ಯಾವುದೇ ಕಾರಣ್ಣಕ್ಕೂ ಬ್ರಿಗೇಡ್ ಸಮಾವೇಶ ನಿಲ್ಲಲ್ಲ : ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

eshwarappa

ಬಾಗಲಕೋಟೆ, ಜ.25- ನಾಳೆ ನಡೆಯಲಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶಕ್ಕೆ ನಾನು ಯಾರನ್ನೂ ವೈಯಕ್ತಿಕವಾಗಿ ಆಹ್ವಾನಿಸಿಲ್ಲ. ಹಿಂದುಳಿದವರು, ದಲಿತರು ಜಾಗೃತರಾಗುತ್ತಿರುವ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಏಕೆ ವಿರೋಧಿಸುತ್ತಾರೆಂದು ಮುಖಂಡ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರೊಬ್ಬರನ್ನೂ ಸಮಾವೇಶಕ್ಕೆ ಬರಬೇಕೆಂದು ಆಹ್ವಾನ ನೀಡಿಲ್ಲ. ಯಾರು ಬೇಕಾದರೂ ಬರಬಹುದು. ಆದರೆ, ಕೆಲವರು ಇದಕ್ಕೆ ಪ್ರತಿರೋಧ ತೋರುತ್ತಿರುವುದು ತಮಗೆ ಅರ್ಥವಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‍ನಲ್ಲಿ ತಮಗೆ ಸೂಕ್ತ ನ್ಯಾಯ ಸಿಕ್ಕಿಲ್ಲವೆಂದು ದಲಿತರು ಮತ್ತು ಹಿಂದುಳಿದವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇವರನ್ನು ಜಾಗೃತಿಗೊಳಿಸುವುದು ನಮ್ಮ ಉದ್ದೇಶ. ಯಡಿಯೂರಪ್ಪ ವಿನಾಕಾರಣ ಅಪಸ್ವರ ತೆಗೆಯುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನಾಳೆ ನಡೆಯಲಿರುವ ರಾಯಣ್ಣ ಬ್ರಿಗೇಡ್ ಸಮಾವೇಶಕ್ಕೆ ನಾನು ಹೋಗುತ್ತೇನೆ. ಬಸವಣ್ಣನ ನಾಡು ಕೂಡಲ ಸಂಗಮದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಇತಿಹಾಸ ಪುಟದಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದು ಹೇಳಿದರು.

ಬ್ರಿಗೇಡ್ ಬಿಡುವುದಿಲ್ಲ:

ಯಾವುದೇ ಕಾರಣಕ್ಕೂ ಯಾರು ಎಷ್ಟೇ ಅಪಸ್ವರ ತೆಗೆದರೂ ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನಿಂದ ವಿಮುಖನಾಗುವುದಿಲ್ಲ. ಹಿಂದುಳಿದವರು ಮತ್ತು ದಲಿತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಘೋಷಿಸಿದರು. ಬ್ರಿಗೇಡ್‍ಗೂ ಮತ್ತು ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ. ಆದರೆ, ಯಡಿಯೂರಪ್ಪ ಇದನ್ನು ನನ್ನ ಜನ್ಮದಲ್ಲೇ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ಹೇಳಿದರು.

ಸಹಿಗೆ ಬೆಲೆ ಇಲ್ಲ:

ಇನ್ನು ತಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಪಕ್ಷದ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಶಾಸಕರು ಸಹಿ ಸಂಗ್ರಹಣೆ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಇದಕ್ಕೆ ಯಾವುದೇ ಬೆಲೆ ಇಲ್ಲ ಎಂದು ವ್ಯಂಗ್ಯವಾಡಿದರು. ಈಗಾಗಲೇ ರಾಜ್ಯ ಉಸ್ತುವಾರಿ ಪಿ.ಮುರಳೀಧರ್‍ರಾವ್ ಸ್ಪಷ್ಟಪಡಿಸಿರುವಂತೆ ಪಕ್ಷದಲ್ಲಿ ಸಹಿ ಸಂಗ್ರಹಣೆ ಮಾಡಬಾರದೆಂದು ಸೂಚಿಸಿದ್ದಾರೆ. ಆದರೂ ಕೆಲವರು ಮಾಡಿರುವುದು ನೋವಿನ ಸಂಗತಿ. ಇದಕ್ಕೆ ಕವಡೆ ಕಾಸಿನ ಬೆಲೆ ಇರುವುದಿಲ್ಲ ಎಂದು ಟೀಕಿಸಿದರು. ಕಲಬುರಗಿಯಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಮುಖಂಡರು ಮನವಿ ಮಾಡಿದ್ದಾರೆ. ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ವರಿಷ್ಠರು ಸಮಯಾವಕಾಶ ನೀಡುತ್ತಿಲ್ಲ. ಶೀಘ್ರದಲ್ಲೇ ಎಲ್ಲವೂ ಬಗೆಹರಿಯುವ ವಿಶ್ವಾಸ ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin