ರಕ್ತದಿ ಬರೆದಿಹ ವೀರ ಚರಿತ್ರೆ ಭಾರತ ಸ್ವಾತಂತ್ರ್ಯ ಸಂಗ್ರಾಮ ( ವಿಶೇಷ ಲೇಖನ )

ಈ ಸುದ್ದಿಯನ್ನು ಶೇರ್ ಮಾಡಿ

Independence

ಸ್ವಾತಂತ್ರ ಚಳವಳಿಯ ಗಮನಾರ್ಹ ನಾಯಕ ಸುರೇಂದ್ರನಾಥ ಬ್ಯಾನರ್ಜಿ.   ಆದ್ದರಿಂದಲೇ ಇವರನ್ನು ಭಾರತದ ರಾಷ್ಟ್ರೀಯ ಚಳವಳಿಯ ಪಿತಾಮಹ ಎಂದು ಕರೆಯುತ್ತೇವೆ. ಇವರು 1867ರಲ್ಲಿ ಇಂಡಿಯನ್ ಅಸೋಷಿಯೇಷನ್ನನ್ನು ಮೊಟ್ಟ ಮೊದಲು ಸ್ಥಾಪಿಸಿದರು. ಕಾಂಗ್ರೆಸ್ ಸಂಸ್ಥೆಯ ಪ್ರಥಮ ಅಧಿವೇಶನ ಬೊಂಬಾಯಿಯಲ್ಲಿ ಉಮೇಶ್ ಚಂದ್ರ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಭಾರತೀಯರ ಕಷ್ಟ ಕಾರ್ಪಣ್ಯಗಳ ನಿವಾರಣೆಯ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುವುದು ರಾಷ್ಟ್ರೀಯ ಕಾಂಗ್ರೆಸ್ ಕಾರ್ಯ ಚಟುವಟಿಕೆಯಾಗಿತ್ತು.

ವಿಶಾಲವಾದ ಪ್ರಪಂಚದಲ್ಲಿ ನಮ್ಮ ಹೆಮ್ಮೆಯ ದೇಶ ಭಾರತ. ಅನೇಕತೆ ಯಲ್ಲಿ ಏಕತೆಯ ವಿಶಿಷ್ಟ ಪರಿಕಲ್ಪನೆ ಹೊಂದಿರುವ ಶ್ರೀಮಂತ ಸಂಸ್ಕøತಿ ಮತ್ತು ಭವ್ಯ ಪರಂಪರೆಗಳ ರಾಷ್ಟ್ರ ನಮ್ಮದು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವೆಂಬ ಹೆಗ್ಗಳಿಕೆ ಪಡೆದಿರುವ ಭಾರತಕ್ಕೆ ತನ್ನದೇ ಆದ ಅಪ್ರತಿಮ ಹೋರಾಟದ ಇತಿಹಾಸ, ರಕ್ತದಿ ಬರೆದಿಹ ವೀರ ಚರಿತೆಯ ಹಿನ್ನೆಲೆ ಇದೆ. ಆಂಗ್ಲರ ದಬ್ಬಾಳಿಕೆಯಿಂದ ಭಾರತ ಮಾತೆಯನ್ನು ವಿಮುಕ್ತಿಗೊಳಿಸಲು ನಮ್ಮ ಸ್ವಾತಂತ್ರ ಸಂಗ್ರಾಮದ ಕಲಿಗಳು ನಡೆಸಿದ ಹೋರಾಟ ಮೈನವಿರೇಳಿಸುವಂಥದ್ದು.   ಬ್ರಿಟಿಷರ ಮೇಲಣ ವಿಜಯದ ಸಂಕೇತವಾಗಿ ನೂರೈವತ್ತು ವರ್ಷಗಳ ಹಿಂದಿನ ಸ್ವಾತಂತ್ರ್ಯ ಸಂಗ್ರಾಮದ ಅಮರ ನೆನಪನ್ನು ಸ್ಮರಿಸುವುದು ಹಾಗೂ ಹಿಂದುಸ್ತಾನವು ಎಂದೂ ಮರೆಯದ ಸ್ಮರಣೀಯರ, ಧೀಮಂತ ನಾಯಕರ ತ್ಯಾಗಬಲಿದಾನಗಳನ್ನು ಕೊಂಡಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಆಗಿದೆ.

ಭಾರತದಲ್ಲಿ 18 ಶತಮಾನದಲ್ಲಿ ಬ್ರಿಟಿಷರ ವಿರುದ್ದ ನಡೆದ ಹೋರಾಟಗಳ ನಂತರ ಅನೇಕ ಸ್ವಾತಂತ್ರ ಚಳವಳಿಗಳು ನಡೆದವು. ನಮ್ಮ ಸ್ವಾತಂತ್ರ ಸಂಗ್ರಾಮಕ್ಕೆ ನೂರೈವತ್ತು ವರ್ಷಗಳ ಸುದೀರ್ಘ ಇತಿಹಾಸವಿದೆ. ಆಗಿನ ರಾಜ ಮಹಾರಾಜರುಗಳು, ವೀರರಾಣಿಯರು ವಿದೇಶಿ ಆಡಳಿತಗಾರರ ದಬ್ಬಾಳಿಕೆ ಮತ್ತು ಶೋಷಣೆಗಳ ವಿರುದ್ದ ದನಿಎತ್ತಿ ದಿಟ್ಟ ಹೋರಾಟ ನಡೆಸಿದ್ದಾರೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್, ವೀರರಾಣಿ ಕಿತ್ತೂರು ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವೀರ ಪಾಂಡ್ಯ ಕಟ್ಟಿ ಬೊಮ್ಮನ್ ಆನಂತರ ಸ್ವಾತಂತ್ರ ಸೇನಾನಿಗಳು ಮತ್ತು ಚಳವಳಿಗಾರರ ಹೋರಾಟದ ಕೆಚ್ಚು ನಮ್ಮಲ್ಲಿ ಒಡಮೂಡಿ ನಿಲ್ಲುತ್ತದೆ. ಈ ಎಲ್ಲ ಹೋರಾಟಗಳ ಚಿತ್ರಣವನ್ನು ಸಂಕ್ಷಿಪ್ತವಾಗಿ ಪ್ರತಿಬಿಂಬಿಸುವುದೇ ಈ ಲೇಖನದ ಆಶಯವಾಗಿದೆ.
ಪ್ರಥಮ ಸ್ವಾತಂತ್ರ ಸಂಗ್ರಾಮ: 1753ರ ಪ್ಲಾಸೀ ಕದನದಿಂದ ಸರಿಯಾಗಿ 104 ವರ್ಷಗಳ ನಂತರ ಅಂದರೆ 1857ರಲ್ಲಿ ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ ಸಿಪಾಯಿ ದಂಗೆ ಮೂಲಕ ಕಿಡಿಕಾರಿತು. ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ ಕಿಚ್ಚು ಸಿಪಾಯಿ ದಂಗೆ ಮೂಲಕ ಹೊರಹೊಮ್ಮಿತು. 1857-1858ರಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ದ ಉತ್ತರ ಮತ್ತು ಮಧ್ಯ ಭಾರತದಲ್ಲಿ ಭುಗಿಲೆದ್ದ ದಂಗೆ ಇದು. ಈ ದಂಗೆಯು ಭಾರತೀಯ ಸೈನಿಕರು ಮತ್ತು ಅವರ ಬ್ರಿಟಿಷ್ ಅಧಿಕಾರಿಗಳ ನಡುವಣ ಜನಾಂಗೀಯ ಮತ್ತು ಸಾಂಸ್ಕøತಿಕ ತಾರತಮ್ಯಗಳ ಫಲವಾಗಿ ಉಲ್ಬಣಗೊಂಡಿತು. ಅದರೆ ಸಿಪಾಯಿ ದಂಗೆಗೆ ವಾಸ್ತವ ಕಾರಣವೆಂದರೆ ಬ್ರಿಟಿಷ್ ಸೈನ್ಯದಿಂದ ಭಾರತೀಯ ಸಿಪಾಯಿಗಳಿಗೆ ನೀಡಲ್ಪಟ್ಟ ಲೀ-ಎನ್‍ಫೀಲ್ಡ್ ಬಂದೂಕಿನ ತೋಟಾಗಳಿಗೆ ದನದ ಮತ್ತು ಹಂದಿಯ ಕೊಬ್ಬನ್ನು ಸವರಿದ್ದಾರೆಂಬ ಸುದ್ದಿ. ಸೈನಿಕರು ಕಾಡತೂಸುಗಳನ್ನು ತಮ್ಮ ಬಂದೂಕುಗಳಲ್ಲಿ ತುಂಬುವ ಮೊದಲು ಹಲ್ಲಿನಿಂದ ಕಚ್ಚಿ ಅವುಗಳನ್ನು ತೆರೆಯಬೇಕಾಗಿತ್ತು. ಗೋವು ಹಿಂದುಗಳಿಗೆ ತುಂಬಾ ಪವಿತ್ರವಾದ ಪ್ರಾಣಿಯಾದರೆ, ಇನ್ನೊಂದೆಡೆ ಹಂದಿ ಕಟ್ಟುನಿಟ್ಟಾಗಿ ಮುಸ್ಲಿಮರಿಗೆ ನಿಷೇಧಿತವಾಗಿತ್ತು.. ಹೀಗಾಗಿ ದನ ಮತ್ತು ಹಂದಿಯ ಕೊಬ್ಬು ಇದ್ದರೆ ಹಿಂದು ಮತ್ತು ಮುಸ್ಲಿಂ ಸಿಪಾಯಿಗಳ ಮನಸ್ಸು ನೋಯುವಂತೆ ಮಾಡುವುದು ಇದರ ಉದ್ದೇಶವಾಗಿತ್ತು. ಈ ಧಾರ್ಮಿಕ ಸಂಗತಿ ಹಿನ್ನೆಲೆಯಲ್ಲಿ ಫೆಬ್ರವರಿ 1857ರಲ್ಲಿ ಸಿಪಾಯಿಗಳು ದಂಗೆ ಎದ್ದು ಹೊಸ ಕಾಡತೂಸುಗಳನ್ನು ಬಳಕೆ ಮಾಡಲು ನಿರಾಕರಿಸಿದರು. ಸಿಪಾಯಿ ದಂಗೆ ದಿಟ್ಟ ಹೋರಾಟದ ಕಿಚ್ಚು ಪಡೆದಿದ್ದು ಭಾರತ ಪ್ರಥಮ ಸ್ವಾತಂತ್ರ ಸಂಗ್ರಾಮದ ಹುತಾತ್ಮ ಎಂದೇ ಖ್ಯಾತಿ ಪಡೆದಿರುವ ಮಂಗಲ್ ಪಾಂಡೆ ಮೂಲಕ. ಈಸ್ಟ್ ಇಂಡಿಯಾ ಕಂಪೆನಿಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದ ಪಾಂಡೆ 1957ರಲ್ಲಿ ಆಂಗ್ಲರ ಮೇಲೆ ಮಾಡಿದ ಆಕ್ರಮಣ ಭಾರತದ ಮೊದಲ ಸ್ವಾತಂತ್ರ ಸಂಗ್ರಾಮದ ರೂಪ ಪಡೆಯಿತು.
34ನೇ ದೇಶೀಯ ಪದಾತಿದಳದ ಸಿಪಾಯಿ ಮಂಗಲ್ ಪಾಂಡೆ 1857ರ ಮಾರ್ಚ್‍ನಲ್ಲಿ ಬ್ರಿಟಿಷ್ ಸಾರ್ಜೆಂಟ್ ಲೆಫ್ಟಿನೆಂಟ್ ಬಾಘ್ ಮೇಲೆ ದಾಳಿ ಮಾಡಿ ಮತ್ತೊಬ್ಬ ಯೋಧನನ್ನು ಗಾಯಗೊಳಿಸಿದನು. ಈ ಘಟನೆ ಹಿನ್ನೆಲೆಯಲ್ಲಿ ಜನರಲ್ ಹರ್ಸೇ, ಪಾಂಡೆಯನ್ನು ಬಂಧಿಸಲು ಜಮಾದಾರನಿಗೆ ಆದೇಶಿಸಿದನಾದರೂ, ಬಂಧಿಸಲು ಆತ ನಿರಾಕರಿಸಿದ. ಏಪ್ರಿಲ್ 7ರಂದು ಮಂಗಲ್ ಪಾಂಡೆಯನ್ನು ಜಮಾದಾರ ಈಶ್ವರಿ ಪ್ರಸಾದ್ ಜೊತೆ ನೇಣು ಹಾಕಲಾಯಿತು. ಸಾಮೂಹಿಕ ಶಿಕ್ಷೆಯಾಗಿ ಇಡೀ ತುಕಡಿಯನ್ನೇ ವಿಸರ್ಜಿಸಲಾಯಿತು. ಮೇ 10ರಂದು 11ನೇ ಮತ್ತು 20ನೇ ಅಶ್ವದಳಗಳು ಸೇರಿದಾಗ ಸವಾರರು ರೋಷದಿಂದ ಮೇಲಾಧಿಕಾರಿಗಳನ್ನು ಬಗ್ಗು ಬಡಿದರು. ಅನಂತರ ಮೂರನೇ ತುಕಡಿಯನ್ನು ಸ್ವತಂತ್ರಗೊಳಿಸಲಾಯಿತು. ಈ ಘಟನೆ ನಂತರ ದೆಹಲಿ ಸೇರಿದಂತೆ ಉತ್ತರ ಭಾರತದ ತುಂಬೆಲ್ಲಾ ಬಂಡಾಯ ಹಬ್ಬಿತು. ಅವಧ್ ಪ್ರಾಂತ್ಯದ ಮಾಜಿ ದೊರೆಯ ಸಲಹೆಗಾರ ಅಹ್ಮದ್ ಉಲ್ಲಾ, ನಾನಾ ಸಾಹೇಬ್, ಅವನ ಸೋದರಳಿಯ ರಾವ್ ಸಾಹೇಬ್ ಮತ್ತವನ ಅನುಯಾಯಿಗಳಾದ ತಾತ್ಯಾ ಟೋಪಿ ಮತ್ತು ಅಜೀಮುಲ್ಲಾ ಖಾನ್, ಝಾನ್ಸಿ ರಾಣಿ ಲಕ್ಷ್ಮೀಭಾಯಿ, ಕುಂವರ್ ಸಿಂಹ, ಬಿಹಾರದ ಜಗದೀಶ್‍ಪುರದ ರಜಪೂತ ನಾಯಕರು ಮತ್ತು ಮೊಘಲ್ ದೊರೆ ಬಹಾದುರ್ ಶಹಾನ ಸಂಬಂಧಿ ಪಿರೋಜ್ ಶಹಾ, ಎರಡನೇ ಬಹಾದುರ್ ಶಹಾ ಮೊದಲಾದವರು ಬ್ರಿಟಿಷರ ವಿರುದ್ದ ತಿರುಗಿಬಿದ್ದರು.
ಸ್ವಾತಂತ್ರ ಚಳವಳಿಯ ಗಮನಾರ್ಹ ನಾಯಕ ಸುರೇಂದ್ರನಾಥ ಬ್ಯಾನರ್ಜಿ. ಆದ್ದರಿಂದಲೇ ಇವರನ್ನು ಭಾರತದ ರಾಷ್ಟ್ರೀಯ ಚಳವಳಿಯ ಪಿತಾಮಹ ಎಂದು ಕರೆಯುತ್ತೇವೆ. ಇವರು 1867ರಲ್ಲಿ ಇಂಡಿಯನ್ ಅಸೋಷಿಯೇಷನ್‍ನನ್ನು ಮೊಟ್ಟ ಮೊದಲು ಸ್ಥಾಪಿಸಿದರು. ಕಾಂಗ್ರೆಸ್ ಸಂಸ್ಥೆಯ ಪ್ರಥಮ ಅಧಿವೇಶನ ಬೊಂಬಾಯಿಯಲ್ಲಿ ಉಮೇಶ್ ಚಂದ್ರ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಭಾರತೀಯರ ಕಷ್ಟ ಕಾರ್ಪಣ್ಯಗಳ ನಿವಾರಣೆಯ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುವುದು ಈ ರಾಷ್ಟ್ರೀಯ ಕಾಂಗ್ರೆಸ್‍ನ ಕಾರ್ಯ ಚಟುವಟಿಕೆಯಾಗಿತ್ತು. ರಾಷ್ಟ್ರೀಯ ಕಾಂಗ್ರೆಸ್ ಆಗಿನ ನಾಯಕರಾದ ಫಿರೋಷಾ ಷಾ ಮೆಹತಾ, ಗೋಪಾಲಕೃಷ್ಣ ಗೋಖಲೆ, ದಾದಾ ಬಾಯಿ ನವರೋಜಿ, ಸುರೇಂದ್ರನಾಥ ಬ್ಯಾನರ್ಜಿ, ಬದ್ರುದ್ದೀನ್ ತ್ಯಾಬ್ಜಿ, ಬಾಲಗಂಗಾಧರನಾಥ ತಿಲಕ್ ಇವೆಲ್ಲರೂ ಬ್ರಿಟಿಷ್ ಸಾರ್ವಭೌಮತ್ವದಲ್ಲಿ ಸ್ವರಾಜ್ಯವನ್ನು ಪಡೆಯುವ ಉದ್ದೇಶ ಹೊಂದಿದ್ದರು.ಭಾರತದಲ್ಲಿ ಸ್ವಾತಂತ್ರ ಸಂಗ್ರಾಮ ಹಾಗೂ ಕ್ರಾಂತಿಕಾರಿ ಚಟುವಟಿಕೆಗಳನ್ನು ಹತ್ತಿಕ್ಕಲು ಬ್ರಿಟಿಷರು ಒಂದೆಡೆ ಒಡೆದು ಆಳುವ ನೀತಿಯನ್ನು ಅನುಸರಿಸಿದರೆ ಇನ್ನೊಂದೆಡೆ ದಮನಕಾರಿ ಕರಾಳ ಕಾಯ್ದೆ-ಮಸೂದೆಗಳನ್ನು ಜಾರಿಗೊಳಿಸಿದರು. ಇಂಥ ಕ್ರೂರ ಕಾಯ್ದೆಯಲ್ಲಿ ರೌಲತ್ ಮಸೂದೆ ಕೂಡ ಒಂದು.

ಈ ಕಾಯ್ದೆಗಳಿಂದ ಆದ ಚಳವಳಿಗಳು ಏಪ್ರಿಲ್ 13, 1919ರಂದು ಪಂಜಾ ಬ್‍ನ ಅಮೃತಸರದಲ್ಲಿ ನಡೆದ ಜಲಿಯನ್ ವಾಲಾಭಾಗ್ ಹತ್ಯಾಕಾಂಡದಲ್ಲಿ ಪರ್ಯವಸಾನವಾಯಿತು. ಇದನ್ನು ಅಮೃತಸರದ ನರಮೇಧ ಎಂದೂ ಹೆಸರಿಸಲಾಗಿದೆ. ಬ್ರಿಟಿಷ್ ಸೈನ್ಯದ ಕಮಾಂಡರ್ ಆಗಿದ್ದ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್ ತನ್ನ ಸೈನಿಕರಿಗೆ ಸುಮಾರು ಹತ್ತು ಸಾವಿರಷ್ಟಿದ್ದ ನಿಶ್ಯಸ್ತ್ರ ಮತ್ತು ಅಮಾಯಕ ಜನರ ಮೇಲೆ ಗುಂಡು ಹಾರಿಸಲು ಆಜ್ಞೆ ನೀಡಿದ. ಅವರು ಮಾರ್ಷಲ್ ಲಾ ಜಾ ರಿಯಾಗಿರುವ ಸಂಗತಿ ತಿಳಿಯದೆ, ಗೋಡೆಗಳಿಂದ ಅಮೃತಸರದ ಜಲಿಯನ್ ವಾಲಾಭಾಗ್ ಎಂಬ ತೋಟದಲ್ಲಿ ಸಿಖ್ ಹಬ್ಬವಾದ ಬೈಶಾಖಿಯನ್ನು ಆಚರಿಸಲು ಸಭೆ ಸೇರಿದ್ದರು. ಈ ಘಟನೆಯಲ್ಲಿ ಒಟ್ಟು 1,650 ಸುತ್ತು ಗುಂಡುಗಳನ್ನು ಹಾರಿಸಲಾಯಿತು. 739 ಮಂದಿ ದುರಂತ ಸಾವಿಗೀಡಾಗಿ, 1,137 ಜನರು ಗಾಯಗೊಂಡರು.

ಗಾಂಧಿ ಯುಗ:

ಗಾಂಧೀಜಿಯವರ ಸತ್ಯಾಗ್ರಹ, ಅಹಿಂಸೆ, ಸ್ವದೇಶಿ ಮಂತ್ರ. ಸತ್ಯ ಮತ್ತು ಅಹಿಂಸೆ ಇವರ ಸತ್ಯಾಗ್ರಹದ ತತ್ವವಾಗಿತ್ತು. ಹಿಂಸೆಗೆ ಚಿಕ್ಕ ಗುಂಪು ಸಿದ್ದವಾದರೆ, ಚಳವಳಿಯಲ್ಲಿ ಭಾಗವಹಿಸಲು ಜನಸಮೂಹವೇ ಸಿದ್ದವಾಗುತ್ತದೆ ಎಂಬುದು ಇವರ ತತ್ವದ ಸಾರವಾಗಿತ್ತು. ಸ್ವದೇಶಿ ಮಂತ್ರ ಗಾಂಧೀಜಿಯವರ ಒಂದು ರಾಷ್ಟ್ರೀಯ ಅಸ್ತ್ರವಾಗಿತ್ತು.  ಗಾಂಧಿ 1915ರಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿ ದೇಶಭಕ್ತಿಯ ನವಭಾರತದ ಕನಸೊಂದನ್ನು ಕಟ್ಟಿಕೊಂಡಿದ್ದರು. ವರ್ಷಗಟ್ಟಲೆ ದೇಶದ ಉದ್ದಗಲಕ್ಕೂ ಸಂಚರಿಸಿ ಭಾರತದ ರಾಜ್ಯಗಳು, ನಗರ ಪಟ್ಟಣಗಳು, ಹಳ್ಳಿಗಳನ್ನೆಲ್ಲ ಸುತ್ತುತ್ತಾ ದೇಶದ ಜನರ ಕುಂದು ಕೊರತೆಗಳ ಬಗ್ಗೆ ತಿಳಿಯ ಲಾರಂಭಿಸಿದರು. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವಲ್ಲಿ ಗಾಂಧಿಯವರು ಸಫಲರಾಗಿದ್ದು ರೌಲತ್ ಕಾಯ್ದೆಯ ವಿರುದ್ದ ಪಂಜಾ ಬ್‍ನಲ್ಲಿ ನಡೆಸಿದ ಸತ್ಯಾಗ್ರಹ ಚಳವಳಿಯ ಮೂಲಕ. ಈ ಹೊತ್ತಿಗಾಗಲೇ ಭಾರತದ ಮೈಯನ್ನು ಮುಚ್ಚುತ್ತಿದ್ದ ಐರೋಪ್ಯ ಬಟ್ಟೆಗಳನ್ನು ಅವರು ಕಿತ್ತೆಸೆದು, ನಾಡು ನೇಯ್ಗೆಯ ಖಾದಿ ಧೋತ್ರಗಳನ್ನು ಹಾಗೂ ಮೇಲು ಹೊದಿಕೆಯನ್ನೂ ಧರಿಸ ಲಾರಂಭಿಸಿದರು. ಇದಕ್ಕಾಗಿಯೇ ಗಾಂಧೀಜಿ ಯವರನ್ನು ತುಂಡು ಬಟ್ಟೆ ತೊಟ್ಟ ಫಕೀರ ಎಂದು ಕರೆಯಲಾಗುತ್ತದೆ.
ಚೌರಾಚೌರಿ ಘಟನೆ: ಈ ಮಧ್ಯೆ, 1922ರಲ್ಲಿ ಗೋರಖ್‍ಪುರ್‍ಚೌರಾಚೌರಿ ಘಟನೆ ನಡೆಯಿತು. ಗಾಂಧೀಜಿ ನೇತೃತ್ವದಲ್ಲಿ ದೇಶಾದ್ಯಂತ ಅಸಹಕಾರ ಚಳವಳಿ ನಡೆಯುತ್ತಿದ್ದ ಸಂದರ್ಭವದು. ಈ ಸಂದರ್ಭದಲ್ಲಿ ಉದ್ರಿಕ್ತ ಗುಂಪೊಂದು ಪೊಲೀಸ್ ಚೌಕಿಯತ್ತ ಮುನ್ನುಗ್ಗಲು ಯತ್ನಿಸಿದಾದ ಠಾಣಾಧಿಕಾರಿ ಗೋಲಿಬಾರ್‍ಗೆ ಆದೇಶ ನೀಡಿದ. ಈ ಗುಂಡಿನ ದಾಳಿಯನ್ನು ಮೂವರು ಪ್ರತಿಭಟನಾಕಾರರು ಮೃತಪಟ್ಟು ಹಲವರು ಗಾಯಗೊಂಡರು. ಇದರಿಂದ ಇನ್ನಷ್ಟು ಕೆರಳಿದ ಗುಂಪು ಪೊಲೀಸ್ ಚೌಕಿ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು. ಈ ಘಟನೆಯಲ್ಲಿ ಠಾಣೆ ಒಳಗೆ ಸಿಲುಕಿದ 23 ಪೊಲೀಸರು ಹತರಾದರು. ಚೌರಾಚೌರಿಯಲ್ಲಿ ಕೆಲವು ಪ್ರತಿಭಟನೆಕಾರರ ಗುಂಪಿನಿಂದ ಪೊಲೀಸರ ಘೋರ ಹತ್ಯೆಯಿಂದಾಗಿ ಗಾಂಧಿ ಒಂದು ಕಠಿಣ ನಿರ್ಧಾರ ಕೈಗೊಂಡು 1922ರಲ್ಲಿ ಚಳವಳಿಯನ್ನು ಹಿಂದಕ್ಕೆ ಪಡೆದರು.

ಅಸಹಕಾರ ಚಳವಳಿ:

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ವಿರುದ್ದ ದಿನೇ ದಿನೇ ಪ್ರತಿಭಟನೆ ಮತ್ತು ಹೋರಾಟದ ಕಿಚ್ಚು ವ್ಯಾಪಿಸುತ್ತಿದ್ದಂತೆ ಭಾರತೀಯರ ಕುಂದು ಕೊರತೆಗಳನ್ನು ಆಲಿಸಲು ಬ್ರಿಟಿಷ್ ಸರ್ಕಾರ ಸರ್ ಜಾನ್ ಸೈಮನ್ ನೇತೃತ್ವದ ಆಯೋಗವನ್ನು ಕಳುಹಿಸಿತು. ಆದರೆ ಇದು ಶ್ವೇತ ವರ್ಣಿಯರ ಆಯೋಗವಾಗಿತ್ತು. ಒಬ್ಬ ಭಾರತೀಯನಿಗೂ ಸಹ ಈ ಆಯೋಗದಲ್ಲಿ ಅವಕಾಶ ಇರಲಿಲ್ಲ. ಇದರಿಂದ ಭಾರತೀಯರು ಈ ಆಯೋಗವನ್ನು ಬಹಿಷ್ಕರಿಸಿದರು. ಈ ಆಯೋಗವು ಲಾಹೋರ್‍ಗೆ ಬಂದಾಗ ಪಂಜಾಬ್ ಕೇಸರಿ ಎಂದೇ ಜನಜನಿತರಾಗಿದ್ದ ಲಾಲಾ ಲಜಪತರಾಯ್ ಮತ್ತು ಇತರರು ಆಯೋಗದ ವಿರುದ್ದ ಕಪ್ಪು ಧ್ವಜ ಪ್ರದರ್ಶಿಸಿ ಪ್ರತಿಭಟನೆ ವ್ಯಕ್ತಪಡಿಸಿದರು. ಸೈಮನ್ ಹಿಂದಕ್ಕೆ ತೊಲಗಿ ಎಂಬ ಘೋಷನೆ ಮೊಳಗಿದವು. ಲಾಲಾ ಲಜಪತ ರಾಯ್ ಮತ್ತು ಇತರರನ್ನು ಹಿಮ್ಮೆಟ್ಟಿಸಲು ಬ್ರಿಟಿಷರು ಬಲಪ್ರಯೋಗ ಮಾಡಿದರು. ತೀವ್ರ ಸ್ವರೂಪದ ಲಾಠಿ ಏಟು ಬಿದ್ದ ಲಾಲಾಜಿ ಸಾವಿಗೀಡಾದರು. ನನ್ನ ಮೈಮೇಲೆ ಬಿದ್ದ ಪ್ರತಿಯೊಂದು ಲಾಠಿ ಏಟು ಬ್ರಿಟಿಷ್ ಚಕ್ರಾಧಿಪತ್ಯದ ಶವದ ಪೆಟ್ಟಿಗೆ ಒಂದೊಂದು ಮೊಳೆಯಾಗಿಲಿದೆ ಎಂದು ಅವರು ಸಾವಿನ ದವಡೆಯಲ್ಲೂ ಕೆಚ್ಚೆದೆಯ ಘೋಷಣೆ ಸಾರಿದರು.

ಬ್ರಿಟಿಷ್ ಆಡಳಿತಗಾರರ ದಬ್ಬಾಳಿಕೆ ವಿರುದ್ದದ ಸಶಸ್ತ್ರ ದಂಗೆಯು 20ನೇ ಶತಮಾನದ ಆರಂಭದ ತನಕ ಸಂಘಟಿತವಾಗಿರಲಿಲ್ಲ. ಬಂಗಾಳದ ವಿಭಜನೆ ನಂತರ 1906ರಲ್ಲಿ ಅರಬಿಂದೋ ಘೋಷ್ ನೇತೃತ್ವದಲ್ಲಿ ರಹಸ್ಯವಾದ ಜುಗಾಂತರ್ ಪಕ್ಷ ಸ್ಥಾಪನೆಯಾಯಿತು. ಘೋಷ್‍ರ ಸಹೋದರ ಬರಿನ್ ಘೋಷ್ ಮತ್ತು ಬಾಘಾ ಜತ್ರೀನ್ ಅವರಂಥ ಪಕ್ಷದ ನಾಯಕರು ಸ್ಫೋಟಕಗಳನ್ನು ತಯಾರಿಸಲು ಆರಂಭಿಸಿದರು. ಮುಜಾಫರ್‍ಪುರದಲ್ಲಿ ಒಬ್ಬ ಬ್ರಿಟಿಷ್ ನ್ಯಾಯಾಧೀಶನನ್ನು ಸ್ಫೋಟಕದೊಂದಿಗೆ ಕೊಲ್ಲುವ ಯತ್ನ ವಿಫಲವಾದಾಗ ಅರಬಿಂದೋ ಅವರೊಂದಿಗೆ ಅನೇಕರು ಬಂಧಿತರಾದರು. ಒಟ್ಟು 46 ಆರೋಪಿಗಳನ್ನು ಅಲಿಪುರದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಅನೇಕರನ್ನು ಗಡೀಪಾರು ಮಾಡಲಾಯಿತು. ಸ್ಫೋಟ ಯತ್ನದಲ್ಲಿ ಭಾಗಿಯಾಗಿದ್ದ ಖುದೀರಾಮ್ ಬೋಸ್ ಗಲ್ಲಿಗೇರಿದರು. ಮರೆಯಾಗಲು ಪ್ರಯತ್ನಿಸಿದ ಬಾಘಾ ಜತಿನ್ ಪೆÇಲೀಸರ ಗುಂಡಿಗೆ ಬಲಿಯಾದರು.

1914ರಲ್ಲಿ ಪ್ರಾರಂಭವಾದ ಮೊದಲನೇ ಮಹಾಯುದ್ದವು ಕ್ರಾಂತಿಕಾರಿ ಚಟುವಟಿಕೆಗಳಿಗೆ ಪೂರಕವಾಯಿತು. ಇದರಲ್ಲಿ ಭಾಗವಹಿಸಲು ಅನುಶೀಲನಾ ಸಮಿತಿ, ಗದರ್ ಪಕ್ಷ ಇತ್ಯಾದಿಯನ್ನು ಸೇರಿಸಿಕೊಂಡರು. ಕ್ರಾಂತಿಕಾರಿಗಳು ಮದ್ದುಗುಂಡು ಮತ್ತು ಶಸ್ತ್ರಾಸ್ತ್ರಗಳನ್ನು ಜರ್ಮನಿಯಿಂದ ತರಿಸಿಕೊಂಡು ಬ್ರಿಟಿಷರ ವಿರುದ್ದ ಸಶಸ್ತ್ರ ಬಂಡಾಯ ಹೂಡಲು ಯೋಜಿಸಿದರು. ಮೊದಲನೇ ಮಹಾಯುದ್ದದ ನಂತರ ಅನೇಕ ಪ್ರಮುಖ ನಾಯಕರ ಬಂಧನದಿಂದಾಗಿ ಕ್ರಾಂತಿಕಾರಿ ಚಟುವಟಿಕೆಗಳು ಹಿನ್ನೆಡೆ ಅನುಭವಿಸಿದವು. 1920ರ ಹೊತ್ತಿಗೆ ಕ್ರಾಂತಿಕಾರಿಗಳು ಮತ್ತೆ ಸಂಘಟಿತರಾದರು. ಚಂದ್ರಶೇಖರ್ ಅಜಾದ್ ನೇತೃತ್ವದಲ್ಲಿ ಹಿಂದುಸ್ತಾನ್ ಸಮಾಜವಾದಿ ಗಣರಾಜ್ಯ ಸಂಘಟನೆ ರಚನೆಯಾಯಿತು. ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ 1929ರ ಅಕ್ಟೋಬರ್ 8ರಂದು ಕೇಂದ್ರೀಯ ಶಾಸನ ಸಭೆಯಲ್ಲಿ ಸಾರ್ವಜನಿಕ ಸುರಕ್ಷತಾ ಮಸೂದೆ ಮತ್ತು ವ್ಯಾಪಾರ ವಿವಾದಗಳ ಮಸೂದೆ ಅಂಗೀಕರಿಸುವುದನ್ನು ಪ್ರತಿಭಟಿಸಿ, ಸ್ಫೋಟಕವನ್ನು ಎಸೆದರು, ಸೆಂಟ್ರಲ್ ಅಸೆಂಬ್ಲಿ ಬಾಂಬ್ ಮೊಕದ್ದಮೆಯ ವಿಚಾರಣೆ ನಂತರ ಭಗತ್‍ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು 1931ರಂದು ಗಲ್ಲಿಗೇರಿಸಲಾಯಿತು. ಕ್ರಾಂತಿಕಾರಿ ನಾಯಕ ಸೂರ್ಯ ಸೇನ್ 18ನೇ ಏಪ್ರಿಲ್ 1920ರಂದು ಇತರೆ ಕಾರ್ಯಕರ್ತರೊಂದಿಗೆ ಸೇರಿಕೊಂಡು ಮದ್ದುಗುಂಡು ಮತ್ತು ಶಸ್ತ್ರಾಸ್ತ್ರ ವಶಪಡಿಸಿಕೊಂಡು ಸರ್ಕಾರಿ ಸಂಪರ್ಕ ವ್ಯವಸ್ಥೆಯನ್ನು ನಾಶ ಮಾಡಿ ಸ್ಥಳೀಯ ಸರ್ಕಾರವನ್ನು ಸ್ಥಾಪಿಸುವ ಉದ್ದೇಶದಿಂದ ಚಿತ್ತಗಾಂಗ್ ಶಸ್ತ್ರಾಗಾರದ ಮೇಲೆ ದಾಳಿ ಮಾಡಿದರು. 1932ರಲ್ಲಿ ಪ್ರೀತಿಲತಾ ವಡ್ಡೇದಾರ್, ಚಿತ್ತಗಾಂಗ್‍ನಲ್ಲಿ ಯುರೋಪಿಯನ್ ಕ್ಲಬ್ ಮೇಲೆ ನಡೆದ ದಾಳಿಯ ಮುಂದಾಳತ್ವ ವಹಿಸಿದ್ದರು, ಬೀನಾ ದಾಸ್, ಕಲ್ಕತ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಬಂಗಾಳದ ಗೌರ್ನರ್ ಸ್ಟ್ಯಾನ್ಲಿ ಜಾಕ್ಸನ್ ಹತ್ಯೆಗೆ ಯತ್ನಿಸಿದರು. ಚಿತ್ತಗಾಂಗ್ ಶಸ್ತ್ರಾಗಾರದ ದಾಳಿ ಮೊಕದ್ದಮೆ ನಂತರ ಸೂರ್ಯ ಸೇನ್‍ರನ್ನು ನೇಣು ಹಾಕಲಾಯಿತು. ಅನೇಕರನ್ನು ಜೀವಾವಧಿ ಅಂಡಮಾನ್ ಸೆಲ್ಯುಲಾರ್ ಜೈಲಿಗೆ ಗಡಿಪಾರು ಮಾಡಲಾಯಿತು. 12ನೇ ಮಾರ್ಚ್ 1940ರಂದು, ಲಂಡನ್‍ನಲ್ಲಿ ಉಧಮ್ ಸಿಂಗ್ ಅಮೃತಸರ ಹತ್ಯಾಕಾಂಡಕ್ಕೆ ಕಾರಣ ಎಂದು ಪರಿಗಣಿಸಲಾದ ಮೈಕೇಲ್ ಓ ಡೈಯರ್ ಮೇಲೆ ಗುಂಡು ಹಾರಿಸಿದನು.
ದೇಶ ಗೌರವ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತದ ಹೆಮ್ಮೆಯ ಪುತ್ರ. ಶಸ್ತ್ರಾಸ್ತ್ರ ಹೋರಾಟದ ಮೂಲಕ ಬ್ರಿಟಿಷ್ ದುರಾಡಳಿತವನ್ನು ಕೊನೆಗಾಣಿಸಲು ನೇತಾಜಿ ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿದರು. ಅವರ ಅಕಾಲ ಮರಣದಿಂದ ಈ ಪ್ರಯತ್ನ ವಿಫಲವಾಗಿದ್ದು ದೇಶದ ದೊಡ್ಡ ದುರಂತ.
1939ರಲ್ಲಿ ಯುದ್ದವು ಆರಂಭವಾದಾಗ ವಾರ್ಧಾದಲ್ಲಿ ಸೇರಿದ್ದ ಕಾಂಗ್ರೆಸ್ ಪಕ್ಷದ ನಾಯಕತ್ವ ಭಾರತಕ್ಕೆ ಸ್ವಾತಂತ್ರ ನೀಡಿದಲ್ಲಿ ಬ್ರಿಟಿಷರಿಗೆ ಬೆಂಬಲ ನೀಡುವಂತೆ ನಿಶ್ಚಿಯಿಸಿದರು. ಸ್ವಾತಂತ್ರದ ಷರತ್ತನ್ನು ಬ್ರಿಟಿಷರು ಒಪ್ಪದ ಕಾರಣ 1942ರ ಆಗಸ್ಟ್‍ನಲ್ಲಿ ಕಾಂಗ್ರೆಸ್ ಕೂಡಲೇ ಸ್ವಾತಂತ್ರ ನೀಡಬೇಕೆಂದು ಆಗ್ರಹಿಸಿ ಭಾರತ ಬಿಟ್ಟು ತೊಲಗಿ ಎಂಬ ನಾಗರಿಕ ಅಸಹಕಾರ ಆಂದೋಲನಕ್ಕೆ ಕರೆ ನೀಡಿತು. ಮುಂಬೈನಲ್ಲಿ ಗಾಂಧೀಜಿಯವರು ಈ ಕರೆಯನ್ನು ಬೆಂಬಲಿಸಿ ಶಾಂತಿಯುತವಾಗಿ ಸರ್ಕಾರಕ್ಕೆ ಅಸಹಕಾರಿಯಾಗಿ ವರ್ತಿಸಬೇಕೆಂದು ಭಾರತೀಯರನ್ನು ಕೋರಿದರು. ಬ್ರಿಟಿಷರು ಯುದ್ದದಲ್ಲಿ ನಿರತವಾಗಿರುವ ಪ್ರಸಂಗವನ್ನು ಉಪಯೋಗಿಸಿಕೊಳ್ಳಲು ಈ ಯತ್ನ ನಡೆಯಿತು. ಆದರೆ ಗಾಂಧೀಜಿಯವರ ಕರೆಯ 24 ಗಂಟೆಗಳಲ್ಲಿ ಕಾಂಗ್ರೆಸ್‍ನ ಇಡೀ ನಾಯಕತ್ವವನ್ನು ಬಂಧಿಸಲಾಯಿತು. ಅನೇಕರನ್ನು ಯುದ್ದ ಮುಗಿಯುವ ತನಕ ಬಿಡುಗಡೆಗೊಳಿಸಲಿಲ್ಲ. ಈ ಕರೆಗೆ ಮತ್ತು ಸಾಮೂಹಿಕ ಬಂಧನಕ್ಕೆ ಭಾರತದಲ್ಲೆಲ್ಲಾ ಪ್ರತಿಭಟನೆಗಳು ನಡೆದವು. ಅನೇಕರು ಕೆಲಸಕ್ಕೆ ಹಾಜರಾಗಲಿಲ್ಲ. ಇನ್ನು ಕೆಲವರು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ದೇಶಾದ್ಯಂತ ಒಂದು ಲಕ್ಷಕ್ಕೂ ಅಧಿಕ ಜನರನ್ನು ಬಂಧಿಸಲಾಯಿತು. 1944 ಹೊತ್ತಿಗೆ ನಾಯಕರಿಲ್ಲದೇ ಈ ಚಳವಳಿ ನಿಂತು ಹೋಯಿತು.

ಹಾರಾಡಿದ ತ್ರಿವರ್ಣಧ್ವಜ:

ಎರಡನೇ ಮಹಾ ಸಂಗ್ರಾಮದಲ್ಲಿ ಆರ್ಥಿಕ, ರಾಜಕೀಯ ಮತ್ತು ಸೇನೆಗಳ ಅಪಾರ ಬೆಲೆ ತೆತ್ತಿದ್ದ ಬ್ರಿಟಿಷ್ ಸಾಮ್ರಾಜ್ಯ ಒಂದೆಡೆ ಅಸಹಕಾರ ಚಳವಳಿ ಇನ್ನೊಂದೆಡೆ ಸೇನೆಯ ದಂಗೆಯಂಥ ಆಂದೋಲನದಿಂದ ಎಚ್ಚೆದ್ದ ಭಾರತೀಯರನ್ನು ಸದೆಬಡಿಯುವ ಬಲವನ್ನು ಹೊಂದಿರಲಿಲ್ಲ. ಈ ಹೋರಾಟಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ತನ್ನ ಆಳ್ವಿಕೆಯನ್ನು ಮುಂದುವರೆಸುವುದರ ವಿಪರ್ಯಾಸವನ್ನು ಬ್ರಿಟಿಷ್ ಸಾಮ್ರಾಜ್ಯ ಅರಿತುಕೊಂಡಿತು. 1946ರ ಮಧ್ಯದೊಳಗೆ ಎಲ್ಲಾ ರಾಜಕೀಯ ಕಾರಣಕ್ಕಾಗಿ ಬಂಧಿತರಾದವರನ್ನು ಸರ್ಕಾರ ವಿಮೋಚನೆಗೊಳಿಸಿತು. ಭಾರತದ ಸಂಪೂರ್ಣ ಸ್ವಾತಂತ್ರವನ್ನು ಪಡೆಯುವ ಗುರಿಯಿಂದ ಕಾಂಗ್ರೆಸ್ ಸರ್ಕಾರದೊಂದಿಗೆ ಮಾತುಕತೆ ಆರಂಭಿಸಿತು. ಜೂನ್ 3, 1947ರಂದು ಭಾರತದ ಕೊನೆಯ ಬ್ರಿಟಿಷ್ ಗೌರ್ನರ್ ಜನರಲ್ ಲಾರ್ಡ್ ಲೂಯಿ ಮೌಂಟ್ ಬ್ಯಾಟನ್ ಜಾತ್ಯತೀತ ಭಾರತ ಮತ್ತು ಮುಸ್ಲಿಂ ಪಾಕಿಸ್ತಾನ ಎಂದು ಎರಡು ಭಾಗಗಳಾಗಿ ಭಾರತದ ವಿಭಜನೆಯನ್ನು ಪ್ರಕಟಿಸಿದರು. 1947ರ ಆಗಸ್ಟ್ 15ರಂದು ಅಧಿಕಾರ ಹಸ್ತಾಂತರ ಆಯಿತು. ಭಾರತ ಸ್ವತಂತ್ರ ರಾಷ್ಟ್ರವಾಯಿತು. ತ್ರಿವರ್ಣ ಧ್ವಜ ಎಲ್ಲೆಡೆ ಸಡಗರ-ಸಂಭ್ರಮದಿಂದ ಹಾರಾಡಿತು. ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿ ಜವಹಾರ್ ಲಾಲ್ ನೆಹರು ಮತ್ತು ಉಪ ಪ್ರಧಾನಮಂತ್ರಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಲಾರ್ಡ್ ಮೌಂಟ್ ಬ್ಯಾಟನ್ ಅವರನ್ನು ಭಾರತದ ಗೌರ್ನರ್ ಜನರಲ್ ಆಗಿ ಮುಂದುವರೆಯಲು ಆಮಂತ್ರಿಸಿದರು. ಅವರ ಸ್ಥಳವನ್ನು ಜೂನ್ 1948ರಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿ ತುಂಬಿದರು. ಭಾರತೀಯರ ಪಾಲಿಗೆ 30ನೇ ಜನವರಿ 1948 ಘೋರ ದುರಂತದ ದಿನವಾಯಿತು. ಭಾರತೀಯ ಸ್ವಾತಂತ್ರ್ಯ ಆಂದೋಲನದಲ್ಲಿ ರಾಜಕೀಯ ಮತ್ತು ಅಧ್ಯಾತ್ಮಿಕ ನಾಯಕರಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ನಾಥುರಾಮ್ ಗೊಡ್ಸೆ ಗುಂಡಿಗೆ ಬಲಿಯಾದರು.

ಸ್ವತಂತ್ರ ಭಾರತದ ಪಾಲಿಗೆ 30ನೇ ಜನವರಿ 1948 ಕರಾಳ ದಿನ. ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ ದೊರಕಿಸಿಕೊಟ್ಟ ಬಾಪು ಹತ್ಯೆಗೀಡಾದರು. ಸತ್ಯ, ಅಹಿಂಸೆ ಮತ್ತು ಅಸಹಕಾರ ಚಳವಳಿಯಿಂದ ಜಗತ್ತಿನಾದ್ಯಂತ ಮಹಾತ್ಮ ಎಂದೇ ಚಿರಪರಿಚಿತರಾಗಿದ್ದ ಗಾಂಧಿ ಅವರನ್ನು ಹಿಂದು ರಾಷ್ಟ್ರೀಯವಾದಿ ಕಾರ್ಯಕರ್ತ ನಾಥುರಾಮ್ ಗೊಡ್ಸೆ ಗುಂಡಿಕ್ಕಿ ಹತ್ಯೆ ಮಾಡಿದ. ನವದೆಹಲಿಯ ಬಿರ್ಲಾ ಭವನದ ಮೈದಾನದಲ್ಲಿ ತಮ್ಮ ರಾತ್ರಿಯ ನಡಿಗೆಯಲ್ಲಿ ತೊಡಗಿದ್ದ ಬಾಪು ಅವರನ್ನು ಗೊಡ್ಸೆ ಕೊಂದು ಹಾಕಿದ. ಭಾರತದ ಮುಸಲ್ಮಾರ ಪರವಾಗಿ ಗಾಂಧಿ ತಾರತಮ್ಯ ಮಾಡುತ್ತಿದ್ದಾರೆ ಎಂಬುದು ಗೊಡ್ಸೆ ಆರೋಪವಾಗಿತ್ತು. 8ನೇ ನವೆಂಬರ್ 1949ರಲ್ಲಿ ಗೊಡ್ಸೆಯನ್ನು ನೇಣುಗಂಬಕ್ಕೆ ಏರಿಸಲಾಯಿತು. ಬ್ರಿಟಿಷರ ದಬ್ಬಾಳಿಕೆಯ ದಾಸ್ಯ ಸರಪಳಿಗಳಿಂದ ಭಾರತಾಂಬೆಯನ್ನು ಮುಕ್ತಗೊಳಿಸಲು ಹುತಾತ್ಮರು ನಡೆಸಿದ ಹೋರಾಟ, ತ್ಯಾಗ, ಬಲಿದಾನದ ಫಲವಾಗಿ ನಾವು ಇಂದು ಸ್ವಾತಂತ್ರದ ಆನಂದವನ್ನು ಸವಿಯುತ್ತಿದ್ದೇವೆ. ಈ ವೀರರು, ಮತ್ತು ಪ್ರಾತ: ಸ್ಮರಣೀಯರಿಗೆ ನಮ್ಮ ನಮನ ಸಲ್ಲಿಸುತ್ತಾ, ಅವರನ್ನು ಮನದಲ್ಲಿ ಪ್ರತಿದಿನ ಹೆಮ್ಮೆಯಿಂದ ನೆನೆಯುತ್ತಾ ಭವ್ಯ ಭಾರತದ ನಿರ್ಮಾಣಕ್ಕೆ ನಾವೆಲ್ಲ ದೃಢಸಂಕಲ್ಪ ಮಾಡೋಣ.
ಜೈ ಹಿಂದ್
(ಕೃಪೆ : ವಿವಿಧ ಮೂಲಗಳಿಂದ)

► Follow us on –  Facebook / Twitter  / Google+

Facebook Comments

Sri Raghav

Admin