ರಂಗೇರಿದ ಉಪ ಚುನಾವಣೆ ಕಣ : ಶ್ರೀನಿವಾಸ ಪ್ರಸಾದ್, ಕಳಲೆ ಕೇಶವಮೂರ್ತಿ ನಾಮಪತ್ರ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Nanjanagud--01

ಬೆಂಗಳೂರು,ಮಾ.20- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಕಣವಾದ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಇಂದು ನಾಮಪತ್ರ ಸಲ್ಲಿಸುವುದರೊಂದಿಗೆ ಚುನಾವಣಾ ಕಣ ರಂಗೇರಿದೆ.   ನಂಜನಗೂಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಪಕ್ಷದ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‍ನ ಹುರಿಯಾಳು ಕಳಲೆ ಕೇಶವಮೂರ್ತಿ ಕೂಡ ನಾಮಪತ್ರ ಸಲ್ಲಿಕೆ ಮಾಡುವುದರೊಂದಿಗೆ ಚುನಾವಣಾ ಕಾವು ಹೆಚ್ಚಿಸಿದರು.

ವಿ.ಶ್ರೀನಿವಾಸ್ ಪ್ರಸಾದ್‍ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ವಿ.ಸೋಮಣ್ಣ , ಸುರೇಶ್‍ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಭಾರೀ ಸಂಖ್ಯೆಯ ಬೆಂಬಲಿಗರು ಸಾಥ್ ನೀಡಿದರು.   ಇತ್ತ ಕಾಂಗ್ರೆಸ್ ಅಭ್ಯರ್ಥಿ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ , ಶಾಸಕರು ಮತ್ತು ಕೈ ಅಭ್ಯರ್ಥಿಗಳು ನಾಮಪತ್ರ   ಸಲ್ಲಿಸುವ ವೇಳೆ ಹಾಜರಿದ್ದರು.  ಎರಡು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರಿಂದ ನಂಜನಗೂಡಿನಲ್ಲಿ ಇಂದು ಚುನಾವಣಾ ಕಾವು ರಂಗೇರಿಯ ತೊಡಗಿತ್ತು. ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಶ್ರೀನಿವಾಸ್ ಪ್ರಸಾದ್ ಇಲ್ಲಿನ ಊಟಿ ರಸ್ತೆಯಲ್ಲಿರುವ ಚಿಂತಾಮಣಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸರಿಯಾಗಿ 12 ಗಂಟೆಗೆ ನಾಮಪತ್ರ ಸಲ್ಲಿಸಿದರು.

ವಿಶೇಷವೆಂದರೆ ಶ್ರೀನಿವಾಸ್ ಪ್ರಸಾದ್ ಪೂಜೆ ಸಲ್ಲಿಸಿದ ದೇವಸ್ಥಾನದಲ್ಲೇ ಕಾಂಗ್ರೆಸ್ ಅಭ್ಯರ್ಥಿ ಕೂಡ ವಿಶೇಷ ಪೂಜೆ ಮಾಡಿ ತದನಂತರ ಭವ್ಯ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.   ಗುಂಡ್ಲುಪೇಟೆಯಲ್ಲೂ ನಾಮಪತ್ರ ಸಲ್ಲಿಕೆ: ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರ ನಿಧನದಿಂದ ತೆರವಾಗಿರುವ ಚಾಮರಾಜನಗರದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಅಧಿಕೃತವಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಸುಡುವ ಬಿಸಿಲನ್ನು ಲೆಕ್ಕಿಸದೆ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಕಾಂಗ್ರೆಸ್‍ನಿಂದ ಎಚ್.ಎಸ್.ಮಹದೇವಪ್ರಸಾದ್ ಅವರ ಪತ್ನಿ ಗೀತಾ ಮಹದೇವಪ್ರಸಾದ್ , ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನ್‍ಕುಮಾರ್ ಇಂದು ಉಮೇದುವಾರಿಕೆ ಮಾಡಿದರು.   ಬೆಳಗ್ಗೆ 11 ಗಂಟೆಗೆ ಸರಿಯಾಗಿ ಪೂಜೆ ಸಲ್ಲಿಸುವುದರ ಮೂಲಕ ಬಿಜೆಪಿ ಅಭ್ಯರ್ಥಿ ಇಲ್ಲಿನ ಡಿ.ದೇವರಾಜ ಅರಸು ಕ್ರೀಡಾಂಗಣದಿಂದ ಪಾದಯಾತ್ರೆ ನಡೆಸಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಮಾಜಿ ಸಚಿವರಾದ ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಮುಖಂಡ ಆರ್.ಕೆ.ಕೃಷ್ಣಮೂರ್ತಿ ಸೇರಿದಂತೆ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಕೂಡ ಬೆಳಗ್ಗೆ 11 ಗಂಟೆಗೆ ಪಾರ್ವತಿ ಬೆಟ್ಟದಲ್ಲಿನ ತಾಯಿ ಪಾರ್ವತಾಂಬೆ ಮತ್ತು ಶ್ರೀ ವಿಜಯನಾರಾಯಣಸ್ವಾಮಿ ದೇವಸ್ಥಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಚಿವ ಎಚ್.ಸಿ.ಮಹದೇವಪ್ಪ , ಶಾಸಕರಾದ ಪುಟ್ಟರಂಗ ಶೆಟ್ಟಿ, ನರೇಂದ್ರ, ಸಂಸದ ಆರ್.ಕೆ.ಧ್ರುವನಾರಾಯಣ ಸೇರಿದಂತೆ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ತೆರಳಿ ಅಪಾರ ಬೆಂಬಲಿಗರೊಂದಿಗೆ ಉಮೇದುವಾರಿಕೆ ಮಾಡಿದರು.
ಉಭಯ ಕ್ಷೇತ್ರಗಳಲ್ಲಿ ಎರಡೂ ಪಕ್ಷದವರು ಶಕ್ತಿ ಪ್ರದರ್ಶನ ನೀಡಿದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿಮಯವಾಗಿದ್ದವು. ಈ ಕ್ಷೇತ್ರಗಳಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು , 13ರಂದು ಮತಗಳ ಎಣಿಕೆ ನಡೆಯಲಿದೆ.

ವಿ.ಶ್ರೀನಿವಾಸ್ ಪ್ರಸಾದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಹಾಗೂ ಎಚ್.ಎಸ್.ಮಹದೇವಪ್ರಸಾದ್ ಹಠಾತ್ ನಿಧನರಾಗಿದ್ದರಿಂದ ಈ ಎರಡೂ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ.   ಶತಾಯಗತಾಯ ಎರಡೂ ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್ ಮತ್ತು ಬಿಜೆಪಿ ಭಾರೀ ರಣತಂತ್ರ ರೂಪಿಸುತ್ತಿದೆ. 2018ರ ವಿಧಾನಸಭೆ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದು ವ್ಯಾಖ್ಯಾನಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin