ರಂಗೇರಿದ ಯುವ ಕಾಂಗ್ರೆಸ್ ಚುನಾವಣಾ ಕಣ, ಅಧ್ಯಕ್ಷ ಸ್ಥಾನದ ಮೇಲೆ 8 ಮಂದಿ ಕಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

Youth-Congress

ಬೆಂಗಳೂರು, ಮೇ 14– ಒಂದೆಡೆ ಕಾಂಗ್ರೆಸ್ ಪಕ್ಷದ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಭರ್ಜರಿ ಲೆಕ್ಕಾಚಾರಗಳು ನಡೆಯುತ್ತಿದ್ದರೆ, ಇತ್ತ ರಾಜ್ಯದಲ್ಲಿ ಇಂದಿನಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಚುನಾವಣೆ ನಡೆಯುತ್ತಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ವಿವಿಧ ಭಾಗಗಳಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ಆರಂಭಗೊಂಡಿದೆ. ಒಟ್ಟು 3,76,000 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.  ಘಟಾನುಘಟಿ ನಾಯಕರ ಮಕ್ಕಳೂ ಸೇರಿದಂತೆ ಒಟ್ಟು 8 ಮಂದಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಚುನಾವಣೆ ಎದುರಿಸುತ್ತಿದ್ದಾರೆ. ಅಮೃತಗೌಡ, ಬಸವನಗೌಡ, ಉಮೇಶ್, ಬೈರೇಗೌಡ, ರಾಜೇಂದ್ರ, ಶಿವಕುಮಾರ್, ಕೆಂಪರಾಜ್, ಪುಷ್ಪಲತಾ, ಸಾಮಿಯ ತಬರೇಜ್ ಕಣದಲ್ಲಿದ್ದಾರೆ.ಇಂದಿನಿಂದ ನಾಲ್ಕು ದಿನಗಳ ಕಾಲ ಮತದಾನ ನಡೆಯಲಿದ್ದು, 18 ಮತ್ತು 20ಕ್ಕೆ ಮತ ಎಣಿಕೆ ನಡೆಯಲಿದೆ. ಯಾರು ಹೆಚ್ಚು ಮತಗಳನ್ನು ಪಡೆಯುತ್ತಾರೆ ಅವರು ಅಧ್ಯಕ್ಷ ಸ್ಥಾನಕ್ಕೆ, ಎರಡನೇ ಹೆಚ್ಚು ಮತ ಪಡೆಯುವವರು ಉಪಾಧ್ಯಕ್ಷ ಸ್ಥಾನ, ನಂತರ ಸ್ಥಾನ ಪ್ರಧಾನಕಾರ್ಯದರ್ಶಿ, ಕಾರ್ಯದರ್ಶಿ ಸ್ಥಾನಗಳಿಗೆ ಆಯ್ಕೆಯಾಗುತ್ತಾರೆ.  ವಿಧಾನಸಭೆ, ಲೋಕಸಭೆ ಕ್ಷೇತ್ರಗಳ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ ಮೊದಲು ನಡೆಯುತ್ತದೆ, ನಂತರ ರಾಜ್ಯಮಟ್ಟದ ಪದಾಧಿಕಾರಿಗಳ ಆಯ್ಕೆ ನಡೆಯುತ್ತದೆ. ಪ್ರಬಲ ಲಿಂಗಾಯಿತ ಸಮುದಾಯದ ಯುವ ಮುಖಂಡ ಬಸವನಗೌಡ, ಒಕ್ಕಲಿಗ ಸಮುದಾಯದ ಕೆಂಪರಾಜ್, ಅಮೃತಗೌಡ, ದಲಿತ ಸಮುದಾಯದ ರಾಜೇಂದ್ರ, ಹಿಂದುಳಿದ ವರ್ಗದ ಶಿವಕುಮಾರ್ ಹಾಗೂ ಇನ್ನಿತರರು ಕಣದಲ್ಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಡಿ.ಕೆ.ಶಿವಕುಮಾರ್, ಕೃಷ್ಣಬೈರೇಗೌಡ, ಪ್ರಿಯಾಂಕ ಖರ್ಗೆ, ದಿನೇಶ್‍ಗುಂಡೂರಾವ್, ರಿಜ್ವಾನ್ ಅರ್ಷದ್ ಸೇರಿದಂತೆ ಹಲವರ ಕೃಪಾ ಕಟಾಕ್ಷದ ಅಭ್ಯರ್ಥಿಗಳು ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ.
ಕೆಲವರಿಗೆ ಹೈಕಮಾಂಡ್ ಶ್ರೀರಕ್ಷೆಯೂ ಇದೆ. ಇದಕ್ಕೂ ಮುನ್ನ ಆಕಾಂಕ್ಷಿಗಳು ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಸಾಧ್ಯವಾದಷ್ಟು ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಈ ಎಲ್ಲದರ ನಡುವೆ ಚುನಾವಣಾ ಅಕ್ರಮಗಳು ನಡೆಯುವ ಸಾಧ್ಯತೆ ಇದ್ದು, ನಿಷ್ಠಾವಂತರಿಗೆ ಅನ್ಯಾಯವಾಗಲಿದೆ ಎಂಬ ಆತಂಕ ಹಲವರಲ್ಲಿ ಮನೆ ಮಾಡಿದೆ. ಹಾಗಾಗಿ ಚುನಾವಣೆಯ ಮೇಲೆ ತೀವ್ರ ನಿಗಾ ವಹಿಸಲಾಗಿದೆ.  ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಅಕ್ರಮಗಳು ನಡೆದಿದ್ದವು ಎಂಬ ಮಾತು ಕೇಳಿಬಂದಿತ್ತು. ಹಾಗಾಗಿ ಈ ಬಾರಿಯೂ ಚುನಾವಣಾ ಅಕ್ರಮಗಳು ನಡೆಯಬಹುದೆಂಬ ಹಿನ್ನೆಲೆಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಚುನಾವಣಾ ನೀತಿ, ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin