‘ಯುಗಪುರುಷ’ನ ಆಟ ಶುರು

ಈ ಸುದ್ದಿಯನ್ನು ಶೇರ್ ಮಾಡಿ

yugapurusha-01

ಸ್ಯಾಂಡಲ್‍ವುಡ್‍ನಲ್ಲಿ ಮತ್ತೆ ಯುಗಪುರುಷನ ಆಗಮನವಾಗಿದೆ. ಸುಮಾರು 28 ವರ್ಷಗಳ ಹಿಂದೆ ಡಿ.ರಾಜೇಂದ್ರ ಬಾಬು ಅವರ ಸಾರಥ್ಯದಲ್ಲಿ ತೆರೆಗೆ ಬಂದ ಯುಗ ಪುರುಷ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮನೋಜ್ಞವಾಗಿ ಅಭಿನಯಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಈಗ ಮತ್ತೆ ಅದೇ ಹೆಸರಿನಲ್ಲಿ ಹೊಸ ಕಥಾನಕ ಹೊಂದಿರುವ ಚಿತ್ರವೊಂದು ನಿರ್ಮಾಣವಾಗಿ ಈವಾರ ತೆರೆಗೆ ಬರುತ್ತಿದೆ.  ಈ ಹಿಂದೆ ಮನಸುಗಳ ಮಾತು ಮಧುರ, ಗೌರೀಪುತ್ರ ಎಂಬ ಚಿತ್ರಗಳನ್ನು ನಿರ್ದೇಶಿಸಿದ ಮಂಜು ಮಸ್ಕಲ್ ಮಟ್ಟಿ ಅವರ ನಿರ್ದೇಶನದ ಮೂರನೇ ಚಿತ್ರವಾಗಿ ಯುಗ ಪುರುಷ ಮೂಡಿಬಂದಿದೆ. ಯುವ ನಟ ಅರ್ಜುನ್ ದೇವ್ ನಾಯಕ ನಟನಾಗಿ ಈ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಹೊಸದಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದಲ್ಲಿ ಅನಾಥಾಶ್ರಮದಲ್ಲಿ ಬೆಳೆದ ಹುಡುಗನಾಗಿ ಅಲ್ಲದೆ ನಿಷ್ಠೆ ಹಾಗೂ ನಿಯತ್ತಿಗೆ ಮತ್ತೊಂದು ಹೆಸರಾದ ಟಗರು ಎಂಬ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ.ಈ ಅನಾಥ ವ್ಯಕ್ತಿಯ ಜೀವನದಲ್ಲಿ ಪ್ರೀತಿಯ ತಂಗಾಳಿ ಸುಳಿದಾಗ ಮುಂದೇನಾಗುತ್ತದೆ ಎಂಬುದನ್ನು ಯುಗಪುರುಷ ಚಿತ್ರದ ಮೂಲಕ ಹೇಳಲಾಗಿದೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಈ ಹಾಡುಗಳಿಗೆ ಧನ್‍ಪಾಲ್ ಸಿಂಗ್ ರಜಪೂತ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡುಗಳಿಗೆ ತ್ರಿಭುವನ್ ನೃತ್ಯ ಸಂಯೋಜಿಸಿದ್ದಾರೆ. ಆ್ಯಕ್ಷನ್, ಲವ್‍ಸ್ಟೋರಿ ಕಥಾಹಂದರವಿರುವ ಯುಗ ಪುರುಷ ಚಿತ್ರದಲ್ಲಿ ದೇವರಾಜ್ ಹಾಗೂ ಶೋಭ್‍ರಾಜ್ ಬಹಳ ವಿಶೇಷವಾದಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಪವನ್, ಮೋಹನ್ ಜುನೇಜ, ಪಲ್ಲಕ್ಕಿ ರಾಧಾಕೃಷ್ಣ ಸೇರಿದಂತೆ ದೊಡ್ಡ ತಾರಾಬಳಗವನ್ನೇ ಒಳಗೊಂಡಿದೆ. ಈ ಚಿತ್ರವನ್ನು ಚಳ್ಳಕೆರೆ ಮೂಲದ ವೈದ್ಯ ಡಾ.ಮಂಜುನಾಥ್ ಬಾಬು ನಿರ್ಮಿಸಿದ್ದಾರೆ. ಕರ್ನಾಟಕದ ನಾನಾ ಭಾಗಗಳಲ್ಲಿ ಸುಮಾರು 40ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣಗೊಂಡ ಈ ಚಿತ್ರಕ್ಕೆ ಶರತ್ ಕುಮಾರ್ ಅವರ ಛಾಯಾ ಗ್ರಹಣ,   ವಿನೋದ್ ಮನೋಹರ್ ಅವರ ಸಂಕಲನ, ನವೀನ್ ಕೃಷ್ಣ ಅವರ ಸಂಭಾಷಣೆ ಇದೆ. ಅಲ್ಲದೆ, ಆರು ಆ್ಯಕ್ಷನ್ ಸೀನ್‍ಗಳು ಚಿತ್ರದಲ್ಲಿದ್ದು, ಕೌರವ ವೆಂಕಟೇಶ್, ಜೋನ್ಸ್ ಸಾಹಸ ಸಂಯೋಜನೆ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ಅರ್ಜುನ್ ದೇವ್ ಜೊತೆ ನಾಯಕಿಯಾಗಿ ಗುಜರಾತಿ ಮೂಲದ ಜಾನಿ ಝವೇರಿ ಅಭಿನಯಿಸಿದ್ದಾರೆ.

ನಿರೀಕ್ಷೆಯಂತೆ ರಾಜ್ಯಾದ್ಯಂತ ಜಯಣ್ಣ ಕಂಬೈನ್ಸ್ ಮೂಲಕ ಬಿಡುಗಡೆಗೊಳ್ಳುತ್ತಿರುವ ಯುಗ ಪುರುಷನ  ಆರ್ಭಟ ಯಾವ ರೀತಿ ಬೆಳ್ಳಿ ಪರದೆ ಮೇಲೆ ಕಾಣಲಿದೆ ಎಂಬುದನ್ನು ಪ್ರೇಕ್ಷಕ   ಪ್ರಭುಗಳು ನೋಡಿ ನಿರ್ಧರಿಸಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin