ರಣರಂಗವಾದ ಫ್ರೀಡಂಪಾರ್ಕ್ : ವಾಗ್ವಾದ, ಘರ್ಷಣೆ, ಲಾಠಿ ಪ್ರಹಾರ

ಈ ಸುದ್ದಿಯನ್ನು ಶೇರ್ ಮಾಡಿ

PUR_8160

ಬೆಂಗಳೂರು,ಸೆ.5-ಕಳೆದ ಒಂದು ವಾರದಿಂದ ಜಿಟಿಜಿಟಿ ಮಳೆಗೆ ಸಿಲುಕಿದ್ದ ಉದ್ಯಾನನಗರ ಬೆಂಗಳೂರು ಇಂದು ಅಕ್ಷರಶಃ ಅಗ್ನಿಕುಂಡವಾಗಿತ್ತು. ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಇಂದು ಹಮ್ಮಿಕೊಂಡಿದ್ದ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಪೊಲೀಸರು ಅನುಮತಿ ನೀಡದ ಕಾರಣ ಯುವ ಮೋರ್ಚಾ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಫ್ರೀಡಂಪಾರ್ಕ್ ಬಳಿ ಭಾರೀ ಸಂಘರ್ಷವೇ ನಡೆಯಿತು.  ಬೈಕ್ ರ್ಯಾಲಿಗೆ ಅನುಮತಿ ನೀಡಬೇಕೆಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪಟ್ಟು ಹಿಡಿದರೆ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ ಸಮಸ್ಯೆ ಮುಂದಿಟ್ಟುಕೊಂಡು ಪೊಲೀಸರು ಅನುಮತಿ ನೀಡಲಿಲ್ಲ.

ಇದರಿಂದ ಕೆರಳಿದ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದಕ್ಕಿಳಿದರು.  ಪರಿಸ್ಥಿತಿ ನಿಭಾಯಿಸಲು ಬಿಜೆಪಿಯ ಕೆಲ ಮುಖಂಡರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಯಿತು. ಸರ್ಕಾರದ ಈ ಕ್ರಮಕ್ಕೆ ಯುವ ಮೋರ್ಚಾ ಕಾರ್ಯಕರ್ತರು ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

PUR_8270

ರಣರಂಗವಾದ ಸ್ವಾತಂತ್ರ್ಯ ಉದ್ಯಾನವನ:

ಬೆಳಗ್ಗೆ 10.30ಕ್ಕೆ ಸರಿಯಾಗಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ , ಮುಖಂಡರಾದ ಅಶೋಕ್, ಶೋಭಾ ಕರಂದ್ಲಾಜೆ ಮತ್ತಿತರರು ಚಾಲನೆ ನೀಡಬೇಕಿತ್ತು. ಆದರೆ ಬೆಳಗ್ಗೆ 6 ಗಂಟೆಯಿಂದಲೇ ಒಂದು ಕಿ.ಮೀ ಸುತ್ತಮುತ್ತ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.  ಆದರೂ ಶಾಸಕರಾದ ಆರ್.ಅಶೋಕ್, ವೈ.ಎ.ನಾರಾಯಣಸ್ವಾಮಿ , ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ , ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯನಾಯ್ಡು , ವಿ.ಸೋಮಣ್ಣ , ವಿಧಾನಪರಿಷತ್ ಸದಸ್ಯ ಪುಟ್ಟಸ್ವಾಮಿ ಸೇರಿದಂತೆ ಮತ್ತಿತರ ಮುಖಂಡರು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಿಂದ ಕಾರ್ಯಕರ್ತರ ಜೊತೆ ಫ್ರೀಡಂಪಾರ್ಕ್‍ನತ್ತ ಧಾವಿಸಲು ಮುಂದಾದರು.

ಬಸವನಗುಡಿ ಕ್ಷೇತ್ರದಿಂದ ಆಗಮಿಸುತ್ತಿದ್ದ ರವಿ ಸುಬ್ರಹ್ಮಣ್ಯ ನೇತೃತ್ವದಲ್ಲಿ 60 ಮಂದಿ ಕಾರ್ಯಕರ್ತರನ್ನು ಟೌನ್‍ಹಾಲ್ ಬಳಿ ಪೊಲೀಸರು ವಶಕ್ಕೆ ಪಡೆದರೆ, ಹೆಬ್ಬಾಳ , ಮಲ್ಲೇಶ್ವರಂ ಕಡೆಯಿಂದ ಬರುತ್ತಿದ್ದ ಶೋಭಾ ಕರಂದ್ಲಾಜೆ, ಆರ್.ಅಶೋಕ್ ಅವರನ್ನು ಮೌರ್ಯ ಹೋಟೆಲ್ ಬಳಿ ತಡೆಯಲಾಯಿತು.
ಇನ್ನು ಸತೀಶ್ ರೆಡ್ಡಿ , ಸೋಮಣ್ಣ , ಬಿಬಿಎಂಪಿ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಸೇರಿದಂತೆ ಪಾಲಿಕೆ ಸದಸ್ಯರನ್ನು ಮಾರ್ಗಮಧ್ಯೆಯೇ ಪೊಲೀಸರು ತಡೆಹಿಡಿದರು.

PUR_8289

ತೊಡೆ ತಟ್ಟಿದ ಕಾರ್ಯಕರ್ತರು:

ಪೊಲೀಸರ ಅನುಮತಿಯನ್ನು ಉಲ್ಲಂಘಿಸಿ ಶೋಭಾ ಕರಂದ್ಲಾಜೆ, ಅಶೋಕ್, ಸತೀಶ್ ರೆಡ್ಡಿ , ಯುವ ಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ ಮತ್ತಿತರ ಮುಖಂಡರು ಬೈಕ್ ಮೂಲಕ ಫ್ರೀಡಂಪಾರ್ಕ್‍ಗೆ ಆಗಮಿಸಿದರು.  ಅನುಮತಿ ಉಲ್ಲಂಘಿಸಿ ರ್ಯಾಲಿ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದರೂ ಯಾವುದಕ್ಕೂ ಜಗ್ಗದೆ ನೂರಾರು ಕಾರ್ಯಕರ್ತರು ರ್ಯಾಲಿ ಉದ್ಘಾಟಿಸಲು ಮುಂದಾದರು. ಈ ವೇಳೆ ಪೊಲೀಸರು ಮತ್ತು ಯುವ ಮೋರ್ಚಾ ಕಾರ್ಯಕರ್ತರ ನಡುವೆ ಭಾರೀ ಮಾತಿನ ಚಕಮಕಿ, ತಳ್ಳಾಟ, ನೂಕಾಟ, ಗದ್ದಲ ಏರ್ಪಟ್ಟು ಗೊಂದಲ ಸೃಷ್ಟಿಯಾಯಿತು.

ನಾವು ಬೈಕ್ ರ್ಯಾಲಿ ನಡೆಸಲು 15 ದಿನಗಳ ಹಿಂದೆಯೇ ನಗರ ಪೊಲೀಸ್ ಆಯುಕ್ತರು ಹಾಗೂ ಸಂಬಂಧಪಟ್ಟ ಠಾಣೆ ವ್ಯಾಪ್ತಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈಗ ಇದ್ದಕ್ಕಿದ್ದಂತೆ ಸರ್ಕಾರದಿಂದ ನಿರ್ದೇಶನ ಬರುತ್ತಿದ್ದಂತೆ ರ್ಯಾಲಿ ನಡೆಸಲು ಅನುಮತಿ ನೀಡುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಇದೇನು ತೊಘಲಕ್ ಸರ್ಕಾರವೇ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.  ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ ಸಮಸ್ಯೆಯನ್ನು ನಿಯಂತ್ರಿಸಲು ನಾವು ಬೈಕ್ ರ್ಯಾಲಿಗೆ ಅನುಮತಿ ನೀಡಿಲ್ಲ. ಕಾರ್ಯಕರ್ತರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕೆಂದು ಪೊಲೀಸರು ಮನವೊಲಿಸಲು ಮುಂದಾದರು. ಈ ವೇಳೆ ಮತ್ತೆ ಸ್ಥಳದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.

Freedom-Park--01

ಲಘು ಲಾಠಿ ಪ್ರಹಾರ:

ಸರ್ಕಾರ ಮತ್ತು ಪೊಲೀಸರ ವಿರುದ್ಧ ಕಾರ್ಯಕರ್ತರು ಒಂದೇ ಸಮನೆ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಿದ್ದರಿಂದ ಪರಿಸ್ಥಿತಿ ಕೈ ಮೀರುವ ಹಂತ ತಲುಪಿತು. ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಆರ್.ಅಶೋಕ್, ಶೋಭಾ ಕರಂದ್ಲಾಜೆ ಮತ್ತಿತರ ಮುಖಂಡರು ರ್ಯಾಲಿಗೆ ಉದ್ಘಾಟಿಸಲು ಮುಂದಾದರು.
ಈ ಹಂತದಲ್ಲಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಲು ಮುಂದಾಗುತ್ತಿದ್ದಂತೆ ಪರಿಸ್ಥಿತಿ ಕೈ ಮೀರಿತು. ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಲಘು ಲಾಠಿ ಪ್ರಹಾರ ನಡೆಸಿದರು.

ಮುಖಂಡರ ಬಂಧನ:

ಕಾನೂನು ಉಲ್ಲಂಘಿಸಿ ಬೈಕ್ ರ್ಯಾಲಿಗೆ ನಡೆಸಲು ಮುಂದಾದ ಬಿಜೆಪಿ ಮುಖಂಡರಾದ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ವಿ.ಸೋಮಣ್ಣ , ನಂದೀಶ್ ರೆಡ್ಡಿ , ವೈ.ಎ.ನಾರಾಯಣಸ್ವಾಮಿ , ರವಿಸುಬ್ರಹ್ಮಣ್ಯ ಸೇರಿದಂತೆ ಅನೇಕರನ್ನು ಮುಂಜಾಗ್ರತೆ ಕ್ರಮವಾಗಿ ವಶಕ್ಕೆ ಪಡೆಯಲಾಯಿತು.
ಇದಕ್ಕೂ ಮುನ್ನ ಫ್ರೀಡಂಪಾರ್ಕ್ ಬಳಿ ಬರುತ್ತಿದ್ದ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರನ್ನು ಪೊಲೀಸರು ಅಲ್ಲಲ್ಲೆ ತಡೆದು ವಶಕ್ಕೆ ಪಡೆದಿದ್ದಾರೆ.

ಬೈಕ್‍ಗಳ ವಶ:  ಇನ್ನು ಪ್ರತಿಭಟನಾ ರ್ಯಾಲಿಗೆ ಬಳಸಿದ್ದ 30ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin