ಅಣ್ಣ-ತಂಗಿಯರ ನಡುವೆ ಬಂಧನ ಬೆಸೆಯುವ ‘ರಕ್ಷಾ ಬಂಧನ’

ಈ ಸುದ್ದಿಯನ್ನು ಶೇರ್ ಮಾಡಿ

Raklsha-bandha-n

ಬೆಂಗಳೂರು, ಆ.18- ಅಣ್ಣ-ತಂಗಿಯರ ಈ ಬಂಧ… ಜನುಮ ಜನುಮಗಳ ಅನುಬಂಧ… ಜೀವಕ್ಕೆ ಕೊರಳು… ದೇಹಕ್ಕೆ ನೆರಳು… ನಾವಾಗಲೆಂದು ಹರಸುತಿದೆ ಈ ರಕ್ಷಾ ಬಂಧನ…
ರಕ್ಷಾಬಂಧನ ಹಬ್ಬದ ದಿನವಾದ ಇಂದು ಸಹೋದರ-ಸಹೋದರಿಯರ ಸಂಬಂಧದ ಬೆಸುಗೆಯ ಸಂಕೇತವಾದ ದಿನ. ಅಣ್ಣ ಎಂದರೆ ಅವಳಿಗೆ ಜೀವ, ಅವನಿಗೂ ಅಷ್ಟೆ ತಂಗಿ ಎಂದರೆ ತನ್ನದೇ ಒಂದು ಭಾಗವಿದ್ದಂತೆ. ಆ ಸಂಬಂಧವೇ ಹಾಗೆ. ಅಲ್ಲಿ ಮೊಗೆದಷ್ಟು ಪ್ರೀತಿ… ಸ್ವಲ್ಪ ಹೊಟ್ಟೆಕಿಚ್ಚು… ಒಮ್ಮೊಮ್ಮೆ ಹೊಡೆದಾಟ… ಆದರೆ, ಇದೆಲ್ಲವನ್ನೂ ಮೀರಿದ ಬಾಂಧವ್ಯ ಒಂದಿದೆಯಲ್ಲ ಅದನ್ನು ಬಣ್ಣಿಸಲಾಗದು.  ಪ್ರತಿ ಅಣ್ಣ-ತಂಗಿಯರಲ್ಲಿನ ಮಧುರ ಭಾವನೆ ಅದು. ಈ ನವಿರಾದ ಭಾವನೆಯೇ ಸಹೋದರ-ಸಹೋದರಿಯರ ಪ್ರೀತಿ. ಅದರ ಸಂಕೇತದ ದಿನವಾದ ಇಂದು ಪರಸ್ಪರ ರಕ್ಷಾ ಬಂಧನ ವಿನಿಮಯ… ತಂಗಿ ಅಣ್ಣನಿಗೆ ಚೆನ್ನಾಗಿರಲೆಂದು ಹಾರೈಸಿ ಅಕ್ಕ ತಮ್ಮನಿಗೆ ಸುಖವಾಗಿರಲೆಂದು ಹರಸಿ ಕೈಗೆ ರಕ್ಷಾ ಬಂಧನ ಕಟ್ಟುತ್ತಾಳೆ.

ಅದಕ್ಕಾಗಿ ಪ್ರೀತಿಯ ಅಣ್ಣ-ತಮ್ಮಂದಿರು, ಆಕ್ಕ-ತಂಗಿಯರಿಗೆ ಉಡುಗೊರೆಗಳನ್ನು ನೀಡುತ್ತಾರೆ. ಈ ಬಾಂಧವ್ಯ ನಿರಂತರವಾಗಿರಲಿ. ಮತ್ತೊಮ್ಮೆ ಪ್ರತಿ ವರ್ಷ ಬರುವ ರಕ್ಷಾ ಬಂಧನದ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಿ. ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಆಚರಿಸುವ ಈ ಹಬ್ಬ ಭ್ರಾತೃತ್ವದ ನಂಟನ್ನು ಬೆಸೆಯುತ್ತದೆ. ಸರ್ವಧರ್ಮೀಯರನ್ನೂ ಒಂದುಗೂಡಿಸುವ ವಿಶಿಷ್ಟ ಹಬ್ಬ ಇದಾಗಿದೆ. ಶ್ರಾವಣದ ನೂಲು ಹುಣ್ಣಿಮೆಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಸೋದರನ ಏಳಿಗೆಗಾಗಿ ಸೋದರಿಯು ಕಟ್ಟುವ ಈ ರಕ್ಷಾ ಬಂಧನ.
ಅಕ್ಕ-ತಂಗಿಯರು ಕಟ್ಟುವ ರಾಖಿಗಿರುವ ಶಕ್ತಿ ಅಮೋಘವಾದದ್ದು. ಇದು ಧರ್ಮ-ಧರ್ಮಗಳನ್ನೂ ಮೀರಿದ್ದು. ಹಿಂದೆ ಯುದ್ಧದ ಸನ್ನಿವೇಶದಲ್ಲಿ ಯೋಧರು ಯುದ್ಧಕ್ಕೆ ತೆರಳುವಾಗ ಯುದ್ಧ ಜಯಿಸಿ ಬರುವಂತೆ ರಕ್ಷಣೆಗಾಗಿ ರಕ್ಷಾ ಬಂಧನವನ್ನು ಸಹೋದರಿಯರರು ಸಹೋದರರಿಗೆ ಕಟ್ಟುತ್ತಿದ್ದರು ಎಂಬ ಇತಿಹಾಸವಿದೆ. ಅಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಈ ರಾಖಿ ಹಬ್ಬಕ್ಕೆ ಸರಿಸುಮಾರು ಆರು ಸಾವಿರ ವರ್ಷಗಳ ಇತಿಹಾಸವಿದೆ. ಕಾಲಕ್ಕೆ ತಕ್ಕಂತೆ ಇದು ಬದಲಾಗುತ್ತ ಬಂದಿದೆ.  ವಿಷ್ಣು ಪತ್ನಿ ಮಹಾಲಕ್ಷ್ಮಿ ಬಲಿ ಚಕ್ರವರ್ತಿಗೆ ರಾಖಿ ಕಟ್ಟಿದ್ದ ಪುರಾಣವಿದೆ.
ಅದಕ್ಕಾಗಿ ಮಹಾಲಕ್ಷ್ಮಿ ವಿಷ್ಣುವನ್ನೇ ಉಡುಗೊರೆಯಾಗಿ ಪಡೆದಳು ಎಂದು ಪುರಾಣದಲ್ಲಿ ಹೇಳಲಾಗಿದೆ.

ಬಲಿ ಚಕ್ರವರ್ತಿ ಅರಮನೆಯಲ್ಲಿ ವಿಷ್ಣು ನೆಲೆಸಿದ್ದ. ಮಹಾಲಕ್ಷ್ಮಿ ಬಲಿ ಚಕ್ರವರ್ತಿಗೆ ರಾಖಿ ಕಟ್ಟಿ ಉಡುಗೊರೆ ಏನು ಬೇಕೆಂದು ಕೇಳಿದಾಗ ಆತನ ಮನೆಯಲ್ಲಿ ನೆಲೆಸಿದ್ದ ವಿಷ್ಣು ಬೇಕೆಂದು ಪಡೆದಳು. ಇಂತಹ ಐತಿಹ್ಯ ಈ ರಾಖಿ ಹಬ್ಬಕ್ಕೆ ಇದೆ.  ಇಂದು ಎಲ್ಲೆಡೆ ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ, ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯಗಳಲ್ಲಿ ರಕ್ಷಾ ಬಂಧವನ್ನು ಕಟ್ಟು ಮೂಲಕ ರಾಖಿ ಹಬ್ಬ ಆಚರಿಸಲಾಗುತ್ತದೆ.

► Follow us on –  Facebook / Twitter  / Google+

Facebook Comments

Sri Raghav

Admin