ಯಡಿಯೂರಪ್ಪ ತಿಪ್ಪರಲಾಗ ಹಾಕಿದ್ರು ಬಿಜೆಪಿ ಗೆಲ್ಲಲ್ಲ : ಸಿದ್ದು ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಕೋಲಾರ, ಸೆ.20- ಬಿ.ಎಸ್.ಯಡಿಯೂರಪ್ಪ ಎಷ್ಟೇ ತಿಪ್ಪರಲಾಗ ಹಾಕಿದರೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು.
ನಗರದ ಹೊರವಲಯದ ಟಮಕ ಸಮೀಪ ನೂತನವಾಗಿ ನಿರ್ಮಿಸಿರುವ ಜಿಲ್ಲಾಡಳಿತ ಭವನ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಸೀಟುಗಳು ಗೆದ್ದೇ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಗುಡುಗಿದರು.
ಯಡಿಯೂರಪ್ಪ ವಿರುದ್ಧ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‍ಗಳಲ್ಲಿ ಸಾಕಷ್ಟು ಕೇಸ್‍ಗಳಿವೆ. ನಮ್ಮ ಕುಟುಂಬದವರ ಮೇಲೆ ಚಾರ್ಜ್‍ಶೀಟ್ ಬಿಡುಗಡೆ ಮಾಡುವುದಾಗಿ ಹೇಳುತ್ತಿರುವುದರಲ್ಲಿ ಯಾವುದೇ ನೈತಿಕತೆ ಇಲ್ಲ. ಇತ್ತೀಚೆಗೆ ಅವರು ಸುಳ್ಳು ಹೇಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ನಮ್ಮ ಮಂತ್ರಿಗಳ, ಅಧಿಕಾರಿಗಳ ಫೋನ್ ಕದ್ದಾಲಿಕೆ ಮಾಡುತ್ತಿರುವುದು ಬಿಜೆಪಿಯವರೇ ಎಂದು ಕಿಡಿಕಾರಿದರು.
ಬಿಬಿಎಂಪಿ ಮೇಯರ್- ಉಪಮೇಯರ್ ಚುನಾವಣೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮುಂದುವರೆಯಲಿದೆ ಎಂದರು.
ಜಿಲ್ಲೆಯಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ ನಮ್ಮ ಸರ್ಕಾರ ಬೆಂಬಲ ನೀಡಲಿದೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಪೂರಕವಾದ ಸಹಕಾರ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಶಾಸಕರಾದ ಮಂಜುನಾಥಗೌಡ, ವರ್ತೂರು ಪ್ರಕಾಶ್, ಎಸ್.ಎನ್.ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin