ರಮೇಶ್-ಸುರೇಶ್ ಇಬ್ಬರಲ್ಲಿ ಯಾರಾಗಲಿದ್ದಾರೆ ಸ್ಪೀಕರ್..?

ಈ ಸುದ್ದಿಯನ್ನು ಶೇರ್ ಮಾಡಿ

Suresha-Ramesha-Speaker

ಬೆಂಗಳೂರು, ಮೇ 24- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಸುಭದ್ರ ಸರ್ಕಾರಕ್ಕಾಗಿ ಮಹತ್ವದ ಪಾತ್ರ ವಹಿಸುವ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆಯುತ್ತಿದೆ.  ಇಂದು 12 ಗಂಟೆಗೆ ನಾಮಪತ್ರ ಸಲ್ಲಿಸಲು ಅಂತಿಮ ಗಡುವಾಗಿದ್ದು, ಕಾಂಗ್ರೆಸ್‍ನಿಂದ ಮಾಜಿ ಸಚಿವ ಹಾಗೂ ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್‍ಕುಮಾರ್, ಬಿಜೆಪಿಯಿಂದ ಮಾಜಿ ಸಚಿವ ಸುರೇಶ್‍ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.

ನಾಳೆ ವಿಧಾನಸಭಾಧ್ಯಕ್ಷರ ಆಯ್ಕೆಗೆ ವಿಧಾನಸಭೆಯಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ಅವಿರೋಧ ಆಯ್ಕೆಯ ಸಾಧ್ಯತೆ ಕ್ಷೀಣಿಸಿದ್ದು, ಚುನಾವಣೆ ಅನಿವಾರ್ಯವಾಗುವ ಸಾಧ್ಯತೆ ಇದೆ. ಸಂಖ್ಯಾಬಲ ಆಧರಿಸಿದರೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಹೆಚ್ಚಿನ ಬಲ ಇದೆ. ಬಿಜೆಪಿ 104 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್ 78, ಜೆಡಿಎಸ್ 37, ಇಬ್ಬರು ಪಕ್ಷೇತರರು ಸೇರಿ 117 ಸ್ಥಾನಗಳನ್ನು ಹೊಂದಿದೆ. ಚುನಾವಣೆ ವೇಳೆ ಯಾವುದೇ ಅಡ್ಡಮತದಾನ ನಡೆಯದೇ ಇದ್ದರೆ ರಮೇಶ್‍ಕುಮಾರ್ ಅವರ ಆಯ್ಕೆ ಖಚಿತವಾಗಲಿದೆ.

ಬಿಜೆಪಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ವಿಶ್ವಾಸಮತಯಾಚನೆಗೆ ಸೋಲುಣಿಸುವುದಾಗಿ ಪದೇ ಪದೇ ಹೇಳುತ್ತಿದ್ದು, ಆಪರೇಷನ್ ಕಮಲದ ಆತಂಕದಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಇಂದಿಗೂ ರೆಸಾರ್ಟ್‍ನಲ್ಲೇ ತಂಗಿದ್ದಾರೆ.

ವಿಪ್ ಜಾರಿ:
ನಾಳೆ ವಿಧಾನಸಭೆಯಲ್ಲಿ ನಡೆಯಲಿರುವ ವಿಧಾನಸಭಾಧ್ಯಕ್ಷ ಆಯ್ಕೆ ಮತ್ತು ವಿಶ್ವಾಸಮತಯಾಚನೆಯಲ್ಲಿ ಭಾಗವಹಿಸಿ ತಮ್ಮ ಪಕ್ಷದ ಪರವಾಗಿ ಮತ ಹಾಕುವಂತೆ ಮೂರು ಪಕ್ಷಗಳು ವಿಪ್ ಜಾರಿ ಮಾಡಿವೆ.  ಬಿಜೆಪಿ ತನ್ನ ಪಕ್ಷದ ಶಾಸಕರಿಗೆ ವಿಪ್ ನೀಡಿ, ವಿಧಾನಸಭಾಧ್ಯಕ್ಷರ ಚುನಾವಣೆಯಲ್ಲಿ ಸುರೇಶ್‍ಕುಮಾರ್ ಪರವಾಗಿ ಮತ ಹಾಕಬೇಕು. ವಿಶ್ವಾಸಮತಯಾಚನೆ ವಿರುದ್ಧವಾಗಿ ಮತ ಚಲಾಯಿಸಬೇಕೆಂದು ವಿಪ್ ನೀಡಿದೆ.

ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ವಿಧಾನಸಭಾಧ್ಯಕ್ಷರ ಚುನಾವಣೆಯಲ್ಲಿ ರಮೇಶ್‍ಕುಮಾರ್ ಪರ ಮತಹಾಕಬೇಕು. ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಕುಮಾರಸ್ವಾಮಿ ಪರವಾಗಿ ಮತ ಚಲಾಯಿಸುವಂತೆ ವಿಪ್ ನೀಡಿವೆ. ಈ ಮೂರು ಪಕ್ಷಗಳಲ್ಲೂ ಇನ್ನೂ ಮುಖ್ಯಸಚೇತಕರ ನೇಮಕವಾಗದ ಕಾರಣ ಪಕ್ಷದ ರಾಜ್ಯಾಧ್ಯಕ್ಷರ ಹೆಸರಿನಲ್ಲೇ ವಿಪ್‍ಗಳು ಜಾರಿಯಾಗುತ್ತಿವೆ. ನಾಳೆ ಮಧ್ಯಾಹ್ನದ ವೇಳೆಗೆ ಸಭಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮುಗಿಯಲಿದ್ದು, ನಂತರ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ. ಒಂದು ದಿನದ ನಾಳೆಯ ಆಧಿವೇಶನ ಸಮ್ಮಿಶ್ರ ಸರ್ಕಾರಕ್ಕೆ ಅತ್ಯಂತ ಮಹತ್ವದ ದಿನವಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಇದ್ದ ಆತಂಕದ ವಾತಾವರಣ ತಿಳಿಯಾಗಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ ವಿಶ್ವಾಸಮತ ಗೆಲ್ಲುವ ನಿರಾಳತೆಯಲ್ಲಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಉಭಯ ಪಕ್ಷಗಳ ಶಾಸಕರನ್ನು ರೆಸಾರ್ಟ್‍ನಲ್ಲೇ ಇರಿಸಲಾಗಿದೆ. ಈವರೆಗೂ 19 ಮಂದಿ ಸ್ಪೀಕರ್‍ಗಳಾಗಿ ಕೆಲಸ ಮಾಡಿದ್ದು, ನಾಳೆ ನಡೆಯುವ ಚುನಾವಣೆಯಲ್ಲಿ 20ನೇ ಸ್ಪೀಕರ್ ಆಯ್ಕೆಯಾಗುತ್ತಾರೆ. ಚುನಾವಣೆಯಲ್ಲಿ ರಮೇಶ್‍ಕುಮಾರ್ ಆಯ್ಕೆಯಾಗಿದ್ದೇ ಆದರೆ ವಿಧಾನಸಭೆಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಕೆಲಸ ಮಾಡುವ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಹಿಂದೆ 1994ರ ಡಿಸೆಂಬರ್ 27ರಿಂದ 1999ರ ಅಕ್ಟೋಬರ್ 24ರವರೆಗೆ ವಿಧಾನಸಭಾಧ್ಯಕ್ಷರಾಗಿ ರಮೇಶ್‍ಕುಮಾರ್ ಕೆಲಸ ಮಾಡಿದ್ದರು. ಈವರೆಗೂ ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

Facebook Comments

Sri Raghav

Admin