ಯಡಿಯೂರಪ್ಪನವರ ಸಭೆಯಿಂದ ದೂರ ಉಳಿಯುವರೇ ಸೋಮಣ್ಣ ಬೆಂಬಲಿಗರು..?

ಈ ಸುದ್ದಿಯನ್ನು ಶೇರ್ ಮಾಡಿ

Somanna--yadiyurappa

ಚಾಮರಾಜನಗರ, ಜೂ.11-ಬರ ಅಧ್ಯಯನಕ್ಕಾಗಿ ಜಿಲ್ಲೆಗೆ ಭೇಟಿ ನೀಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಭಿನ್ನಮತದ ಬಿಸಿ ಎದುರಾಗಿದೆ. ನಾಳೆ ಬಿಎಸ್‍ವೈ ಭೇಟಿ ನೀಡುವ ಸಂದರ್ಭದಲ್ಲಿ ಗೈರು ಹಾಜರಾಗುವ ಮೂಲಕ ತಮ್ಮ ಬಲ ಪ್ರದರ್ಶಿಸಲು ಮಾಜಿ ಸಚಿವ ವಿ.ಸೋಮಣ್ಣ ಬೆಂಬಲಿಗರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.  ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಪಟ್ಟಣ ಹೊರವಲಯದ ರೆಸಾರ್ಟ್‍ವೊಂದರಲ್ಲಿ ಸಭೆ ಸೇರಿದ್ದ ಮಾಜಿ ಶಾಸಕರಾದ ನಂಜುಂಡಸ್ವಾಮಿ, ಗುರುಸ್ವಾಮಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿಜಗುಣ ಸೇರಿದಂತೆ ಹಲವು ಮುಖಂಡರು ಯಡಿಯೂರಪ್ಪ ಅವರ ವರ್ತನೆ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹನೂರು ವಿಧಾನಸಭಾ ಕ್ಷೇತ್ರದಿಂದ ವಿ.ಸೋಮಣ್ಣ ಅವರ ಸ್ಪರ್ಧೆಗೆ ಅವಕಾಶ ನೀಡಬೇಕು ಮತ್ತು ಸ್ಪಷ್ಟ ಭರವಸೆ ನೀಡಬೇಕು ಎಂದು ಒತ್ತಾಯಿಸಲು ಜಿಲ್ಲಾ ಮಟ್ಟದಲ್ಲಿ ಕಮಲ ನಾಯಕರು ತಮ್ಮದೇ ಆದ ಒತ್ತಡದ ತಂತ್ರವನ್ನು ಹೆಣೆದಿದ್ದಾರೆ.  ಇತ್ತೀಚೆಗಷ್ಟೆ ಮಲೆಮಹದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ನಂತರ ಮಾಜಿ ಶಾಸಕಿ ಪರಿಮಳ ನಾಗಪ್ಪ ಅವರನ್ನು ಬಿಜೆಪಿಗೆ ಸೇರಿಸಿಕೊಂಡ ತರುವಾಯ ಜಿಲ್ಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಹೊಗೆ ಭುಗಿಲೆದ್ದಿದೆ.

ಈ ಹಿಂದೆಯೇ ಸೋಮಣ್ಣ ಅವರು ಹನೂರು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ರಾಜ್ಯ ನಾಯಕರ ಜೊತೆ ಚರ್ಚೆ ನಡೆಸಿದ್ದರೂ ಅವರಿಗೆ ಟಿಕೆಟ್ ತಪ್ಪಿಸಿ ಪರಿಮಳ ನಾಗಪ್ಪ ಅವರನ್ನೇ ಕಣಕ್ಕಿಳಿಸಲು ಕೆಲವರು ಪ್ರಯತ್ನ ನಡೆಸುತ್ತಿದ್ದಾರೆ. ಇದೇ ವೇಳೆ ಪರಿಮಳ ನಾಗಪ್ಪ ಅವರು ಕೂಡ ನಾನೇ ಅಭ್ಯರ್ಥಿ ಎಂದು ಕ್ಷೇತ್ರಾದ್ಯಂತ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇದು ಪಕ್ಷದ ಕಾರ್ಯಕರ್ತರಲ್ಲೂ ಗೊಂದಲ ಮೂಡಿಸಿದೆ.   ಹೀಗಿರುವಾಗ ಯಾರು ಅಭ್ಯರ್ಥಿಯಾಗಬೇಕೆಂಬುದನ್ನು ಸ್ಪಷ್ಟಪಡಿಸಬೇಕೆಂದು ಹಲವು ಬಾರಿ ಯಡಿಯೂರಪ್ಪ ಅವರ ಬಳಿ ಮನವಿ ಮಾಡಿದ್ದೆವು. ಆದರೆ ಅದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಇದರಿಂದಾಗಿ ನಾವು ನಮ್ಮ ಬಲ ಏನೆಂಬುದನ್ನು ತೋರಿಸುತ್ತೇವೆ ಎಂದು ಹೆಸರೇಳಲಿಚ್ಛಿಸದ ಹಿರಿಯ ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ಹೊಗೆಯಾಡುತ್ತಿದ್ದ ಭಿನ್ನಮತ ಸ್ಫೋಟಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದ್ದು, ಒಂದೊಮ್ಮೆ ನಮ್ಮ ಬೇಡಿಕೆ ಈಡೇರದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂಬ ಸಂದೇಶವನ್ನು ನೀಡಲು ಸೋಮಣ್ಣ ಬೆಂಬಲಿಗರು ಭರ್ಜರಿ ತಯಾರಿ ನಡೆಸಿದ್ದಾರೆ.  ಒಟ್ಟಾರೆ ನಾಳೆ ಬಿಎಸ್‍ವೈ ಭೇಟಿಗೂ ಮುನ್ನ ಜಿಲ್ಲಾ ಬಿಜೆಪಿಯಲ್ಲಿ ನಡೆಯುವ ವಿದ್ಯಮಾನಗಳು ಕುತೂಹಲ ಕೆರಳಿಸಿದ್ದು, ಯಾವುದೇ ಕಾರಣಕ್ಕೂ ಹನೂರು ಕ್ಷೇತ್ರದಿಂದ ಸೋಮಣ್ಣ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಲಾಗಿದೆ.

Facebook Comments

Sri Raghav

Admin