ರಂಗೇರಿದ ಉಪಚುನಾವಣೆ ಕಣ : ಸುಡುವ ಬಿಸಿಲನ್ನೂ ಲೆಕ್ಕಿಸದೆ ಮತಬೇಟೆ

ಈ ಸುದ್ದಿಯನ್ನು ಶೇರ್ ಮಾಡಿ

Nanjanaguru---Gundlupete-el

ಬೆಂಗಳೂರು, ಮಾ.19- ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ನಂಜನಗೂಡು-ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆ ಕದನ ರಂಗೇರ ತೊಡಗಿದೆ.  ಬೇಸಿಗೆಯ ಬಿಸಿಲಿನ ತಾಪದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷಗಳ ನಾಯಕರು ಬೆವರಿಳಿಸುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಇದೆ.  ಜೆಡಿಎಸ್ ಪಕ್ಷ ತಟಸ್ಥವಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ.

ಇನ್ನು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ. ಆಗಲೇ ಹಳ್ಳಿ ಹಳ್ಳಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಅಬ್ಬರ ಪ್ರಚಾರ ಶುರುವಿಟ್ಟುಕೊಂಡಿದ್ದಾರೆ. ನಾಯಕರು ರೋಡ್‍ಶೋಗಳಲ್ಲಿ, ಸಭೆಗಳಲ್ಲಿ ಬ್ಯುಸಿಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೈಸೂರಿನ ಪ್ರತಿಷ್ಠಿತ ಜೆಎಸ್‍ಎಸ್ ಮಠಕ್ಕೆ ಭೇಟಿ ನೀಡಿ ತಮ್ಮ ಅಭ್ಯರ್ಥಿಗಳಿಗೆ ಶ್ರೀಗಳಿಗೆ ಆಶೀರ್ವಾದ ಮಾಡಿಸಿದ್ದಾರೆ. ಬಿಜೆಪಿಯ ವಿ.ಸೋಮಣ್ಣ ಸೇರಿದಂತೆ ಹಲವು ಮುಖಂಡರು ಗುಂಡ್ಲುಪೇಟೆ -ನಂಜನಗೂಡಿನಲ್ಲಿ ಠಿಕಾಣಿ ಹೂಡಿದ್ದಾರೆ. ಯಡಿಯೂರಪ್ಪ ಪ್ರತಿದಿನ ಪ್ರಚಾರದ ಕಾರ್ಯದಲ್ಲಿ ತೊಡಗಿದ್ದಾರೆ.

ನಾಳೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಶಾಸಕರು, ಸಚಿವರೊಂದಿಗೆ ಅಲ್ಲೇ ಬೀಡು ಬಿಟ್ಟು ಎರಡೂ ಕ್ಷೇತ್ರಗಳ ಉಪಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.  ಮುನಿದವರನ್ನು, ಅಸಮಾಧಾನಗೊಂಡವರನ್ನು ಪಕ್ಷಕ್ಕೆ ಕರೆತರುವ ಯತ್ನವನ್ನು ಎರಡೂ ಪಕ್ಷಗಳು ಮಾಡುತ್ತಿವೆ. ಜಾತಿವಾರು ಲೆಕ್ಕಾಚಾರ ಹಾಕಿ ಮತ ಪಡೆಯುವ ತಂತ್ರ ನಡೆಸುತ್ತಿವೆ.  ಮಠ, ಮಂದಿರ, ಮಸೀದಿಗಳಿಗೆ ಭೇಟಿ, ಕಲ್ಯಾಣ ಮಂಟಪಗಳಲ್ಲಿ ಸಭೆ ನಡೆಸುವುದು, ಜಾತಿವಾರು ಮುಖಂಡರೊಂದಿಗೆ ಚರ್ಚೆ ನಡೆಸುವುದು ಸೇರಿದಂತೆ ಮತದಾರರನ್ನು ಓಲೈಸುವ ಕಸರತ್ತು ಎರಡೂ ಕ್ಷೇತ್ರಗಳಲ್ಲಿ ಜೋರಾಗಿಯೇ ಸಾಗಿದೆ.
ನಂಜನಗೂಡು ಕ್ಷೇತ್ರದಲ್ಲಿ ವಿ.ಶ್ರೀನಿವಾಸ್‍ಪ್ರಸಾದ್ ಬಿಜೆಪಿ ಅಭ್ಯರ್ಥಿಯಾಗಿದ್ದು, ಕಳಲೆ ಕೇಶವಮೂರ್ತಿ ಕಾಂಗ್ರೆಸ್‍ನ ಅಭ್ಯರ್ಥಿಯಾಗಿದ್ದಾರೆ.

ಮೇಲ್ನೋಟಕ್ಕೆ ವಿ.ಶ್ರೀನಿವಾಸ್‍ಪ್ರಸಾದ್ -ಸಿದ್ದರಾಮಯ್ಯರ ನಡುವಿನ ಚುನಾವಣೆಯಂತೆ ಕಂಡು ಬಂದರೂ ಕಾಂಗ್ರೆಸ್ ಬಿಜೆಪಿ ನಡುವಿನ ಜಿದ್ದಾಜಿದ್ದಿನ ಬದ್ಧ ಕಣವಾಗಿದೆ.  ಮುಂಬರುವ ವಿಧಾನಸಭಾ ಕ್ಷೇತ್ರಕ್ಕೆ ಈ ಉಪಚುನಾವಣೆಗಳ ಫಲಿತಾಂಶ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಎರಡೂ ಪಕ್ಷಗಳು ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ರಾಜಕೀಯ ಆರೋಪದ ನಡುವೆ, ವೈಯಕ್ತಿಕ ಆರೋಪಗಳು, ಏಕವಚನ ಪ್ರಯೋಗಗಳು ನಡೆಯುತ್ತಿವೆ.
ನಂಜನಗೂಡಿನಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಶ್ರೀನಿವಾಸ್‍ಪ್ರಸಾದ್ ಚುನಾವಣಾ ಕಣಕ್ಕಿಳಿದಿದ್ದರೆ, ಗುಂಡ್ಲುಪೇಟೆ ಕ್ಷೇತ್ರದಲ್ಲಿ ಸಚಿವ ಮಹದೇವಪ್ರಸಾದ್ ಅವರ ಹಠಾತ್ ನಿಧನದಿಂದ ಉಪಚುನಾವಣೆ ಎದುರಾಗಿತ್ತು. ಅನುಕಂಪದ ಅಲೆ ಮತ್ತು ಸ್ವಾಭಿಮಾನದ ನೆಲೆ ಈ ಎರಡೂ ಕ್ಷೇತ್ರಗಳ ಅಂಶವಾಗಿದ್ದು, ಯಾವುದಕ್ಕೆ ಜಯ ಸಿಗುತ್ತದೆ ಕಾದು ನೋಡಬೇಕು.

ಎರಡೂ ಪಕ್ಷಗಳವರು ನಮ್ಮದೇ ಗೆಲುವು ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದರಾದರೂ ಎಲ್ಲಿ ಸೋಲಾಗಿ ಬಿಡುತ್ತದೋ, ಸೋತರೆ ಮುಂದಿನ ಪರಿಣಾಮವೇನೋ ಎಂಬ ಆತಂಕದ ಹಿನ್ನೆಲೆಯಲ್ಲಿ ಗೆಲುವಿಗಾಗಿ ಎಡಬಿಡದೆ ಶ್ರಮಿಸುತ್ತಿದ್ದಾರೆ.  ಉಪಚುನಾವಣೆ ಕಣದ ಪ್ರಚಾರ ಬಿರುಸುಗೊಂಡಿದೆ. ನಾಳೆ ಎರಡೂ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಮೆರವಣಿಗೆ ಮೂಲಕ ತಮ್ಮ ಶಕ್ತಿ ಪ್ರದರ್ಶನವನ್ನೂ ಕೂಡ ಮಾಡುತ್ತಿದ್ದಾರೆ.   ಎಲ್ಲವನ್ನು ನೋಡುತ್ತಿರುವ ಮತದಾರ ಮಾತ್ರ ಮೊಗಂ ಆಗಿದ್ದು, ಏ.9 ರಂದು ಯಾರ ಕೈ ಹಿಡಿಯಲಿದ್ದಾನೆ ಎಂಬುದನ್ನು ಕಾದುನೋಡಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin