ರಣಘಟ್ಟ ಚೆಕ್ ಡ್ಯಾಂಗೆ ದೇವೇಗೌಡರ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

DevDam-Devegowda--01

ಬೇಲೂರು, ಅ.8-ಯಗಚಿ ಏತ ನೀರಾವರಿ, ಎತ್ತಿನ ಹೊಳೆ ಯೋಜನೆ ಹಾಗೂ ರಣಘಟ್ಟ ಚೆಕ್ ಡ್ಯಾಂ ಮೂಲಕ ತಾಲೂಕಿನ ಹಳೇಬೀಡು, ಮಾದಿಹಳ್ಳಿ ಹಾಗೂ ಜಾವಗಲ್ ಹೋಬಳಿಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಅನಿರ್ದಿಷ್ಟಾವದಿ ಉಪವಾಸ ಸತ್ಯಗ್ರಾಹ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಥಳಕ್ಕೆ ಬಂದು ಹೇಳಿಕೆ ನೀಡಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ರಣಘಟ್ಟ ಚೆಕ್ ಡ್ಯಾಂಗೆ ದೇವೇಗೌಡರು ಭೇಟಿ ನೀಡಿ ವೀಕ್ಷಿಸಿದರು.

ಈ ವೇಳೆ ಸ್ಥಳೀಯ ಹಾಗೂ ರೈತ ಮುಖಂಡರಿಂದ ಕಾಲುವೆಯ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು, ಹಳೇಬೀಡು ಕೆರೆ ಹಾಗೂ ಸುತ್ತಮುತ್ತಲಿನ ಕೆರೆಗಳಿಗೆ ಇಲ್ಲಿಂದ ನೀರನ್ನು ತೆಗೆದುಕೊಂಡು ಹೋಗಲು ಪ್ರಾಚೀನ ಕಾಲದ ಈ ಕಾಲುವೆಯನ್ನು ದುರಸ್ತಿಗೊಳಿಸ ಬೇಕಿದೆ. ನಾನು ಕಳೆದ 25 ವರ್ಷಗಳಿಂದ ಇಲ್ಲಿಗೆ ಬಂದಿಲ್ಲ. ಅಲ್ಲದೆ ಇಲ್ಲಿನ ರಣಘಟ್ಟ ಚೆಕ್ ಡ್ಯಾಂ ನಿರ್ಮಿಸುವ ಬಗ್ಗೆ ಹಾಗೂ ತಾಲೂಕಿನ ಹಳೇಬೀಡು, ಮಾದಿಹಳ್ಳಿ ಹಾಗೂ ಜಾವಗಲ್ ಹೋಬಳಿಗಳಿಗೆ ನೀರು ಕೊಡುವುದಕ್ಕೆ ಸಾಧ್ಯವಿದೆಯ ಎಂಬುದರ ಬಗ್ಗೆ ರಾಜ್ಯದ ಮುಖ್ಯ ಇಂಜಿನಿಯರ್‍ರನ್ನು ಇಲ್ಲಿಗೆ ಕರೆದು ಕೊಂಡು ಬಂದು ಮಾಹಿತಿ ಪಡೆದುಕೊಂಡು ನಂತರ ಯಾವುದನ್ನು ಹೇಳುತ್ತೇನೆ ಎಂದರು.

ಇಲ್ಲಿನ ಚೆಕ್ ಡ್ಯಾಂನ್ನು ಇನ್ನೂ ಏರಿಸಿದರೆ ಇಲ್ಲಿನ ಹಿಂಭಾಗದ ರೈತರ ಜಮೀನುಗಳು ಹಿನ್ನೀರಿನಿಂದ ಮುಳುಗುತ್ತದೆ. ಆದರೆ ಇದರ ಬದಲಿಗೆ ಈಗಿರುವುದನ್ನೆ ಸರಿಪಡಿಸಿ ಇಲ್ಲಿನ ನೀರನ್ನು ಲಿಫ್ಟ್ ಮಾಡಿ ನಾಲೆ ಮೂಲಕ ಈ ಭಾಗದ ಹೋಬಳಿಗಳ ಕೆರೆಗಳಿಗೆ ಹರಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಮುಖ್ಯ ಇಂಜಿನಿಯರ್‍ಗಳನ್ನು ಇಲ್ಲಿಗೆ ಕರೆತಂದು ಮಾಹಿತಿ ಪಡೆದು ಹೇಳುತ್ತೇನೆ. ಇದು ತಕ್ಷಣಕ್ಕೆ ಆಗುವ ಕೆಲಸವಲ್ಲ. ಕುಳಿತು ಯಾರು ಬೇಕಾದರು ಹೇಳ ಬಹುದು ಆದರೆ ಈ ಭಾಗಕ್ಕೆ ನೀರು ಕೊಡುವುದಕ್ಕೆ ನೀರಾವರಿ ಸಚಿವರ ಜೊತೆ ಮಾತನಾಡಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹೆಚ್‍ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಎ.ನಾಗರಾಜ್, ತಾಪಂ ಅಧ್ಯಕ್ಷ ಹರೀಶ್, ಜಿಪಂ ಸದಸ್ಯೆ ಲತಾಮಂಜೇಶ್ವರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್, ತಾ,ಅಧ್ಯಕ್ಷ ತೋಚ.ಸುಬ್ಬರಾಯ, ಕಾರ್ಯದರ್ಶಿ ಮಹೇಶ್, ಎಪಿಎಂಸಿ ಅಧ್ಯಕ್ಷ ವಿಷ್ಣುಕುಮಾರ್, ಹಾಲಿನ ಡೈರಿ ನಿರ್ದೇಶಕ ರಾಮಚಂದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin