ಯತ್ನಾಳ್ ಮತ್ತೆ ಬಿಜೆಪಿ ಸೇರ್ಪಡೆಗೆ ವೇದಿಕೆ ಸಿದ್ಧ

ಈ ಸುದ್ದಿಯನ್ನು ಶೇರ್ ಮಾಡಿ

Yatnal-01

ಬೆಂಗಳೂರು,ಫೆ.12-ಹಲವರ ವಿರೋಧದ ನಡುವೆಯೂ ಕೇಂದ್ರದ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಹೈದರಾಬಾದ್ ಕರ್ನಾಟಕದ ಪ್ರಭಾವಿ ವೀರಶೈವ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಪುನಃ ಮಾತೃ ಪಕ್ಷಕ್ಕೆ ಸೇರ್ಪಡೆಯಾಗಲು ವೇದಿಕೆ ಸಿದ್ದಗೊಂಡಿದೆ.   ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೇ ಬಸವರಾಜ ಪಾಟೀಲ್ ಯತ್ನಾಳ್ ಅವರನ್ನು ನವದೆಹಲಿಗೆ ಕರೆಸಿಕೊಂಡಿದ್ದು, ನಾಳೆ ಉಭಯ ನಾಯಕರು ಮಾತುಕತೆ ನಡೆಸಿ ಪಕ್ಷ ಸೇರ್ಪಡೆಗೆ ದಿನಾಂಕ ನಿಗದಿಯಾಗಲಿದೆ.

ನಿನ್ನೆ ರಾತ್ರಿಯೇ ನವದೆಹಲಿಗೆ ತೆರಳಿರುವ ಯತ್ನಾಳ್ ಪಕ್ಷ ಸೇರ್ಪಡೆ ಕುರಿತಂತೆ ರಾಷ್ಟ್ರೀಯ ಅಧ್ಯಕ್ಷರಿಂದ ಹಸಿರು ನಿಶಾನೆ ಪಡೆದ ಬಳಿಕ ಬಿಜಾಪುರದಲ್ಲಿ ಮಾರ್ಚ್ 4ರಂದು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ವಿದ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಯತ್ನಾಳ್ ಸೇರ್ಪಡೆಗೆ ರಾಜ್ಯ ಘಟಕದ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದರೂ ಸದ್ಯಕ್ಕೆ ಅವರ ಮಾತನ್ನು ರಾಷ್ಟ್ರೀಯ ನಾಯಕರು ಕೇಳಿಸಿಕೊಳ್ಳುವ ವ್ಯವಧಾನದಲ್ಲಿಲ್ಲ.

ಹೀಗಾಗಿಯೇ ಯಾರ ಗಮನಕ್ಕೂ ತಾರದೆ ಅಮಿತ್ ಷಾ ಯತ್ನಾಳ್ ಅವರನ್ನು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದರು. ಯಾವುದೇ ಷರತ್ತಿಲ್ಲದೆ ಪಕ್ಷಕ್ಕೆ ಸೇರ್ಪಡೆಯಾಗಲು ಅವರು ಸಮ್ಮತಿಸಿದ್ದು , ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿಜಾಪುರ ನಗರ ಇಲ್ಲವೇ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಷಿ ಮಾತ್ರ ಯತ್ನಾಳ್ ಸೇರ್ಪಡೆಗೆ ವಿರೋಧ  ವ್ಯಕ್ತಪಡಿಸಿದ್ದರು. ತಮ್ಮ ವಿರುದ್ದ ಬಹಿರಂಗವಾಗಿಯೇ ಮಾತನಾಡುತ್ತಿರುವ ಅವರನ್ನು ಪಕ್ಷಕ್ಕೆ ಸೇರ್ಪಡೆ ಬಾರದೆಂದು ವರಿಷ್ಠರ ಮೇಲೆ ಒತ್ತಡ ಹಾಕಿದ್ದರು.

ಇದರಿಂದ ಮಾತೃ ಪಕ್ಷಕ್ಕೆ ಬರಬೇಕೆಂಬ ಯತ್ನಾಳ್ ಆಸೆಗೆ ತಣ್ಣೀರು ಎರಚಿದಂತಾಗಿತ್ತು. ಆದರೆ ಪ್ರತ್ಯೇಕ ವೀರಶೈವ ಧರ್ಮ ಹೋರಾಟದಿಂದ ಬಿಜೆಪಿಯ ಸಾಂಪ್ರದಾಯಿಕ ಮತಗಳು ಕೈಕೊಡುವ ಭೀತಿ ವರಿಷ್ಠರನ್ನು ಕಾಡುತ್ತಿದೆ.  ಹೈದರಾಬಾದ್ ಕರ್ನಾಟಕದಲ್ಲಿ ವಿಶೇಷವಾಗಿ ಪಂಚಮಶಾಲಿ ಮತಗಳು ನಿರ್ಣಾಯಕವಾಗಿವೆ. ಈ ಸಮುದಾಯದ ಮೇಲೆ ಈಗಲೂ ಬಸವನಗೌಡ ಯತ್ನಾಳ್‍ಗೆ ಸಾಕಷ್ಟು ಹಿಡಿತ ಹೊಂದಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಕೆಲ ತಿಂಗಳ ಹಿಂದೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯನ್ನೇ ಪರಾಭವಗೊಳಿಸಿ ಪಕ್ಷೇತರರಾಗಿ ನಿಂತಿದ್ದ ಯತ್ನಾಳ್ ಗೆಲುವು ಸಾಧಿಸಿದ್ದರು.  ಇದೆಲ್ಲವನ್ನು ಪರಿಗಣಿಸಿರುವ ಬಿಜೆಪಿ ಕೇಂದ್ರ ನಾಯಕರು ಯತ್ನಾಳ್ ಪಕ್ಷ ಸೇರ್ಪಡೆಗೆ ಸಮ್ಮತಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಕಿತ್ತುಹಾಕಲಾಗಿತ್ತು.

Facebook Comments

Sri Raghav

Admin