ಯುಗಾದಿಯನ್ನು ಆಚರಿಸಲೇಬೇಕು ಏಕೆ ಗೊತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

yugadi
ಯುಗಾದಿ ಪಾಡ್ಯ ಎಂದರೆ ಬ್ರಹ್ಮದೇವನು ಬ್ರಹ್ಮಾಂಡದ ನಿರ್ಮಿತಿಯನ್ನು ಮಾಡಿದ ದಿನ. ಬ್ರಹ್ಮದೇವನ ಹೆಸರಿನಿಂದಲೇ ಬ್ರಹ್ಮಾಂಡ ಹೆಸರು ಬಂದಿದೆ. ಬ್ರಹ್ಮತತ್ತ್ವವು ಸತ್ಯಯುಗದಲ್ಲಿ ಮೊದಲ ಬಾರಿಗೆ ಯುಗಾದಿ ಪಾಡ್ಯದ ದಿನ ನಿರ್ಗುಣದಿಂದ ನಿರ್ಗುಣ-ಸಗುಣ ಮಟ್ಟಕ್ಕೆ ಬಂದು ಪೃಥ್ವಿಯಲ್ಲಿ ಕಾರ್ಯನಿರತವಾಯಿತು. ಸತ್ಯ ಮತ್ತು ತ್ರೇತಾಯುಗಗಳಲ್ಲಿ ಬ್ರಹ್ಮದೇವನ ಬಗ್ಗೆ ಅನೇಕ ಋಷಿಮುನಿಗಳಿಗೆ ಮತ್ತು ದಾನವರಿಗೆ ತಿಳಿದಿತ್ತು. ದ್ವಾಪರಾಯುಗದ ನಂತರ ಬ್ರಹ್ಮದೇವನ ಮಹತ್ವವು ಕ್ರಮೇಣ ಕಡಿಮೆಯಾಯಿತು. ಕಲಿಯುಗದಲ್ಲಿರುವ ಜೀವಗಳಿಗೆ ಸೃಷ್ಟಿಕರ್ತ ಬ್ರಹ್ಮದೇವನ ಬಗ್ಗೆ ಸ್ವಲ್ಪವೂ ಮಾಹಿತಿಯಿಲ್ಲ. ಬ್ರಹ್ಮತತ್ತ್ವದ ಲಾಭವಾಗಬೇಕಾದರೆ ಜೀವಗಳಲ್ಲಿ ಶೇ.40ರಷ್ಟು ಭಾವವಿರಬೇಕು. ಜೀವಗಳಲ್ಲಿ ಭಾವವಿದ್ದರೆ ಮಾತ್ರ ಅವರಿಗೆ ಪ್ರತಿಯೊಂದು ಹಬ್ಬ ಮತ್ತು ಈಶ್ವರನಿಂದ ಆಯಾಯ ಸಮಯದಲ್ಲಿ ಹರಡುವ ಜ್ಞಾನಲಹರಿ, ಶಕ್ತಿ, ಚೈತನ್ಯ, ಸತ್ತ ್ವಲಹರಿ ಮತ್ತು ವಿಶಿಷ್ಟ ದೇವತೆಗಳ ತತ್ತ್ವಲಹರಿಗಳ ಸಂಪೂರ್ಣ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

yugadi-1]

ಯುಗಾದಿ ಹಬ್ಬ ಆಚರಿಸುವುದರ ಮಹತ್ವ: ಕ್ರಿಸ್ತಶಕವು ಜ.1 ರಿಂದ, ಆರ್ಥಿಕ ವರ್ಷವು ಏ.1 ರಿಂದ, ಹಿಂದೂ ವರ್ಷವು ಚೈತ್ರ ಶುದ್ಧ ಪಾಡ್ಯದಿಂದ, ವ್ಯಾಪಾರೀ ವರ್ಷವು ಕಾರ್ತಿಕ ಶುದ್ಧ ಪಾಡ್ಯದಿಂದ, ಶೈಕ್ಷಣಿಕ ವರ್ಷವು ಜೂನ್‍ನಿಂದ ಪ್ರಾರಂಭವಾಗುತ್ತದೆ. ಈ ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯವಾದುದೆಂದರೆ ಚೈತ್ರಶುದ್ಧ ಪಾಡ್ಯ. ಜ.1ರಂದು ವರ್ಷಾರಂಭ ಏಕೆ ಮಾಡಬೇಕು ಎನ್ನುವುದಕ್ಕೆ ಯಾವ ಕಾರಣವೂ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಚೈತ್ರ ಶುದ್ಧ ಪಾಡ್ಯದಂದು ವರ್ಷಾರಂಭ ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.  ನೈಸರ್ಗಿಕ ಕಾರಣಗಳು: ಪಾಡ್ಯದ ಸಮಯದಲ್ಲಿ ಸೂರ್ಯನು ವಸಂತ ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ ಮಕರ ಮತ್ತು ಕರ್ಕಾಟಕ ವೃತ್ತಗಳು ಪರಸ್ಪರ ಛೇದಿಸುವಂತಹ ಬಿಂದು) ಮತ್ತು ವಸಂತ ಋತು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ಕುಸುಮಾಕರಿ ವಸಂತ ಋತುವು ನನ್ನ ವಿಶೇಷ ಶಕ್ತಿಯಾಗಿದೆ ಎಂದು ಭಗವಂತನು ಶ್ರೀ ಮದ್ಭಗವದ್ಗೀತೆಯಲ್ಲಿ (10:35) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದದಾಯಕ ಹವಾಗುಣವಿರುತ್ತದೆ. ಶಿಶಿರ ಋತುವಿನಲ್ಲಿ ಮರಗಳ ಎಲೆಗಳು ಉದುರಿದರೆ, ಪಾಡ್ಯದ ಹೊತ್ತಿಗೆ ಮರಗಳಿಗೆ ಹೊಸ ಚಿಗುರು ಬರುತ್ತಿರುವುದರಿಂದ ವೃಕ್ಷ-ಬಳ್ಳಿಗಳು ಚೈತನ್ಯಮಯವಾಗಿ ಕಾಣುತ್ತವೆ.

ಐತಿಹಾಸಿಕ ಕಾರಣಗಳು: ರಾಮನು ಈ ದಿನವೇ ವಾಲಿಯನ್ನು ವಧಿಸಿದನು. ದುಷ್ಟ ಪ್ರವೃತ್ತಿಯುಳ್ಳ ರಾಕ್ಷಸರು ಮತ್ತು ರಾವಣನನ್ನು ವಧಿಸಿ, ಶ್ರೀ ರಾಮಚಂದ್ರನು ಅಯೋಧ್ಯೆಗೆ ಈ ದಿನದಂದೇ ಹಿಂತಿರುಗಿದ್ದನು. ಶಕರು, ಹೂಣರನ್ನು ಸೋಲಿಸಿ ವಿಜಯ ಸಂಪಾದಿಸಿದ್ದೂ ಇದೇ ದಿನವಾಗಿದೆ. ಈ ದಿನದಿಂದಲೇ ಶಾಲಿವಾಹನ ಶಕೆ ಪ್ರಾರಂಭವಾಯಿತು. ಏಕೆಂದರೆ, ಶಾಲಿವಾಹನನು ಈ ದಿನದಂದೇ ಶತ್ರುಗಳನ್ನು ಜಯಿಸಿದನು.

ಆಧ್ಯಾತ್ಮಿಕ ಕಾರಣಗಳು: ಮೂರೂವರೆ ಮುಹೂರ್ತಗಳಲ್ಲಿ ಒಂದು ಯುಗಾದಿ ಪಾಡ್ಯ, ಅಕ್ಷಯ ತದಿಗೆ ಮತ್ತು ದಸರಾ (ವಿಜಯ ದಶಮಿ) ಇವು ಪ್ರತ್ಯೇಕವಾಗಿ ಒಂದೊಂದು ಮತ್ತು ಕಾರ್ತಿಕ ಶುದ್ಧ ಪ್ರತಿಪದೆಯು ಅರ್ಧ ಹೀಗೆ ಮೂರೂವರೆ ಮುಹೂರ್ತಗಳಿವೆ. ಈ ದಿನಗಳಂದು ಮುಹೂರ್ತ ನೋಡುವ ಅವಶ್ಯಕತೆ ಇಲ್ಲ. ಈ ದಿನಗಳ ಪ್ರತಿ ಘಳಿಗೆಯೂ ಶುಭ ಮುಹೂರ್ತವೇ ಆಗಿರುತ್ತದೆ.

ಯುಗಾದಿ ಹಬ್ಬದ ಯೋಗ್ಯ ಪದ್ಧತಿ
ಅಭ್ಯಂಗ ಸ್ನಾನ: ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗ ಸ್ನಾನ ಮಾಡಬೇಕು. ದೇಹಕ್ಕೆ ಎಣ್ಣೆ ಹಚ್ಚಿ ಅದನ್ನು ತಿಕ್ಕಿ ತೀಡಿ ಚರ್ಮದಲ್ಲಿ ಸೇರುವಂತೆ ಮಾಡಿ, ನಂತರ ಬಿಸಿನೀರಿನಿಂದ ಸ್ನಾನ ಮಾಡುವುದನ್ನು ಅಭ್ಯಂಗ ಸ್ನಾನ ಎನ್ನುತ್ತಾರೆ. ಸ್ನಾನದಿಂದ ರಜ-ತಮ ಗುಣಗಳು ಒಂದು ಲಕ್ಷಾಂಶದಷ್ಟು ಕಡಿಮೆಯಾಗಿ ಅಷ್ಟೇ ಪ್ರಮಾಣದಲ್ಲಿ ಸತ್ತ್ವಗುಣವು ಹೆಚ್ಚಾಗುತ್ತದೆ. ಈ ಪ್ರಭಾವವು ನಿತ್ಯದ ಸ್ನಾನದಲ್ಲಿ ಮೂರು ಗಂಟೆಗಳ ಕಾಲ ಉಳಿದರೆ, ಅಭ್ಯಂಗ ಸ್ನಾನದ ಪ್ರಭಾವವು ನಾಲ್ಕರಿಂದ ಐದು ಗಂಟೆಗಳ ಕಾಲ ಉಳಿಯುತ್ತದೆ. ಚರ್ಮಕ್ಕೆ ಯಾವಾಗಲೂ ಸ್ನಿಗ್ಧತೆ ಇರಬೇಕೆಂದು ಎಣ್ಣೆ ಹಚ್ಚುತ್ತಾರೆ. ಶರೀರಕ್ಕೆ ಸುಖದಾಯಕ ಮತ್ತು ಮಂಗಳಕರವೆಂದು ಬಿಸಿನೀರಿನ ಸ್ನಾನವನ್ನು ಹೇಳಲಾಗಿದೆ. ಎಣ್ಣೆ ಹಚ್ಚಿದ ನಂತರ ಸ್ನಾನ ಮಾಡುವುದರಿಂದ ಚರ್ಮ ಮತ್ತು ಕೂದಲಿಗೆ ಬೇಕಾದಷ್ಟೇ ಎಣ್ಣೆ ಉಳಿಯುತ್ತದೆ. ಆದುದರಿಂದ ಸ್ನಾನ ಮಾಡುವುದಕ್ಕಿಂತ ಮೊದಲು ಎಣ್ಣೆಯನ್ನು ಹಚ್ಚಬೇಕು. (ಸ್ನಾನದ ನಂತರ ಎಣ್ಣೆ ಹಚ್ಚುವುದು ಯೋಗ್ಯವಲ್ಲ)

ದೇಶಕಾಲ ಕಥನ: ಅಭ್ಯಂಗ ಸ್ನಾನ ಮಾಡುವಾಗ ದೇಶ ಕಾಲ ಕಥನ ಮಾಡಬೇಕು. ದೇಶಕಾಲ ಕಥನ ಮಾಡುವ ಭಾರತೀಯರ ಪದ್ಧತಿಯೂ ವೈಶಿಷ್ಟ ್ಯಪೂರ್ಣವಾಗಿದೆ. ಬ್ರಹ್ಮದೇವನ ಜನನವಾದಾಗಿನಿಂದ ಇಲ್ಲಿಯವರೆಗೂ ಬ್ರಹ್ಮದೇವನ ಎಷ್ಟು ವರ್ಷಗಳಾದವು, ಯಾವ ವರ್ಷದಲ್ಲಿ ಯಾವ ಮತ್ತು ಎಷ್ಟನೆಯ ಮನ್ವಂತರವು ನಡೆದಿದೆ, ಈ ಮನ್ವಂತರದಲ್ಲಿನ ಎಷ್ಟನೆ ಮಹಾಯುಗ ಮತ್ತು ಅದರಲ್ಲಿ ಯಾವ ಉಪಯುಗ ನಡೆದಿದೆ, ಇವೆಲ್ಲವುಗಳ ಉಲ್ಲೇಖವು ದೇಶಕಾಲ ಕಥನದಲ್ಲಿ ಬರುತ್ತದೆ. ಇದರಿಂದ ಎಷ್ಟು ಮಹತ್ತರವಾದ ಕಾಲವು ಗತಿಸಿದೆ ಮತ್ತು ಉಳಿದ ಕಾಲವು ಎಷ್ಟು ದೊಡ್ಡದಿದೆ ಎನ್ನುವುದರ ಕಲ್ಪನೆ ಬರುತ್ತದೆ. ನಾನು ಬಹಳ ದೊಡ್ಡವನಾಗಿದ್ದೇನೆ ಎಂದು ಪ್ರತಿಯೊಬ್ಬನಿಗೂ ಅನಿಸುತ್ತಿರುತ್ತದೆ. ಆದರೆ, ವಿಶ್ವದ ಬೃಹತ್ ಕಾಲವನ್ನು ಮನಗಂಡಾಗ ನಾವೆಷ್ಟು ಚಿಕ್ಕವರು ಮತ್ತು ಎಷ್ಟು ಸಣ್ಣವರಾಗಿದ್ದೇವೆ ಎನ್ನುವುದರ ಅರಿವಾಗುತ್ತದೆ. ಇದರ ಒಂದು ಲಾಭವೆಂದರೆ ಮನುಷ್ಯನ ಅಹಂಭಾವವು ಕಡಿಮೆಯಾಗುತ್ತದೆ. ವರ್ಷದಲ್ಲಿ ಮುಂದಿನ ಐದು ದಿನಗಳಂದು ಹೀಗೆಯೇ ಅಭ್ಯಂಗಸ್ನಾನ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
1. ಸಂವತ್ಸರಾರಂಭ
2. ವಸಂತೋತ್ಸವದ ಮೊದಲನೆಯ ದಿನ ಅಂದರೆ ಫಾಲ್ಗುಣ ಬಹುಳ ಪ್ರತಿಪದೆ
3. ದೀಪಾವಳಿಯ ಮೂರು ದಿನಗಳು ಅಂದರೆ ಆಶ್ವಯುಜ ಬಹುಳ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪ್ರತಿಪದೆ

ತೋರಣವನ್ನು ಕಟ್ಟುವುದು: ಸ್ನಾನ ವಾದ ನಂತರ ಮಾವಿನ ತೋರಣ ತಯಾರಿಸಿ ಕೆಂಪು ಹೂವುಗಳೊಂದಿಗೆ ಎಲ್ಲ ಬಾಗಿಲುಗಳಿಗೆ ಕಟ್ಟಬೇಕು. (ಕೆಂಪು ಬಣ್ಣವು ಶುಭದಾಯಕವಾಗಿದೆ)

ಪೂಜೆ : ಮೊದಲು ನಿತ್ಯಕರ್ಮ ಪೂಜೆ ಮಾಡಬೇಕು. ಶಾಂತಿಯ ಆರಂಭದಲ್ಲಿ ಬ್ರಹ್ಮದೇವನ ಪೂಜೆ ಮಾಡಬೇಕು. ಏಕೆಂದರೆ, ಬ್ರಹ್ಮನು ಸೃಷ್ಟಿಯನ್ನು ಈ ದಿನವೇ ನಿರ್ಮಿಸಿದನು. ಪೂಜೆಯಲ್ಲಿ ಅವನಿಗೆ ದವನ ಅರ್ಪಿಸಬೇಕು. ಆನಂತರ ಹೋಮ-ಹವನ ಮತ್ತು ಬ್ರಾಹ್ಮಣರಿಗೆ ಸಂತರ್ಪಣೆ ನೀಡಬೇಕು. ತರುವಾಯ ಅನಂತ ರೂಪಗಳಲ್ಲಿ ಅವತರಿಸುವ ವಿಷ್ಣುವಿನ ಪೂಜೆ ಮಾಡಿ ನಮಸ್ತೇ ಬ್ರಹ್ಮರೂಪಾಯ ವಿಷ್ಣವೇ ನಮಃ | ಈ ಮಂತ್ರವನ್ನು ಹೇಳಿ ನಮಸ್ಕರಿಸಬೇಕು.

ಬ್ರಹ್ಮಧ್ವಜವನ್ನು ನಿಲ್ಲಿಸುವುದು: ರಾವಣ ವಧೆ ನಂತರ ಅಯೋಧ್ಯೆಗೆ ಮರಳುವ ರಾಮನ ವಿಜಯದ ಮತ್ತು ಆನಂದದ ಪ್ರತೀಕವೆಂದು ಮನೆಮನೆಗಳಲ್ಲಿ ಬ್ರಹ್ಮಧ್ವಜವನ್ನು ಏರಿಸುತ್ತಾರೆ. ವಿಜಯದ ಪ್ರತೀಕವು ಉನ್ನತವಾಗಿರುತ್ತದೆ. ಆದುದರಿಂದ ಬ್ರಹ್ಮಧ್ವಜವನ್ನು ಎತ್ತರದಲ್ಲಿ ಇರಿಸುತ್ತಾರೆ. ದೊಡ್ಡ ಕೋಲಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಖಣವನ್ನು ಕಟ್ಟುತ್ತಾರೆ. ಅದರ ಮೇಲೆ ಸಕ್ಕರೆ ಗಂಟು, ಬೇವಿನ ಚಿಗುರೆಲೆ, ಮಾವಿನ ಎಲೆ ಮತ್ತು ಕೆಂಪು ಹೂಗಳ ಹಾರ ಕಟ್ಟಿ ಮೇಲೆ ಬೆಳ್ಳಿ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜ ನಿಲ್ಲಿಸುತ್ತಾರೆ. ಅದರ ಮುಂದೆ ಸುಂದರವಾದ ರಂಗೋಲಿ ಹಾಕುತ್ತಾರೆ.  ಇದಕ್ಕೆ ಬ್ರಹ್ಮಧ್ವಜಾಯ ನಮಃ ಎಂದು ಹೇಳಿ ಸಂಕಲ್ಪಪೂರ್ವಕವಾಗಿ ಪೂಜೆ ಮಾಡಬೇಕು. ಬ್ರಹ್ಮದೇವನು ಈ ದಿನ ಸೃಷ್ಟಿಯನ್ನು ನಿರ್ಮಿಸಿದ ಕಾರಣ ಧರ್ಮಶಾಸ್ತ್ರದಲ್ಲಿ ಈ ಧ್ವಜವನ್ನು ಬ್ರಹ್ಮಧ್ವಜ ಎಂದು ಕರೆಯಲಾಗಿದೆ. ಬ್ರಹ್ಮಧ್ವಜದ ಮುಖಾಂತರ ವಾತಾವರಣ ದಲ್ಲಿನ ಪ್ರಜಾಪತಿ-ಸಂಯುಕ್ತ ಲಹರಿಗಳು ಈ ಕಲಶದ ಮಾಧ್ಯಮದಿಂದ ಮನೆಯಲ್ಲಿ ಪ್ರವೇಶಿಸುತ್ತವೆ. ಎರಡನೆ ದಿನದಿಂದ ಈ ಕಲಶವನ್ನು ನೀರು ಕುಡಿಯಲು ಉಪಯೋಗಿಸಬೇಕು; ಹೀಗಾಗಿ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿರುವ ಕಲಶವು ಕುಡಿಯುವ ನೀರಿನ ಮೇಲೆ ಅಂತಹ ಸಂಸ್ಕಾರಗಳನ್ನೇ ಮಾಡುತ್ತವೆ. ಆದುದರಿಂದ ನಮಗೆ ವರ್ಷವಿಡೀ ಪ್ರಜಾಪತಿ ಲಹರಿಗಳು ಪ್ರಾಪ್ತವಾಗುತ್ತವೆ. ಸೂರ್ಯಾಸ್ತದ ಸಮಯದಲ್ಲಿ ಬೆಲ್ಲದ ನೈವೇದ್ಯ ತೋರಿಸಿ ಧ್ವಜ ಕೆಳಗಿಳಿಸುವುದು ರೂಢಿ.

ಪಂಚಾಂಗ ಶ್ರವಣ : ಜ್ಯೋತಿಷಿಯ ಪೂಜೆ ಮಾಡಿ ಅವರಿಂದ ಅಥವಾ ಉಪಾಧ್ಯಾಯರಿಂದ ನೂತನ ವರ್ಷದ ಪಂಚಾಂಗದ ಅರ್ಥಾತ್ ವರ್ಷಫಲದ ಶ್ರವಣ ಮಾಡುತ್ತಾರೆ. ಈ ಪಂಚಾಂಗ ಶ್ರವಣದ ಫಲವನ್ನು ಹೀಗೆ ಹೇಳಲಾಗಿದೆ- ತಿಥಿಯ ಶ್ರವಣದಿಂದ ಲಕ್ಷ್ಮಿಯು ಲಭಿಸುತ್ತಾಳೆ, ವಾರದ ಶ್ರವಣದಿಂದ ಆಯುಷ್ಯ ವೃದ್ಧಿಯಾಗುತ್ತದೆ, ನಕ್ಷತ್ರ ಶ್ರವಣದಿಂದ ಪಾಪನಾಶವಾಗುತ್ತದೆ, ಯೋಗ ಶ್ರವಣದಿಂದ ರೋಗ ನಿವಾರಣೆಯಾಗುತ್ತದೆ, ಕರಣ ಶ್ರವಣದಿಂದ ಇಚ್ಛಿಸಿದ ಕಾರ್ಯ ಸಿದ್ಧಿಯಾಗುತ್ತದೆ. ಇವು ಪಂಚಾಂಗ ಶ್ರವಣದ ಉತ್ತಮ ಫಲಗಳಾಗಿವೆ. ಇದರ ನಿತ್ಯ ಶ್ರವಣದಿಂದ ಗಂಗಾಸ್ನಾನದ ಫಲವು ಲಭಿಸುತ್ತದೆ.

ಬೇವಿನ ಪ್ರಸಾದ : ಪ್ರಜಾಪತಿ ಲಹರಿಗಳನ್ನು ಗ್ರಹಿಸುವ ಕ್ಷಮತೆಯು ಇತರ ಯಾವುದೇ ವಸ್ತುವಿಗಿಂತಲೂ ಬೇವಿನಲ್ಲಿ ಹೆಚ್ಚಿರುವುದರಿಂದ ಈ ದಿನ ಬೇವಿನ ಪ್ರಸಾದ ಸೇವಿಸುತ್ತಾರೆ. ಮಂತ್ರದ ಆವರ್ತನಗಳನ್ನು ಮಾಡುತ್ತಾ ಬೇವಿನ ಹೂವು, ಚಿಗುರೆಲೆಗಳು, ನೆನೆಸಿದ ಕಡಲೆಕಾಳು ಅಥವಾ ಬೇಳೆ, ಜೇನು, ಜೀರಿಗೆ ಮತ್ತು ಸ್ವಲ್ಪ ಇಂಗು ಇವೆಲ್ಲವನ್ನು ಬೆರೆಸಿ ಪ್ರಸಾದ ತಯಾರಿಸಿ ಎಲ್ಲರಿಗೂ ಹಂಚಬೇಕು.

ಧ್ವಜದ ಪೂಜೆ ಮಾಡುತ್ತಿರುವಾಗ ಮಾಡಬೇಕಾದ ಪ್ರಾರ್ಥನೆ : ಹೇ ಬ್ರಹ್ಮದೇವ, ಹೇ ವಿಷ್ಣು, ಈ ಧ್ವಜದ ಮಾಧ್ಯಮದಿಂದ ವಾತಾವರಣದಲ್ಲಿ ವಿದ್ಯಮಾನವಾಗಿರುವ ಪ್ರಜಾಪತಿ, ಸೂರ್ಯ ಮತ್ತು ಸಾತ್ತ್ವಿಕ ಲಹರಿಗಳನ್ನು ನಾವು ಗ್ರಹಿಸುವಂತಾಗಲಿ. ಅದರಲ್ಲಿ ಸಿಗುವ ಶಕ್ತಿಯ ಚೈತನ್ಯವು ಸತತ ವಾಗಿರಲಿ. ನನಗೆ ಪ್ರಾಪ್ತವಾದ ಶಕ್ತಿಯು ಸಾಧನೆಗಾಗಿ ಉಪಯೋಗಿಸಲ್ಪಡಲಿ ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ, ಎಂದು ಬೇಡಿಕೊಳ್ಳಬೇಕು.

ಧ್ವಜಕೆಳಗೆ ಇಳಿಸುವಾಗ ಮಾಡಬೇಕಾದ ಪ್ರಾರ್ಥನೆ: ಹೇ ಬ್ರಹ್ಮದೇವ, ಹೇ ವಿಷ್ಣು, ಇಂದು ದಿನವಿಡೀ ಈ ಧ್ವಜದಲ್ಲಿ ಸಂಗ್ರಹವಾದ ಶಕ್ತಿಯು ನನಗೆ ಸಿಗಲಿ. ಆ ಶಕ್ತಿಯು ರಾಷ್ಟ್ರ ಮತ್ತು ಧರ್ಮಕಾರ್ಯಕ್ಕೆ ಉಪಯೋಗವಾಗಲಿ ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.  ಧರ್ಮಧ್ವಜದಂತೆ ತಾನು ಸಂಪಾದಿಸಿದ್ದನ್ನು ಇತರರಿಗಾಗಿ ಖರ್ಚು ಮಾಡಿರಿ..!

ಯಾವ ರೀತಿ ಧರ್ಮಧ್ವಜವು ಬ್ರಹ್ಮಾಂಡ ದಲ್ಲಿನ ಪ್ರಜಾಪತಿ ಲಹರಿ, ಈಶ್ವರೀ ಶಕ್ತಿ ಮತ್ತು ಸಾತ್ತ್ವಿಕತೆಯನ್ನು ಸ್ವತಃ ಗ್ರಹಿಸಿ ಅದನ್ನು ಇತರರ ಲಾಭಕ್ಕಾಗಿ ಪ್ರಕ್ಷೇಪಿಸುತ್ತದೆಯೋ ಅದೇ ರೀತಿ ಸಾಧಕರು ಸ್ವತಃ ಸಾಧನೆಯನ್ನು ಮಾಡಿ ಆನಂದವನ್ನು ಪಡೆದುಕೊಳ್ಳಬೇಕು ಮತ್ತು ಸಮಾಜವೂ ಆ ಆನಂದವನ್ನು ಪಡೆಯಲು ಸಮಾಜದಲ್ಲಿ ಸಾಧನೆಯ ಪ್ರಸಾರವನ್ನು ಮಾಡಬೇಕು. ಅಂದರೆ ಸಾಧಕರು ವ್ಯಷ್ಟಿ ಸಾಧನೆಯನ್ನು ಮಾಡುತ್ತಾ ಸಮಷ್ಟಿ ಸಾಧನೆಗಾಗಿ ಪ್ರಯತ್ನಿಸಬೇಕು.

-ಮೋಹನ ಗೌಡ
ಹಿಂದೂ ಜನಜಾಗೃತಿ ಸಮಿತಿ, ಬೆಂಗಳೂರು

Facebook Comments

Sri Raghav

Admin