ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬಾಳ್ಕರ್ ಗೆ ಐಟಿ ಶಾಕ್

ಈ ಸುದ್ದಿಯನ್ನು ಶೇರ್ ಮಾಡಿ

Laxmi-Hebbalker

ಬೆಳಗಾವಿ,ಜ.19-ನೋಟು ನಿಷೇಧದ ನಂತರ ದಾಳಿ ಮುಂದುವರೆಸಿರುವ ಆದಾಯ ತೆರಿಗೆ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿ ಹೊಳಿ, ಸಹೋದರ ಲಖನ್ ಜಾರಕಿ ಹೊಳಿ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬಾಳ್ಕರ್ ಹಾಗೂ ಕಾಂಗ್ರೆಸ್ ಮುಖಂಡ ಜಾವೀದ್ ಮುಲ್ಲಾ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿಪತ್ರಗಳು, ಹಣ, ಆಭರಣ ಪತ್ತೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.  1000, 500 ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶ್ರೀಮಂತರನ್ನು ಗುರಿಯಾಗಿರಿಸಿಕೊಂಡು ದಾಳಿಯನ್ನು ಮುಂದುವರೆಸಿದ್ದಾರೆ.

ಈಗಾಗಲೇ ಕರ್ನಾಟಕದಲ್ಲಿ ಹಲವೆಡೆ ಐಟಿ ದಾಳಿಗಳು ನಡೆದಿವೆ. ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರ ಪರಮಾಪ್ತರಾದ ಜಯಚಂದ್ರ ಹಾಗೂ ಚಿಕ್ಕರಾಯಪ್ಪ ಮತ್ತು ಹಲವು ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆದಿತ್ತು. ಇದಲ್ಲದೆ ಚಿತ್ರನಟ ದೊಡ್ಡಣ್ಣ ಅವರ ಅಳಿಯ ಕ್ಯಾಸಿನೊ ಕಿಂಗ್ ವೀರೇಂದ್ರ ಅವರ ನಿವಾಸದ ಮೇಲೆ ದಾಳಿ ಮಾಡಿ ಬಾತ್‍ರೂಮ್‍ನ ಸೀಕ್ರೆಟ್ ಲಾಕರ್‍ನಲ್ಲಿ ಬಚ್ಚಿಟ್ಟಿದ್ದ ಕೋಟ್ಯಂತರ ಹಣ, ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದರು.  ಜಾರಿ ನಿರ್ದೇಶನಾಲಯ ಸಿಬಿಐ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಕಪ್ಪು ಹಣವನ್ನು ಪಿಂಕ್ ಮಾಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬ್ಯಾಂಕ್ ಅಧಿಕಾರಿಗಳ ಮನೆ ಮೇಲೂ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ನವೆಂಬರ್ 8ರ ನಂತರ ಐಟಿ ಅಧಿಕಾರಿಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದು, ದೇಶದೆಲ್ಲೆಡೆ ದಾಳಿ ಮುಂದುವರೆದಿದ್ದು, ಸಾವಿರಾರು ಕೋಟಿ ರೂ. ಅಕ್ರಮ ಹಣ, ಸಂಪತ್ತನ್ನು ವಶಪಡಿಸಿಕೊಳ್ಳಲಾಗಿತ್ತು. ಈಗ ಮತ್ತೆ ದಾಳಿ ಮುಂದುವರೆದಿದ್ದು, ಕರ್ನಾಟಕದ ಸಚಿವರ ಮನೆಯ ಮೇಲೆಯೇ ಐಟಿ ದಾಳಿ ನಡೆದಿದೆ.  ಬೆಳಗಾವಿಯ ಪ್ರಭಾವಿ ಸಚಿವರಾದ ರಮೇಶ್ ಜಾರಕಿಹೊಳಿ ಹಾಗೂ ಸಹೋದರರ ಮನೆ ಮತ್ತು ಕಚೇರಿಗಳನ್ನು ಐಟಿ ಅಧಿಕಾರಿಗಳು ಜಾಲಾಡಿದ್ದಾರೆ. ಇದಲ್ಲದೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಲಕ್ಷ್ಮಿ ಹೆಬಾಳ್ಕರ್ ಅವರ ನಿವಾಸ, ಕಚೇರಿ ಹಾಗೂ ಸಕ್ಕರೆ ಕಂಪನಿ ನಿರ್ದೇಶಕರಾಗಿರುವ ಕಚೇರಿ, ನಿವಾಸ ಎಲ್ಲೆಡೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಜಾವೀದ್ ಮುಲ್ಲಾ ಅವರ ನಿವಾಸದ ಮೇಲೂ ಕೂಡ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ.
ನೋಟು ನಿಷೇಧ ವಿರೋಧಿಸಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಎಲ್ಲಾ ಜಿಲ್ಲಾ ಮತ್ತು ಮಹಾನಗರಗಳಲ್ಲಿ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ಐಟಿ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ ಎಂದು ನಾಯಕರು, ಕೆಲ ಮುಖಂಡರು ಆರೋಪಿಸಿದ್ದಾರೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin