯಾವಕಾಶ ನೀಡಬೇಕೆಂದು ಮನವಿ ಮಾಡಿದರು. ಇದನ್ನು ನ್ಯಾಯಾಲಯ ಒಪ್ಪಿಕೊಳ್ಳದೆ ಯಾವುದೇ ಕಾರಣಕ್ಕೂ ಯಾರಿಗೂ ಸಮಯಾವಕಾಶ ನೀಡುವುದಿಲ್ಲ. ನಾವು ಯಾವುದೇ ರಾಜಕೀಯ ಪಕ್ಷದ ಪರ, ವಿರೋಧವಿಲ್ಲ. ನಾಳೆ ಸದನದಲ್ಲಿ ಬಹುಮತ ಸಾಬೀತು ಮಾಡಲೇಬೇಕೆಂದು ಸೂಚಿಸಿದರು. ಕಡೆ ಪಕ್ಷ ವಿಶ್ವಾಸ ಮತ ಯಾಚನೆ ವೇಳೆ ಗುಪ್ತ ಮತದಾನಕ್ಕಾದರೂ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು. ಆದರೆ ಇದನ್ನೂ ಕೂಡ ನ್ಯಾಯಾಲಯ ಒಪ್ಪಲಿಲ್ಲ. ರಾಜ್ಯಪಾಲರ ತೀರ್ಮಾನ ಸರಿಯೇ ಅಥವಾ ತಪ್ಪೇ ಎಂಬುದನ್ನು ವಿಶ್ವಾಸ ಮತಯಾಚನೆಯ ನಂತರ ಹೇಳುವುದಾಗಿ ಪ್ರಕಟಿಸಿತು.

Facebook Comments

Sri Raghav

Admin