ಯಾವ ಪುರುಷಾರ್ಥಕ್ಕೆ ಟಿಪ್ಪು ಜಯಂತಿ ಆಚರಿಸುತ್ತಿದ್ದೀರಿ..? : ಶೋಭಾ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

ShobhA-KA

ಬೆಂಗಳೂರು, ಅ.27- ಅಲ್ಪ ಸಂಖ್ಯಾತರ ಮತಗಳನ್ನು ಓಲೈಸಿಕೊಳ್ಳುವ ಕಾರಣಕ್ಕಾಗಿ ಟಿಪ್ಪು ಜಯಂತಿ ಆಚರಿಸುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಮುವಾದಿ ಎಂಬುದನ್ನು ಸಾಬೀತುಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ನಗರದ ಮೌರ್ಯ ವೃತ್ತದ ಬಳಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಕ್ಕಿನ ಸೇತುವೆ ವಿರೋಧಿಸಿ ಅಪ್ಪಿಕೋ ಚಳವಳಿಯಲ್ಲಿ ಅವರು ಮಾತನಾಡಿದರು. ಟಿಪ್ಪು ಜಯಂತಿ ಆಚರಣೆ ಮಾಡಬಾರದೆಂದು ಅನೇಕರು ಒತ್ತಾಯಿಸಿದ್ದಾರೆ. ಆದರೆ, ಹಠಕ್ಕೆ ಬಿದ್ದಿರುವ ಸರ್ಕಾರ ಮಾಡಿಯೇ ತೀರುತ್ತೇವೆಂದು ದಿನಾಂಕ ನಿಗದಿಪಡಿಸಿದೆ. ಈ ಮೂಲಕ ಜಾತಿ ಮತ್ತು ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆಂದು ಅವರು ದೂರಿದರು.

ಸಿದ್ದರಾಮಯ್ಯ ಮಾತೆತ್ತಿದರೆ ಬಿಜೆಪಿಯವರು ಕೋಮುವಾದಿಗಳೆಂದು ಆರೋಪಿಸುತ್ತಾರೆ. ಟಿಪ್ಪು ಸುಲ್ತಾನ್ ಓರ್ವ ಮತಾಂಧ ಎಂಬುದಕ್ಕೆ ಇತಿಹಾಸದಲ್ಲಿ ಅನೇಕ ಸಾಕ್ಷಿಗಳು ಸಿಗುತ್ತವೆ. ಯಾವ ಪುರುಷಾರ್ಥಕ್ಕೆ ಜಯಂತಿ ಆಚರಣೆ ಮಾಡಬೇಕೆಂದು ಅವರು ಪ್ರಶ್ನೆ ಮಾಡಿದರು. ಬಿಜೆಪಿ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡಲು ಅವಕಾಶ ನೀಡುವುದಿಲ್ಲ. ವೋಟ್‍ಬ್ಯಾಂಕ್ ರಾಜಕಾರಣಕ್ಕಾಗಿ ಜಾತಿ, ಧರ್ಮಗಳ ನಡುವೆ ಗೊಂದಲ ಸೃಷ್ಟಿಸುವುದು ಬೇಡ. ಟಿಪ್ಪು ಎಂತಹವನೆಂಬುದು ಇಡೀ ದೇಶಕ್ಕೇ ಗೊತ್ತಿದೆ ಎಂದು ಹರಿಹಾಯ್ದರು. ಟಿಪ್ಪು ಸುಲ್ತಾನ್ ಕನ್ನಡ ನಾಡಿನ ಅನೇಕ ರಾಜರುಗಳನ್ನು ಕೊಂದು ಹಾಕಿದ್ದಾನೆ. ಚಿತ್ರದುರ್ಗದ ಮದಕರಿ ನಾಯಕ ವಂಶವನ್ನು ನಿರ್ವಂಶ ಮಾಡಿದ್ದು ಇದೇ ಟಿಪ್ಪು ಸುಲ್ತಾನ್. ಮಡಿಕೇರಿಯಲ್ಲಿ ಕೊಡಗಿನವರ ಮೇಲೆ ಮಂಗಳೂರಿನಲ್ಲಿ ಕ್ರೈಸ್ತರ ಮೇಲೆ ಹಲ್ಲೆ ನಡೆಸಿದ್ದು ಇದೇ ಟಿಪ್ಪು ಸುಲ್ತಾನ್ ಎಂದು ಅವರು ಹೇಳಿದರು.

ಇಷ್ಟಿದ್ದೂ ಆತನನ್ನು ಮಹಾನ್ ಜಾತ್ಯತೀತ ನಾಯಕ ಎಂದು ಬಿಂಬಿಸಿ ಸರ್ಕಾರದ ಖರ್ಚಿನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುತ್ತಿರುವುದು ಸರಿಯಲ್ಲ ಎಂದು ಶೋಭಾ ಆಕ್ಷೇಪಿಸಿದರು.
ವಿಧಾನಸೌಧದಲ್ಲಿ ಈ ಜಯಂತಿ ಹಮ್ಮಿಕೊಂಡಿರುವುದಕ್ಕೆ ಸರ್ಕಾರಕ್ಕೆ ನಾಚಿಕೆಯಾಗಬೇಕು. ಸಿದ್ದರಾಮಯ್ಯಗೆ ಟಿಪ್ಪು ಸುಲ್ತಾನ್ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ ಅವರ ಮನೆಯಲ್ಲಿ ಬೇಕಿದ್ದರೆ ಮಾಡಿಕೊಳ್ಳಲಿ. ಯಾರೊಬ್ಬರೂ ಪ್ರಶ್ನಿಸುವುದಿಲ್ಲ. ಅವರ ಸ್ವಂತ ಖರ್ಚಿನಲ್ಲಿ ಇಲ್ಲವೆ ಪಕ್ಷದ ವತಿಯಿಂದ ಮಾಡಿದರೆ ನಮ್ಮದೇನೂ ತಕರಾರಿಲ್ಲ. ಸರ್ಕಾರದ ವತಿಯಿಂದ ಮಾಡುವುದು ಇದು ಸರಿಯಲ್ಲ ಎಂದು ಶೋಭಾ ಕರಂದ್ಲಾಜೆ ತರಾಟೆಗೆ ತೆಗೆದುಕೊಂಡರು.

ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ನಗರದ ಅಂದವನ್ನೇ ಹಾಳು ಮಾಡುತ್ತದೆ. ಸಾರ್ವಜನಿಕರು ಇದಕ್ಕೆ ಪ್ರತಿಭಟನೆ ನಡೆಸಿದರೂ ಯಾವುದನ್ನೂ ಲೆಕ್ಕಿಸದೆ ಮಾಡಿಯೇ ತೀರುತ್ತೇನೆಂದು ಹೊರಟಿರುವುದು ಅನೇಕ ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದರು. ಮೊದಲು ಸಚಿವ ಸಂಪುಟದಲ್ಲಿ 1300 ಕೋಟಿಗೆ ನಿಗದಿಪಡಿಸಿದ್ದ ವೆಚ್ಚವನ್ನು 1800 ಕೋಟಿಗೆ ಹೆಚ್ಚಳ ಮಾಡಲಾಯಿತು. ಕೇವಲ ಆರೂವರೆ ಕಿಲೋ ಮೀಟರ್ ದೂರಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.

ಈಗಾಗಲೇ ನಮ್ಮ ಮೆಟ್ರೋದಿಂದ ನಗರದ ಅಂದ ಹಾಳಾಗಿದೆ. ಮೆಟ್ರೋವನ್ನು ಅಂಡರ್‍ಗ್ರೌಂಡ್ ಮಾಡಬೇಕೆಂಬುದು ಬಹುತೇಕರ ಒತ್ತಾಯವಾಗಿದೆ. ಉಕ್ಕಿನ ಸೇತುವೆ ಬೇಡ ಎಂದು ಸಾರ್ವಜನಿಕರು ಹೇಳುತ್ತಿದ್ದರೂ ಸರ್ಕಾರ ನಿರ್ಮಿಸಲು ಮುಂದಾಗಿರುವುದನ್ನು ನೋಡಿದರೆ ಇದರಲ್ಲಿ ಭಾರೀ ಮೊತ್ತದ ಕಿಕ್‍ಬ್ಯಾಕ್ ನಡೆದಿರಬಹುದೆಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯೆ ತಾರಾ, ಚಿತ್ರನಟಿ ಶೃತಿ ಸೇರಿದಂತೆ ಬಿಬಿಎಂಪಿಯ ಕೆಲವು ಸದಸ್ಯರು ಹಾಜರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin