ಯೋಗಿಗೆ ಯಶಸ್ಸು ತಂದುಕೊಡುವುದೇ ‘ಕೋಲಾರ 1990’

ಈ ಸುದ್ದಿಯನ್ನು ಶೇರ್ ಮಾಡಿ

Kolara-Movie
ಲೂಸ್‍ಮಾದ ಖ್ಯಾತಿಯ ನಟ ಯೋಗಿ ಮತ್ತೆ ಲಾಂಗ್ ಹಿಡಿದು ಝಳಪಿಸಲು ಹೊರಟಿದ್ದಾರೆ. ಇತ್ತೀಚೆಗೆ ಆ್ಯಕ್ಷನ್ ಸಿನಿಮಾಗಳಿಂದ ಹೊರಬರುವ ಸೂಚನೆ ನೀಡಿದ್ದ ಯೋಗಿ ಮತ್ತೆ ರೌದ್ರಾವತಾರದಲ್ಲಿ ತೆರೆ ಮೇಲೆ ಬಂದಿದ್ದಾರೆ. ಇದು ಲೂಸ್ ಮಾದ ಯೋಗಿಯ ಹೊಸ ವರಸೆ,  ಕೋಲಾರ 1990 ಎಂಬ ಶೀರ್ಷಿಕೆ ಹೊಂದಿರುವ, ನಟ ಯೋಗಿ ನಾಯಕನಾಗಿ ಅಭಿನಯಿಸಿರುವ ಈ ಚಿತ್ರ ಇನ್ನೇನು ತೆರೆಗೆ ಬರಲು ಸಿದ್ದತೆ ನಡೆಸುತ್ತಿದೆ. ಸುಮಾರು ಎರಡು ವರ್ಷಗಳ ಹಿಂದೆಯೇ ಸೆಟ್ಟೇರಿದ್ದ ಈ ಚಿತ್ರ ಇದೀಗ ಅಂತಿಮವಾಗಿ ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ತೆರೆಗೆ ಬರುವ ಸನ್ನಾಹದಲ್ಲಿದೆ. ಇದರ ಪ್ರಚಾರದ ಮೊದಲ ಭಾಗವಾಗಿ ಕೋಲಾರ ಚಿತ್ರದ ಹಾಡುಗಳ ಧ್ವನಿಸುರುಳಿಗಳ ಬಿಡುಗಡೆ ಸಮಾರಂಭವು ಇತ್ತೀಚೆಗೆ ಖಾಸಗಿ ಹೊಟೇಲೊಂದರ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು.

23

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಕೋಲಾರ ಚಿತ್ರದ ಹಾಡುಗಳ ಧ್ವನಿ ಸುರುಳಿಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಹಿರಿಯ ಪೋಲೀಸ್ ಅಧಿಕಾರಿ ಶಿವಕುಮಾರ್ ಮೊದಲಾದವರು ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಕೋಲಾರ ಚಿತ್ರಕ್ಕೆ ಈ ಹಿಂದೆ ಸ್ಲಂ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಆರ್ಯ ಎಂ. ಮಹೇಶ್ ಅವರು ಕತೆ, ಚಿತ್ರಕತೆ ರಚಿಸುವುದರೊಂದಿಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಈ ಚಿತ್ರಕ್ಕೆ ಆರ್.ಲಕ್ಷ್ಮೀನಾರಾಯಣಗೌಡ ಮತ್ತು ರಮೇಶ್.ಆರ್. ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ.

ಮೇಲ್ನೋಟಕ್ಕೆ ಕೋಲಾರ ಮಚ್ಚು-ಲಾಂಗಿನ ನೆರಳಲ್ಲಿ ನಡೆಯುವ ರೌಡಿಸಂ ಕಥೆಯೆನಿಸಿದರೂ, 1990ರ ದಶಕದಲ್ಲಿ ಕೋಲಾರ ಜಿಲ್ಲೆಯಲ್ಲಿ ನಡೆದ ಒಂದು ನೈಜ ಕತೆಯನ್ನು ಮೂಲವಾಗಿಟ್ಟುಕೊಂಡು ಈ ಚಿತ್ರದ ಕಥಾ ಹಂದರವನ್ನು ಬರೆದು ಸಿನಿಮಾ ಮಾಡಲಾಗಿದೆ ಎಂಬುದು ಚಿತ್ರತಂಡ ನೀಡುವ ವಿವರಣೆ. ಈ ಚಿತ್ರದಲ್ಲಿ ನಾಯಕಿಯಾಗಿ ನಯನಾ ಅಭಿನಯಿಸಿದ್ದಾರೆ.ಕೋಲಾರ ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದ್ದು, ತಮಿಳು ನಟ ಸಂಪತ್‍ಕುಮಾರ್, ಕನ್ನಡದ ಖಳನಟ ಶೋಭ್‍ರಾಜ್, ಮೈಕಲ್ ಮಧು, ತಿಲಕ್, ಅಕ್ಷಯ್, ರಾಜ್, ಕೋಡಿಹಳ್ಳಿ ಚಂದ್ರಶೇಖರ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜನ್ ಜನಿ ಜನಾರ್ಧನ್‍ನಂತಹ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾದ ಬೆನ್ನ ಹಿಂದೆಯೆ ಯೋಗಿ ಮತ್ತೆ ಮಚ್ಚು ಹಿಡಿದು ತೆರೆಮೇಲೆ ಅಬ್ಬರಿಸುವುದಂತೂ ಬಹುತೇಕ ಪಕ್ಕಾ ಆದಂತಿದೆ. ಅದೇನೆಯಿರಲಿ, ಇತ್ತೀಚೆಗೆ ಯಾಕೋ ಯಾವುದೇ ಸಿನಿಮಾಗಳು ಯೋಗಿಗೆ ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸು ತಂದುಕೊಡುತ್ತಿಲ್ಲ. ಕೋಲಾರ ಚಿತ್ರದ ಮೂಲಕವಾದರೂ ಲೂಸ್ ಮಾದ ಯೋಗಿ ಮರಳಿ ತನ್ನ ಅಸ್ಥಿತ್ವ ಕಂಡುಕೊಳ್ಳುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin