ರಣಜಿ ಕ್ರಿಕೆಟ್ : ಅಸ್ಸಾಮ್ ವಿರುದ್ಧ ಕರ್ನಾಟಕಕ್ಕೆ 10 ವಿಕೆಟ್‍ಗಳ ಭರ್ಜರಿ ಜಯ

ಈ ಸುದ್ದಿಯನ್ನು ಶೇರ್ ಮಾಡಿ

Ranji-Cricket

ಮುಂಬೈ, ಅ. 30- ದೀಪಾವಳಿ ಹಬ್ಬದ ದಿನವೇ ಅಸ್ಸಾಮ್ ವಿರುದ್ಧ ಕರ್ನಾಟಕ ತಂಡವು 10 ವಿಕೆಟ್‍ಗಳಿಂದ ವಿಜಯೋತ್ಸವವನ್ನು ಆಚರಿಸಿಕೊಂಡಿದೆ. ಕರ್ನಾಟಕದ ಸ್ಪಿನ್ನರ್ ಮೋಡಿಯಿಂದ ಅಸ್ಸಾಮ್ ತಂಡವು ದ್ವಿತೀಯ ಇನ್ನಿಂಗ್ಸ್‍ನಲ್ಲಿ 264 ರನ್‍ಗಳಿಗೆ ಸರ್ವಪತನ ಕಾಣುವ ಮೂಲಕ ಕರ್ನಾಟಕಕ್ಕೆ 19 ರನ್‍ಗಳ ಗುರಿಯನ್ನು ನೀಡಿತು. ಮೂರನೆ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 48 ರನ್ ಗಳಿಸಿದ್ದ ಅಸ್ಸಾಮ್ ತಂಡಕ್ಕೆ ಇಂದು ಬೆಳಗ್ಗೆಯಿಂದಲೂ ರಾಜ್ಯದ ಸ್ಪಿನ್ ಜೋಡಿಯಾದ ಶ್ರೇಯಾಸ್ ಗೋಪಾಲ್ ಹಾಗೂ ಗೌತಮ್ ಅವರು ಲಗಾಮು ಹಾಕಿದರು.
ಅಸ್ಸಾಮ್ ತಂಡವು 71 ರನ್ ಗಳಿಸಿದ್ದ ಗೋಕುಲ್ ಶರ್ಮಾರ ವಿಕೆಟ್ ಕೆಡವಿದ ಕೆ.ಗೌತಮ್ ನಂತರ ತಮ್ಮ ಬೌಲಿಂಗ್ ಗತಿಯಿಂದ ಆರಂಭಿಕ ಆಟಗಾರ ರಾಹುಲ್(44 ರನ್, 7 ಬೌಂಡರಿ)ಗೂ ಬ್ರೇಕ್ ಹಾಕಿದರು.

ನಂತರ ಬಂದ ತರ್ಜೀಂದರ್ ಸಿಂಗ್ (14 ರನ್), ಸೈಯದ್ ಮೊಹಮ್ಮದ್ (0 ರನ್) ಗಳಿಸಿ ಬಲು ಬೇಗ ಪೆವಿಲಿಯನ್ ಸೇರಿದರೂ, ಅಮಿತ್ ವರ್ಮಾ ಈ ಸ್ಪಿನ್ ಜೋಡಿಯನ್ನು ದಿಟ್ಟವಾಗಿ ಎದುರಿಸಿ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು. ಈ ನಡುವೆ ಸ್ವರೂಪಂ ಪುರ್ಕಾಸ್ತ 33 ರನ್ ಗಳಿಸಿ ಔಟಾದ ಬಳಿಕ, 8 ವಿಕೆಟ್‍ಗೆ ಜೊತೆಗೂಡಿದ ಅರೂಪ್ ದಾಸ್ ಹಾಗೂ ಅಮಿತ್‍ವರ್ಮಾ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತರೂ 74 ರನ್ ಗಳಿಸಿದ ಅಮಿತ್ ವರ್ಮಾ ಗೌತಮ್‍ರ ಬೌಲಿಂಗ್ ಚಮತ್ಕಾರಕ್ಕೆ ತಲೆದೂಗಿದರು. ನಂತರ ಅರುಪ್ ದಾಸ್‍ರನ್ನು ಕೂಡ ಗೌತಮ್. ಕೆ ಪೆವಿಲಿಯನ್‍ನತ್ತ ಹೆಜ್ಜೆ ಹಾಕುವಂತೆ ಮಾಡಿದರು.

ಅಸ್ಸಾಮ್ ತಂಡವು 238 ರನ್‍ಗಳಿಗೆ 9 ವಿಕೆಟ್‍ಗಳನ್ನು ಕಳೆದುಕೊಂಡರೂ ಅಂತಿಮ ವಿಕೆಟ್‍ಗೆ ಅಬು ನಿಚ್ಚಿಮ್ ಹಾಗೂ ಕಿಸಾನ್ ದಾಸ್ 26 ರನ್‍ಗಳ ಜೊತೆಯಾಟ ನೀಡುವ ಮೂಲಕ ಇನ್ನಿಂಗ್ಸ್ ಮುನ್ನಡೆ ತಂದುಕೊಟ್ಟರು. ಆದರೆ 84.6 ಓವರ್ ಎಸೆದ ಶ್ರೇಯಾಸ್ ಗೋಪಾಲ್ ಅಬು ನಿಚ್ಚಿಮ್ (23 ರನ್, 2 ಬೌಂಡರಿ, 1 ಸಿಕ್ಸರ್)ರನ್ನು ಔಟ್ ಮಾಡುವ ಮೂಲಕ ಅಸ್ಸಾಮ್ 264 ರನ್‍ಗಳಿಗೆ ಸರ್ವಪತನ ಕಂಡಿತು.

ಗೆಲುವಿನ ದಡ ಮುಟ್ಟಿಸಿದ ಮಯಾಂಕ್- ಸಮರ್ಥ್

ಅಸ್ಸಾಮ್ ನೀಡಿದ 19 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕದ ಆರಂಭಿಕ ಆಟಗಾರರಾದ ಮಯಾಂಕ್ ಅಗರ್‍ವಾಲ್ (17ರನ್, 4 ಬೌಂಡರಿ) ಹಾಗೂ ಸಮರ್ಥ್.ಆರ್ (4 ರನ್, 1 ಬೌಂಡರಿ) 3 ಓವರ್‍ಗಳಲ್ಲಿ 21 ರನ್‍ಗಳನ್ನು ಕಲೆ ಹಾಕುವ ಮೂಲಕ ಕರ್ನಾಟಕವನ್ನು ಗೆಲುವಿನ ದಡ ಮುಟ್ಟಿಸಿದರು.  ಈ ಗೆಲುವಿನ ಮೂಲಕ ಕರ್ನಾಟಕ ಒಟ್ಟು 15 ಅಂಕಗಳನ್ನು ಕಲೆ ಹಾಕುವ ಮೂಲಕ ಬಿ ಗುಂಪಿನಲ್ಲಿ ಮೊದಲ ಸ್ಥಾನಕ್ಕೆ ಏರುವ ಮೂಲಕ ದೀಪಾವಳಿಯ ಸಿಹಿಯನ್ನು ಹೆಚ್ಚಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin