ರಮ್ಯಾ ಪಾಕಿಸ್ತಾನಕ್ಕೆ ಹೋಗಿ ನೆಲೆಸಲಿ : ಜಗ್ಗೇಶ್ ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

Ramya

ಬೆಂಗಳೂರು, ಆ.21-ಪಾಕಿಸ್ತಾನ ಪಾಪಿ ಸ್ಥಾನವಲ್ಲ, ಅದು ನರಕವೂ ಅಲ್ಲ. ಅದೂ ಒಂದು ಒಳ್ಳೆಯ ದೇಶ. ಅಲ್ಲಿರುವ ಜನರು ನಮ್ಮಂತೆಯೇ ಇದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಅವರ ವಿರುದ್ಧ ರಾಜ್ಯದ ವಿವಿಧೆಡೆ ಆಕ್ರೋಶ ಭುಗಿಲೆದ್ದಿದೆ. ಭಾರತದ ಶತ್ರುದೇಶ ಪಾಕಿಸ್ತಾನವನ್ನು ಹೊಗಳಿರುವ ರಮ್ಯಾ ಅವರು ಅಲ್ಲಿಯೇ ಹೋಗಿ ನೆಲೆಸಲಿ. ಈ ದೇಶದಲ್ಲಿ ಇರುವುದು ಬೇಡ ಎಂದು ಬಿಜೆಪಿ ಮುಖಂಡರು ಹಲವು ಸಂಘಟನೆಗಳವರು ಕಿಡಿಕಾರಿದ್ದು, ವಿವಿಧೆಡೆ ಇಂದು ರಮ್ಯಾ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿವೆ. ಮೈಸೂರು, ಮಂಡ್ಯದಲ್ಲಿ ಮಾಜಿ ಸಂಸದೆ ರಮ್ಯಾ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಮೈಸೂರಿನಲ್ಲಿ ಅವರ ಭಾವಚಿತ್ರಕ್ಕೆ ಬೆಂಕಿ ಇಟ್ಟು ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ನರಕ ಅಲ್ಲ, ಅದೊಂದು ಒಳ್ಳೆಯ ದೇಶ. ಮನೋಹರ್ ಪಾರಿಕ್ಕರ್ ಹೇಳಿರುವಂತೆ ನರಕ ಎಂಬುದು ಶುದ್ಧ ಸುಳ್ಳು. ಅಲ್ಲಿನ ಜನ ನಮ್ಮಂತೆಯೇ ಇದ್ದಾರೆ, ಚೆನ್ನಾಗಿ ಮಾತಾಡಿಸುತ್ತಾರೆ ಎಂಬ ರಮ್ಯಾ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಚಿತ್ರನಟ ಜಗ್ಗೇಶ್, ರಾಹುಲ್ಗಾಂಧಿ, ಸೋನಿಯಾಗಾಂಧಿ, ಪರಮೇಶ್ವರ್ ಅವರೊಂದಿಗೆ ರಮ್ಯಾ ಅವರು ಪಾಕಿಸ್ತಾನಕ್ಕೇ ಹೋಗಿ ನೆಲೆಸಲಿ. ಶತ್ರು ದೇಶವನ್ನು ಹೊಗಳಿದರೆ ನಮಗೆ ನೋವಾಗುತ್ತದೆ ಎಂದು ಹೇಳಿದ್ದಾರೆ. ಆಮ್ನೆಸ್ಟಿ ಸಂಘಟನೆಯ ದೇಶದ್ರೋಹದ ವಿರುದ್ಧ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಎಬಿವಿಪಿ ಕಾರ್ಯಕರ್ತರು ಕೂಡ ರಮ್ಯಾ ಅವರ ಧರಣೆಯನ್ನು ಖಂಡಿಸಿದ್ದಾರೆ.

ಕೂಡಲೇ ಅವರು ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಇಂದು ಎಬಿವಿಪಿ ಪ್ರತಿಭಟನೆಗೆ ಬೆಂಬಲ ನೀಡಲು ಆಗಮಿಸಿದ ನಿವೃತ್ತ ಸೈನಿಕರು ಪಾಕಿಸ್ತಾನವನ್ನು ಪ್ರಶಂಸಿಸಿದ ಚಿತ್ರನಟಿ, ಮಾಜಿ ಸಂಸದೆ ರಮ್ಯಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.  ಪಾಕಿಸ್ತಾನದ ಮನಸ್ಥಿತಿ ಏನೆಂಬುದನ್ನು ಅರಿಯದೆ ಈ ರೀತಿ ಹೇಳಿಕೆ ನೀಡಿರುವುದು ಬಾಲಿಶವಾಗಿದೆ ಎಂದು ನಿವೃತ್ತ ಕರ್ನಲ್ ಎಸ್.ಎನ್.ರಾಜು ಕಿಡಿಕಾರಿದ್ದಾರೆ.  ರಮ್ಯಾ ಅವರು ಪಾಕಿಸ್ತಾನವನ್ನು ಪ್ರಶಂಸಿಸಿರುವ ಕ್ರಮವನ್ನು ಖಂಡಿಸಿರುವ ಸಂಸದ ಪ್ರಹ್ಲಾದ್ ಜೋಷಿ ಅವರು, ಕಾಂಗ್ರೆಸ್ನವರ ದೇಶಭಕ್ತಿ ಏನೆಂಬುದು ಇದರಿಂದ ತಿಳಿಯುತ್ತದೆ. ನೆರೆ ರಾಷ್ಟ್ರದ ಕುಯುಕ್ತಿಗೆ ಪರೋಕ್ಷ ಬೆಂಬಲವನ್ನು ಇವರು ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದಲ್ಲದೆ, ರಮ್ಯಾ ಅವರ ಈ ಹೇಳಿಕೆ ಅವರ ಪಕ್ಷದಲ್ಲಿಯೇ ಹಲವರು ವಿರೋಧ ವ್ಯಕ್ತಪಡಿಸಿರುವುದು ಕೂಡ ಕೇಳಿ ಬಂದಿದೆ.

► Follow us on –  Facebook / Twitter  / Google+

Facebook Comments

Sri Raghav

Admin