ಯಡಿಯೂರಪ್ಪ ನಾಯಕತ್ವದ ವಿರುದ್ಧ ವರಿಷ್ಠರಿಗೆ ದೂರಲು ಮುಂದಾದ ಬಿಜೆಪಿ ಭಿನ್ನಮತೀಯರು

ಈ ಸುದ್ದಿಯನ್ನು ಶೇರ್ ಮಾಡಿ

yadiyurappa

ಬೆಂಗಳೂರು, ಏ.21- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ವಿರುದ್ಧ ಸೆಡ್ಡು ಹೊಡೆದಿರುವ ಭಿನ್ನಮತೀಯರು ಇದೀಗ ದೆಹಲಿ ವರಿಷ್ಠರಿಗೆ ದೂರು ನೀಡಲು ಸಜ್ಜಾಗಿದ್ದಾರೆ.
ಇದೇ 30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಲು ಉದ್ದೇಶಿಸಿರುವ ಭಿನ್ನಮತೀಯ ನಾಯಕರು ಸಮಯಾವಕಾಶ ನೀಡಬೇಕೆಂದು ಕೋರಿದ್ದಾರೆ. ಒಂದು ವೇಳೆ ರಾಷ್ಟ್ರೀಯ ಅಧ್ಯಕ್ಷರಿಂದ ಹಸಿರು ನಿಶಾನೆ ಸಿಕ್ಕರೆ ಸುಮಾರು 10ಕ್ಕೂ ಹೆಚ್ಚು ಮಂದಿ ದೆಹಲಿಗೆ ತೆರಳಿ ಬಿಎಸ್‍ವೈ ನಾಯಕತ್ವದ ವಿರುದ್ಧ ದೂರು ನೀಡಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಾನುವಾರ ನಡೆಯಲಿರುವ ಪದಾಧಿಕಾರಿಗಳ ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರು , ಪ್ರಧಾನ ಕಾರ್ಯದರ್ಶಿಗಳು , ಶಾಸಕರು , ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಪ್ರಮುಖರು ಭಾಗವಹಿಸಬೇಕೆಂದು ಈಗಾಗಲೇ ಪಕ್ಷದ ವತಿಯಿಂದ ಸೂಚಿಸಲಾಗಿದೆ.  ಇದೇ ವೇಳೆ ಬಿಎಸ್‍ವೈ ರಾಜ್ಯಾಧ್ಯಕ್ಷರಾದ ದಿನದಿಂದಲೂ ಭುಸುಗುಡುತ್ತಿರುವ ವಿಧಾನ ಪರಿಷತ್‍ನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯರಾದ ಭಾನು ಪ್ರಕಾಶ್, ಸೋಮಣ್ಣ ಬೇವಿನ ಮರದ್, ಮಾಜಿ ಶಾಸಕರಾದ ಸೊಗಡು ಶಿವಣ್ಣ, ನೇಮಿ ನಾಯಕ್, ವಿಧಾನ ಪರಿಷತ್‍ನ ಮಾಜಿ ಮುಖ್ಯ ಸಚೇತಕ ಡಾ.ಎಚ್.ಎಸ್.ಶಿವಯೋಗಿ ಸ್ವಾಮಿ ಮತ್ತಿತರರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಅವರ ಬೇಡಿಕೆಯಂತೆ ಈಗಾಗಲೇ ನೇಮಕಗೊಂಡಿರುವ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಯಡಿಯೂರಪ್ಪ ಮೇಲೆ ಒತ್ತಡ ತಂತ್ರ ಅನುಸರಿಸಲಿದ್ದಾರೆ. ಕೇಂದ್ರ ವರಿಷ್ಠರ ಸೂಚನೆಯಂತೆ ಕೆಲವು ಜಿಲ್ಲೆಗಳಲ್ಲಿ ಅಧ್ಯಕ್ಷರು ಮತ್ತು ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನು ಬದಲಾಯಿಸುವಂತೆ ಪಟ್ಟಿಯನ್ನು ಮುಂದಿಡಲಿದ್ದಾರೆ. ಸ್ವತಃ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಪದಾಧಿಕಾರಿಗಳ ಪಟ್ಟಿ ಬದಲಾಯಿಸಬೇಕೆಂದು ಬಿಎಸ್‍ವೈಗೆ ಸೂಚಿಸಿದ್ದರು. ಅಲ್ಲದೆ ಈ ಬಗ್ಗೆ ವರದಿ ನೀಡಬೇಕೆಂದು ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿದ್ದರು. ಫೆ.10ರೊಳಗೆ ವರದಿ ನೀಡಬೇಕೆಂಬುದು ಷಾ ಅವರ ಸೂಚನೆಯಾಗಿತ್ತು. ಆದರೆ ಇದುವರೆಗೂ ಈ ಬಗ್ಗೆ ಒಂದೇ ಒಂದು ಸಭೆ ನಡೆಸದಿರುವುದು ಭಿನ್ನಮತೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಯಡಿಯೂರಪ್ಪ ಪಟ್ಟಿ ಬದಲಾಯಿಸದಿದ್ದರೆ ನೇರವಾಗಿ ವರಿಷ್ಠರಿಗೆ ದೂರು ನೀಡಲು ತೆರೆಮರೆಯಲ್ಲಿ ಕಸರತ್ತು ನಡೆಸಲಾಗಿದೆ.  ಆರ್‍ಎಸ್‍ಎಸ್ ಮೂಲದ ಪ್ರಭಾವಿ ನಾಯಕರೊಬ್ಬರು ಈಗಾಗಲೇ ದೆಹಲಿಯಲ್ಲಿ ಅಮಿತ್ ಷಾ ಭೇಟಿ ಮಾಡಲು ಬೇಕಾದ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.  ಯಡಿಯೂರಪ್ಪ ಪಟ್ಟಿ ಬದಲಾಯಿಸದಿದ್ದರೆ ಭಿನ್ನಮತೀಯರು ಕೆಲವು ದಾಖಲೆಗಳ ಸಮೇತ ದೂರು ನೀಡಲು ತೀರ್ಮಾನಿಸಿದ್ದಾರೆ.

ದೂರಿನಲ್ಲಿ ಏನಿರುತ್ತದೆ:

ಇತ್ತೀಚೆಗೆ ನಡೆದ ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಎಸ್‍ವೈ ಏಕಪಕ್ಷೀಯವಾಗಿ ಪ್ರಚಾರ ನಡೆಸಿದ್ದೇ ಪಕ್ಷದ ಸೋಲಿಗೆ ಪ್ರಮುಖ ಕಾರಣ.
ಗೆಲುವಿಗೆ ಬೇಕಾದ ಕಾರ್ಯತಂತ್ರವನ್ನು ರೂಪಿಸಲಿಲ್ಲ. ಪಕ್ಷದ ಪ್ರಮುಖರ ಜತೆ ಚರ್ಚಿಸದೆ ಎಲ್ಲವೂ ಬಿಎಸ್‍ವೈ ಮಯವಾಗಿದ್ದವು. ಉಭಯ ಕ್ಷೇತ್ರಗಳಲ್ಲಿ ವೀರಶೈವ ಮತಗಳು ನಿರ್ಣಾಯಕವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮತಗಳು ಬಾರದೆ ಇದ್ದುದು ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂಬುದನ್ನು ದೂರಿನಲ್ಲಿ ನೀಡಿದ್ದಾರೆ.  ಯಡಿಯೂರಪ್ಪ ಇದೇ ರೀತಿ ಏಕಪಕ್ಷೀಯವಾಗಿ ವರ್ತಿಸಿದರೆ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಅನುಮಾನ. ಕೇವಲ ಒಂದು ಸಮುದಾಯವನ್ನು ನೆಚ್ಚಿಕೊಳ್ಳದೆ ಎಲ್ಲಾ ಸಮುದಾಯಗಳನ್ನು ಸೂಚಿಸಬೇಕೆಂದು ಮನವಿ ಮಾಡಲಿದ್ದಾರೆ. ಪಕ್ಷದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವಾಗ ಕೋರ್ ಕಮಿಟಿಯಲ್ಲಿ ಚರ್ಚಿಸಬೇಕು ಹಾಗೂ ಬಿಎಸ್‍ವೈ ಏಕಪಕ್ಷೀಯ ತೀರ್ಮಾನಕ್ಕೆ ಕಡಿವಾಣ ಹಾಕಲು ಮನವಿ ಮಾಡಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin