ಯಾರಿಗೂ ಬೇಡವಾದ ಬಳ್ಳಾರಿ ಗಣಿಧಣಿ…!

ಈ ಸುದ್ದಿಯನ್ನು ಶೇರ್ ಮಾಡಿ

Janardhan-Reddy--01

ಬೆಂಗಳೂರು,ಏ.28-ಒಂದು ಕಾಲದಲ್ಲಿ ಪಕ್ಷವನ್ನು ತನ್ನ ವಜ್ರಮುಷ್ಟಿಯಲ್ಲಿಟ್ಟುಕೊಂಡು ರಾಷ್ಟ್ರೀಯ ನಾಯಕರಿಗೆ ಸೆಡ್ಡು ಹೊಡೆದಿದ್ದ ಬಳ್ಳಾರಿ ಗಣಿಧಣಿ ಜನಾರ್ಧನ ರೆಡ್ಡಿ ಇಂದು ಯಾರಿಗೂ ಬೇಡವಾಗಿದ್ದಾರೆ. ಪರಮಾಪ್ತ ಶ್ರೀರಾಮುಲು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅವರ ಗೆಲುವಿಗೆ ರೆಡ್ಡಿ ಟೊಂಕ ಕಟ್ಟಿ ನಿಂತಿದ್ದಾರೆ. ನಾನು ಬಿಜೆಪಿಯಲ್ಲಿ ಇಲ್ಲ ಎಂದು ರೆಡ್ಡಿ ಸಾರಿ ಸಾರಿ ಹೇಳುತ್ತಿದ್ದಾರೆ. ಇತ್ತ ಬಿಜೆಪಿ ಕೂಡ ನಮಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಘಂಟಾಘೋಷವಾಗಿ ಹೇಳುತಿದೆಯಾದರೂ ವಾಸ್ತವದಲ್ಲಿ ಅವರು ಪಕ್ಷಕ್ಕೆ ಹತ್ತಿರವಾಗುತ್ತಿದ್ದಾರೆ.

ನನ್ನ ರಕ್ತದ ಕಣಕಣದಲ್ಲೂ ಬಿಜೆಪಿ ಇದೆ ಎಂದು ಹೇಳಿದ್ದು ಬಿಜೆಪಿಗೆ ಉಗುಳಲು ಆಗದ, ನುಂಗಲು ಆಗದ ಬಿಸಿ ತುಪ್ಪವಾಗಿ ಪರಿಣಮಿಸುತ್ತಿದೆ. ಇದೀಗ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ರೆಡ್ಡಿಯನ್ನೇ ಗುರಿಯಾಗಿಟ್ಟುಕೊಂಡು ಕಮಲ ಪಡೆಯನ್ನು ಹಣಿಯಲು ಮುಂದಾಗಿದ್ದಾರೆ. ಪ್ರಸ್ತುತ ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಜನಾರ್ಧನ ರೆಡ್ಡಿ ಹಾಗೂ ಇತರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.

ಎರಡು ದಿನಗಳಿಂದ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಪ್ರವಾಸ ನಡೆಸಿದ ಅವರು, ತಮ್ಮ ಭಾಷಣದಲ್ಲೂ ಇದೇ ವಿಷಯವನ್ನು ಪ್ರಸ್ತಾಪಿಸಿದ್ದರು. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರೆಡ್ಡಿ ಸಹೋದರರನ್ನೇ ಗುರಿಯಾಗಿಟ್ಟುಕೊಂಡು ಟೀಕೆ ಮಾಡುತ್ತಿರುವುದು ಬಿಜೆಪಿಗೆ ಮುಜುಗರ ಉಂಟುಮಾಡುತ್ತಿದೆ.

ನಾನು ಕೇವಲ ಸ್ನೇಹಿತ. ರಾಮುಲು ಪರವಾಗಿ ಮಾತ್ರ ಪ್ರಚಾರ ನಡೆಸುತ್ತಿದ್ದೇನೆ ಎಂದು ಜನಾರ್ಧನ ರೆಡ್ಡಿ ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ದಿನದಿಂದ ದಿನಕ್ಕೆ ಇದು ಬಿಜೆಪಿಗೆ ಮುಳುಗಡೆಯಾಗುವ ಮುನ್ಸೂಚನೆಯನ್ನು ನೀಡುತ್ತಿದೆ. ತಮ್ಮನ್ನು ರಾಜಕಾರಣದಲ್ಲಿ ಮೂಲೆಗುಂಪು ಮಾಡಿದವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ರೆಡ್ಡಿ ಹಠಕ್ಕೆ ಬಿದ್ದಿದ್ದಾರೆ. ರಾಮುಲು ಮೂಲಕ ಅವರು ಬಿಜೆಪಿಗೆ ಪ್ರವೇಶ ಪಡೆಯುವ ವಿಫಲ ಪ್ರಯತ್ನವನ್ನು ಹಿಂದೆಯೇ ನಡೆಸಿದ್ದರು.  ಯಾವಾಗ ಮೊಳಕಾಲ್ಮೂರಿನಿಂದ ರಾಮುಲು ಸ್ಪರ್ಧಿಸಿದರೋ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್, ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ , ಉಸ್ತುವಾರಿ ಮುರುಳೀಧರ್ ರಾವ್ ಜೊತೆ ನೇರವಾಗಿಯೇ ಒಂದೇ ವಾಹನದಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದ್ದರು.

ರೆಡ್ಡಿ ರಾಜಕೀಯ ಒಳಮರ್ಮವನ್ನು ಅರಿತಿರುವ ಸಿದ್ದರಾಮಯ್ಯ ಪದೇ ಪದೇ ಅವರನ್ನು ಚುಚ್ಚುವ ಮೂಲಕ ಬಿಜೆಪಿಯಿಂದ ದೂರ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕದ ಗಣಿ ಸಂಪತ್ತನ್ನು ಲೂಟಿ ಮಾಡಿರುವ ರೆಡ್ಡಿ ಸಹೋದರರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಮುಂದಾಗಿದೆ. ರಾಜ್ಯದ ಜನತೆ ಎಚ್ಚರವಾಗಿರಬೇಕೆಂದು ಮತದಾರರನ್ನು ಜಾಗೃತಗೊಳಿಸುತ್ತಿದ್ದಾರೆ. ಅವರು ಇದರಿಂದ ವಿಚಲಿತರಾಗಿರುವ ಬಿಜೆಪಿ ನಾಯಕರು ರೆಡ್ಡಿಯನ್ನು ದೂರ ಇಡುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin