ಯಮರೂಪಿ ಬಸ್ಸಿಗೆ ಅಜ್ಜಿ-ತಾತ ಬಲಿ, ಪ್ರಾಣಾಪಾಯದಿಂದ ಪಾರಾದ ಮೊಮ್ಮಗು

ಈ ಸುದ್ದಿಯನ್ನು ಶೇರ್ ಮಾಡಿ

Accident--02

ಬೆಂಗಳೂರು, ಅ.3- ಅನಾರೋಗ್ಯದ ನಿಮಿತ್ತ ಮೊಮ್ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬೈಕ್‍ನಲ್ಲಿ ಹಿಂದಿರುಗುತ್ತಿದ್ದಾಗ ಹಿಂದಿನಿಂದ ಅತಿವೇಗವಾಗಿ ಬಂದ ತಮಿಳುನಾಡಿನ ಬಸ್ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಅಜ್ಜಿ-ತಾತ ಸ್ಥಳದಲ್ಲೇ ಮೃತಪಟ್ಟಿದ್ದು, ಆಶ್ಚರ್ಯಕರ ರೀತಿಯಲ್ಲಿ ಮೊಮ್ಮಗು ಪಾರಾಗಿರುವ ಘಟನೆ ಚಿಕ್ಕಪೇಟೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು ರಸ್ತೆ ಗೋರಿಪಾಳ್ಯ ನಿವಾಸಿಗಳಾದ ಅಂಥೋಣಿ ಜೋಸೆಫ್ (55), ಮತ್ತು ಸಗಾಯ ಮೇರಿ(53) ಮೃತಪಟ್ಟ ದಂಪತಿ.

ಈ ದಂಪತಿಯ ಆರು ವರ್ಷದ ಮೊಮ್ಮಗನಿಗೆ ಅನಾರೋಗ್ಯವಿದ್ದ ಕಾರಣ ಬೈಕ್‍ನಲ್ಲಿ ಮಾರ್ಥಾಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ರಾತ್ರಿ 11 ಗಂಟೆ ಸಂದರ್ಭದಲ್ಲಿ ಜೆ.ಜೆ.ನಗರಕ್ಕೆ ಹಿಂದಿರುಗುತ್ತಿದ್ದರು. ಕೆ.ಆರ್.ಮಾರ್ಕೆಟ್ ಫ್ಲೈಓವರ್ ಬಳಿ ಹಿಂದಿನಿಂದ ಅತಿ ವೇಗವಾಗಿ ಬಂದ ತಮಿಳುನಾಡು ಸಾರಿಗೆ ಸಂಸ್ಥೆ ಬಸ್ ಇವರ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಮೊಮ್ಮಗ ಒಂದು ಬದಿಗೆ ಬಿದ್ದರೆ, ದಂಪತಿ ಬಸ್‍ನ ಚಕ್ರಕ್ಕೆ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊಮ್ಮಗುವಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಪೆಟೆ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಸಂಚಾರಿ ಠಾಣೆ ಪೊಲೀಸರು ಬಸ್ ವಶಕ್ಕೆ ಪಡೆದು ಮೃತರ ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕನಿಗಾಗಿ ತನಿಖೆ ಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin