ಯಾವುದೇ ಜ್ವರ ಬಂದರೂ ಉದಾಸೀನ ಮಾಡಬೇಡಿ, ಅದಕ್ಕೆ ಕಾರಣ ನಿಫಾ ಆಗಿರಬಹುದು..!

ಈ ಸುದ್ದಿಯನ್ನು ಶೇರ್ ಮಾಡಿ

Nipah-virus
ಬೆಂಗಳೂರು, ಮೇ 26-ಯಾವುದೇ ರೀತಿಯ ಜ್ವರ ಬಂದಲ್ಲಿ ಉದಾಸೀನ ಮಾಡದೆ ತಜ್ಞವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಫಾ ರೋಗಿಗಳ ಜೊತೆ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮಾಸ್ಕ್ ಕೈಕವಚ ಧರಿಸುವುದು ಮುಂತಾದ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಬೀದಿ ಬದಿಗಳಲ್ಲಿ ಮಾರುವ ಹಣ್ಣುಗಳನ್ನು ಸೇವಿಸ ಬಾರದು ಹಾಗೂ ನೀರಾ ಇಳಿಸುವವರು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಬಾವುಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ತೆರೆದ ಬಾವಿ ನೀರನ್ನು ಶುದ್ಧೀಕರಿಸಿ ಸೇವಿಸುವುದು ಹಾಗೂ ಬಾವಿಗಳನ್ನು ಬಲೆಗಳಿಂದ ಮುಚ್ಚಿ ಬಾವುಲಿಗಳು ಒಳಗಡೆ ಹೋಗದಂತೆ ತಡೆಯುವುದು ಅತಿ ಮುಖ್ಯವಾಗಿದೆ ಎಂದರು. ವೈರಸ್ ಜ್ವರವು ನೇರ ಸಂಪರ್ಕದಿಂದ ಹರಡುವುದರಿಂದ ಸೋಂಕಿತ ವ್ಯಕ್ತಿ ಮತ್ತು ಪ್ರಾಣಿಗಳಿಂದ ದೂರವಿರುವುದು ಸೂಕ್ತವಾಗಿದೆ. ಯಾವುದೇ ಪ್ರಕರಣಗಳು ಕಂಡು ಬಂದಲ್ಲಿ ಹಾಗೂ ರೋಗದ ಬಗ್ಗೆ ಮಾಹಿತಿ ತಿಳಿಯಲು ಸಹಾಯವಾಣಿ ಸಂಖ್ಯೆ: 104 ಕ್ಕೆ ಕರೆ ಮಾಡಬಹುದು ಎಂದರು.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಡೆಂಗ್ಯು ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಇದೇ ವೇಳೆ ದಯಾನಂದ್ ತಿಳಿಸಿದರು. ನೆರೆ ರಾಜ್ಯ ಕೇರಳಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ತೀವ್ರ ನಿಗಾವಣೆ ಮತ್ತು ಸಕ್ರಿಯ ಸರ್ವಲೆನ್ಸ್ ಕಾರ್ಯಕ್ರಮಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತರೆ ಇಲಾಖೆಗಳ ಸಮನ್ವಯ ಸಮಿತಿ ಸಭೆಯನ್ನು ಏರ್ಪಡಿಸಿ ಹಮ್ಮಿಕೊಳ್ಳಲಾಗಿದೆ ಎಂದರು.  ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜ್, ಡಾ.ಶ್ರೀನಿವಾಸ್, ಡಾ.ರಮೇಶ್, ಡಾ. ಶರೀಫ್, ಡಾ.ಆಶಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin