ಯಾವುದೇ ಕಾರಣಕ್ಕೂ ಕರ್ನಾಟಕ ಮುಕ್ತ ವಿವಿ ಮುಚ್ಚಲ್ಲ : ಪ್ರಕಾಶ್ ಜಾವ್ಡೇಕರ್

ಈ ಸುದ್ದಿಯನ್ನು ಶೇರ್ ಮಾಡಿ

Prakash-Javdekar--01

ಬೆಂಗಳೂರು,ಅ.13-ಯಾವುದೇ ಕಾರಣಕ್ಕೂ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮುಚ್ಚಲು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಸ್ಪಷ್ಟಪಡಿಸಿದ್ದಾರೆ.  ಸಚಿವರ ಹೇಳಿಕೆಯಿಂದ ಮುಚ್ಚುವ ಭೀತಿಯಲ್ಲಿದ್ದ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮತ್ತೆ ಪುನರಾಂಭವಾಗುವ ಎಲ್ಲ ಲಕ್ಷಣಗಳು ಗೋಚರಿಸಿದೆ.   ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ವಿವಿಯನ್ನು ಪುನರಾಂಭ ಮಾಡುತ್ತೇವೆ ಎಂದು ಹೇಳಿದರು.

ವಿವಿಯಲ್ಲಿ ಸುಮಾರು 580 ಕೋಟಿ ಹಣ ಅವ್ಯವಹಾರ ನಡೆದಿರುವುದು ನಮಗೆ ಗಮನಕ್ಕೆ ಬಂದಿದೆ. ಈಗಾಗಲೇ ಯುಜಿಸಿ ಕೂಡ ಇದರ ತನಿಖೆಯನ್ನು ನಡೆಸುತ್ತಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಿದ್ದೇವೆ ಎಂದು ತಿಳಿಸಿದರು.  ನಾಲ್ಕು ಆಯಾಮಗಳಲ್ಲಿ ನಾವು ತನಿಖೆಯನ್ನು ನಡೆಸುತ್ತಿದ್ದೇವೆ. ಮುಖ್ಯವಾಗಿ ಆತಂರಿಕ ಲೆಕ್ಕ ಪರಿಶೋಧನ ಸಮಿತಿ ವರದಿಯೇ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ ಯುಜಿಸಿ ನೀಡುವ ವರದಿ ಮೇಲೆ ನಾವು ಮುಂದಿನ ಕ್ರಮ ಜರುಗಿಸಲಿದ್ದೇವೆ ಎಂದರು.

ವಿವಿಯನ್ನು ಮುಚ್ಚಲಾಗುತ್ತದೆ ಎಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಅಂತಹ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂದು ಜಾವ್ಡೇಕರ್ ಇದಕ್ಕೆ ಬೇಕಾದ ಎಲ್ಲ ರೀತಿಯ ಮೂಲಭೂತ ಸೌಕರ್ಯ, ಅನುದಾನ ನೀಡಲು ಸರ್ಕಾರ ಸಿದ್ದವಿದೆ.  ಯಾವ ಕಾರಣಕ್ಕಾಗಿ ಇದನ್ನು ಮುಚ್ಚಲಿದೆ ಎಂದು ಕರ್ನಾಟಕದ ಸಚಿವರೊಬ್ಬರು ಹೇಳಿದ್ದಾರೆ ಎಂಬುದು ನನಗೆ ತಿಳಿದಿಲ್ಲ ಎಂದು ಪರೋಕ್ಷವಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ವಿಶ್ವವಿದ್ಯಾನಿಲಯದಲ್ಲಿ 3.50 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿವಿಗೆ ಬೇಕಾದ ಸಹಾಯವನ್ನು ನೀಡಲಿದ್ದೇವೆ. ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದರು.  ಇದಕ್ಕೂ ಮುನ್ನ ಮಾಜಿ ಸಚಿವ ರಾಮದಾಸ್ ನೇತೃತ್ವದಲ್ಲಿ ಬಿಜೆಪಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ಮುಕ್ತ ವಿವಿಯನ್ನು ಮುಚ್ಚಬಾರದು ಎಂದು ಸಚಿವರಿಗೆ ಮನವಿ ಮಾಡಿದರು.

Facebook Comments

Sri Raghav

Admin