ಯತ್ನಾಳ್ ಸೇರಿ ಹಲವರು ಬಿಜೆಪಿ ಸೇರ್ಪಡೆ, ಏ.8 ರಂದು ಮತ್ತಷ್ಟು ನಾಯಕರು ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

Yatnal-BJP

ಬೆಂಗಳೂರು, ಏ.4- ಪಕ್ಷಕ್ಕೆ ಇಂದು ಒಳ್ಳೆಯ ದಿನ. ಬಿಜೆಪಿಗೆ ಸೇರ್ಪಡೆಯಾದವರನ್ನು ತಾವು ಸ್ವಾಗತಿಸುತ್ತೇವೆ. ಇದೇ 8ರಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಸಾಕಷ್ಟು ಮಂದಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದರು. ಬಿಜೆಪಿ ಕಚೇರಿಯಲ್ಲಿಂದು ನಡೆದ ಸಮಾರಂಭದಲ್ಲಿ ಮಾಜಿ ಸಚಿವ ಬಸವರಾಜ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಜಯಪುರ ಬಸವ ಕಲ್ಯಾಣದಲ್ಲಿ ಇದೇ 8ಕ್ಕೆ ಬೃಹತ್ ಸಮಾವೇಶ ನಡೆಸಲಿದ್ದೇವೆ. ಈ ವೇಳೆ ಮಾಲೀಕಯ್ಯ ಗುತ್ತೇದಾರ್ ಇನ್ನೂ ನಾಲ್ಕು ಜನ ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಮತ್ತಷ್ಟು ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂದು ಹೇಳಿದರು.

ನಮಗೆ ಟಿಕೆಟ್ ಸಿಗದೆ ಹೋದರೆ ಬಿಜೆಪಿಯಲ್ಲಿ ಇರುತ್ತೇನೆ. ಪ್ರಧಾನಿ ನರೇಂದ್ರಮೋದಿ ಅವರ ಚಿಂತನೆ ಒಪ್ಪಿ ಪಕ್ಷಕ್ಕೆ ಬಂದಿದ್ದೇನೆ. ಯಡಿಯೂರಪ್ಪ ಅವರ ಕೈ ಬಲಪಡಿಸಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಮಲ್ಲಿಕಾರ್ಜುನ ಕೂಬಾ ತಿಳಿಸಿದರು. ತಮಗೆ ಆಗದ ಕೆಲವರು ಈ ರೀತಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಮಗೆ ಟಿಕೆಟ್ ಸಿಗದೆ ಹೋದರೂ ಬಿಜೆಪಿಯಲ್ಲಿ ಇರುತ್ತೇವೆ. ನಾಯಕರು ಹೇಳಿದಂತೆ ಕೆಲಸ ಮಾಡುತ್ತೇವೆ ಎಂದು ನುಡಿದರು.

ಅರಸಿಕೆರೆಯಿಂದ ಟಿಕೆಟ್‍ಗೆ ಆಗ್ರಹ:
ಕಾರ್ಯಕ್ರಮ ಪೂರ್ಣಗೊಂಡ ಬಳಿಕ ಯಡಿಯೂರಪ್ಪ ಅವರು ಕಾರು ಹತ್ತಲು ಬಂದಾಗ ಮಾಜಿ ಸಚಿವ ವಿ.ಸೋಮಣ್ಣ ಅವರ ಬೆಂಬಲಿಗರು ಕಾರಿಗೆ ಮುತ್ತಿಗೆ ಹಾಕಿ ಹಾಸನ ಜಿಲ್ಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಸೋಮಣ್ಣ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು. ಅರಸೀಕೆರೆಯಿಂದ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡಲೇಬೇಕು. ಅವರನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ ಎಂದು ಒತ್ತಾಯಿಸಿದರು. ಯಡಿಯೂರಪ್ಪ ಮಾತ್ರ ಯಾವುದಕ್ಕೂ ಪ್ರತಿಕ್ರಿಯಿಸಿದೆ ಸಿಟ್ಟಿನಿಂದಲೇ ಕಾರಿನಲ್ಲಿ ತೆರಳಿದರು.

ಮಾತೃ ಪಕ್ಷಕ್ಕೆ ಮರಳಿದ ನಾಯಕರು
ಭಾರತೀಯ ಜನತಾ ಪಾರ್ಟಿಗೆ ಇಂದು ಮಾಜಿ ಶಾಸಕರು ಹಾಗೂ ಕಳೆದ 2013ರಲ್ಲಿ ಮುನಿಸಿಕೊಂಡು ಪಕ್ಷ ತೊರೆದಿದ್ದ ಹಲವು ನಾಯಕರು ಇಂದು ಮಾತೃಪಕ್ಷಕ್ಕೆ ಮರಳಿದ್ದಾರೆ.   ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತಿತರ ಮುಖಂಡರ ಸಮ್ಮುಖದಲ್ಲಿ ಮಾಜಿ ಸಚಿವರಾದ ಬಸವರಾಜ ಪಾಟೀಲ್ ಯತ್ನಾಳ್, ನಾಗಪ್ಪ ಸಾಲೋಣಿ, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ ಹಾಗೂ ಮಲ್ಲಿಕಾರ್ಜುನ ಕೂಬಾ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಪಕ್ಷದ ಧ್ವಜ ಸ್ವೀಕರಿಸಿ ಸೇರ್ಪಡೆಯಾದರು.   ಯತ್ನಾಳ್ ಸೇರ್ಪಡೆಗೆ ವಿಜಯಪುರದಲ್ಲಿ, ಕೂಬಾ ಸೇರ್ಪಡೆಗೆ ಬೀದರ್‍ನಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಈ ಹಿಂದೆ ಪಕ್ಷ ಹಾಗೂ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದ ಇವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಲಾಯಿತು.
ಅದರಲ್ಲೂ ಮಲ್ಲಿಕಾರ್ಜುನ ಕೂಬಾ ಅವರು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧ ಹೇಳಿಕೆ ನೀಡಿದ್ದು, ಕ್ಷೇತ್ರದಲ್ಲೂ ಸಾಕಷ್ಟು ಭ್ರಷ್ಟಾಚಾರ ನಡೆಸಿರುವ ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದಂತೆ ಒತ್ತಾಯಿಸಲಾಯಿತು. ಈ ಹಂತದಲ್ಲಿ ಪಕ್ಷದ ಕಚೇರಿ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

Facebook Comments

Sri Raghav

Admin